ಇಸ್ಲಾಮಾಬಾದ್ : ಚೀನದ ಹೆಚ್ಚುತ್ತಿರುವ ಶಾಮೀಲಾತಿಯು ಪಾಕ್ ಆರ್ಥಿಕತೆಗೆ ವಿನಾಶಕಾರಿಯಾಗಬಲ್ಲುದು ಎಂದು ಐಎಂಎಫ್ ಎಚ್ಚರಿಸಿದೆ.
ನಿನ್ನೆ ಮಂಗಳವಾರ ಪಾಕಿಸ್ಥಾನದ ಕರೆನ್ಸಿ ಶೇ.4ರಷ್ಟು ಪತನಗೊಂಡ ಹಿನ್ನೆಲೆಯಲ್ಲಿ ಅಲ್ಲಿನ ಸೆಂಟ್ರಲ್ ಬ್ಯಾಂಕ್ ದೇಶದ ಕರೆನ್ಸಿಯನ್ನು ಅಪಮೌಲ್ಯಗೊಳಿಸಿತ್ತು. ಸೆಂಟ್ರಲ್ ಬ್ಯಾಂಕಿನ ಈ ಕ್ರಮವನ್ನು ಅನುಸರಿಸಿ ಇಸ್ಲಾಮಾಬಾದ್ ತಾನು ಹಾಲಿ ಆರ್ಥಿಕ ಸಂಕಷ್ಟದಿಂದ ಪಾರಾಗಲು ಐಎಂಎಫ್ನಿಂದ ಇನ್ನೊಂದು ಸಾಲ ಪಡೆಯುವುದಾಗಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಐಎಂಎಫ್ ಇಸ್ಲಾಮಾಬಾದ್‌ಗೆ ಈ ಎಚ್ಚರಿಕೆಯನ್ನು ನೀಡಿದೆ.
ಐಎಂಎಫ್ ನಿಂದ ತುರ್ತು ಸಾಲ ಪಡೆಯುವುದಕ್ಕೆ ಒಲ್ಲದ ಮನಸ್ಸು ಹೊಂದಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಳೆದ ವಾರ “ದೇಶದ ಆಮದು – ರಫ್ತು ಪಾವತಿ ಸಂತುಲನೆ ಸಾಧಿಸಲು ಅನಿವಾರ್ಯವಾಗಿ ತಾನು ಐಎಂಎಫ್ ಗೆ ಮರಳಬೇಕಾದೀತು ಎಂದು ಹೇಳಿದ್ದರು.
ಇಸ್ಲಾಮಾಬಾದ್ ತನ್ನ ಆರ್ಥಿಕ ಸಂಕಷ್ಟ ನಿರ್ವಹಣೆಗಾಗಿ ಈಗಿನ್ನೂ ಔಪಚಾರಿಕವಾಗಿ ಐಎಂಎಫ್ ಸಂಪರ್ಕಿಸಿಲ್ಲ ಎಂದು ಐಎಂಎಫ್ ನ ಪ್ರಧಾನ ಅರ್ಥಶಾಸ್ತ್ರಜ್ಞ ಮೌರಿಸ್ ಆಬ್ಸ್ ಫೆಲ್ಡ್ ಹೇಳಿದ್ದಾರೆ.
ಪಾಕಿಸ್ಥಾನ ಜತೆಗಿನ ಸಿಲ್ಕ್ ರೋಡ್ ಯೋಜನೆಗೆ ಚೀನ ಇಸ್ಲಾಮಾಬಾದ್ ಗೆ ಅಪಾರ ಪ್ರಮಾಣದ ಸಾಲವನ್ನು ನೀಡಿದೆ. ಈಗ ಆ ಸಾಲದ ಮೇಲಿನ ಬಡ್ಡಿಯನ್ನು ಪಾವತಿಸಲು ಪಾಕಿಸ್ಥಾನ ಪದೇ ಪದೇ ಹೊಸ ಸಾಲವನ್ನು ಎತ್ತುವ ಅನಿವಾರ್ಯತೆಗೆ ಗುರಿಯಾಗಿದೆ.