Advertisement

ರಾಜ್ಯದಲ್ಲಿ ಹೆಚ್ಚುತ್ತಿದೆ ಸರ್ವಿಕಲ್‌ ವ್ಯಾಕ್ಸಿನೇಷನ್‌ ಟ್ರೆಂಡ್‌

09:54 AM Feb 05, 2020 | Lakshmi GovindaRaj |

ಬೆಂಗಳೂರು: ಗರ್ಭಕೋಶಕಂಠ ಕ್ಯಾನ್ಸರ್‌ ತಡೆ ಲಸಿಕೆ (ವ್ಯಾಕ್ಸಿನೇಷನ್‌) ಹಾಕಿಸುವ ಟ್ರೆಂಡ್‌ ಹೆಚ್ಚಾಗುತ್ತಿದ್ದು, ಬೆಂಗಳೂರಿನಲ್ಲಿಯೇ ನಿತ್ಯ 50 ರಿಂದ 60 ಹೆಣ್ಣು ಮಕ್ಕಳು ಖಾಸಗಿ ಆಸ್ಪತ್ರೆಗೆ ತೆರಳಿ ಸಾವಿರಾರು ರೂ. ನೀಡಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.

Advertisement

ಹೀಗಾಗಿ, ಸರ್ಕಾರದ ಮಟ್ಟದಲ್ಲಿಯೇ ಈ ಲಸಿಕಾ ಅಭಿಯಾನ ಕೈಗೊಳ್ಳಬೇಕೆಂಬ ಒತ್ತಾಯ ತಜ್ಞರು ಹಾಗೂ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಮಹಿಳೆಯರಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಗರ್ಭಕಂಠದ (ಸರ್ವಿಕಲ್‌) ಕ್ಯಾನ್ಸರ್‌ ಬಹುಪಾಲು ಹ್ಯೂಮನ್‌ ಪ್ಯಾಪಿಲೋಮ ವೈರಸ್‌ (ಎಚ್‌ಪಿವಿ) ಸೋಂಕಿನಿಂದ ಉಂಟಾಗುತ್ತದೆ.

ಇದಕ್ಕೆ ಎಚ್‌ಪಿವಿ ತಡೆ ಲಸಿಕೆ ನೀಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿಸಿ ಕ್ಯಾನ್ಸರ್‌ ಬರುವುದನ್ನು ಬಹುಪಾಲು ಕಡಿಮೆ ಮಾಡುತ್ತದೆ. ವಿಶ್ವಸಂಸ್ಥೆಯೂ ಈ ಲಸಿಕೆ ಕುರಿತು ಸಲಹೆ ನೀಡಿದ್ದು, ಮುಂದುವರಿದ ದೇಶಗಳಲ್ಲಿ ಇದು ಸಾರ್ವತ್ರಿಕ ಲಸಿಕೆ ಪಟ್ಟಿಗೆ ಸೇರ್ಪಡೆಯಾಗಿದೆ. ಅಲ್ಲದೇ ಕೆಲ ರಾಜ್ಯಗಳಲ್ಲಿ ಶಾಲಾ ಮಕ್ಕಳಿಗೂ ಈ ಲಸಿಕೆಯನ್ನು ನೀಡಲಾಗುತ್ತಿದೆ.

ಈ ಲಸಿಕೆಯು ರಾಜ್ಯಕ್ಕೆ ಮೂರು ವರ್ಷಗಳ ಹಿಂದೆಯೇ ಬಂದಿದ್ದರೂ, ಸದ್ಯ ಕ್ಯಾನ್ಸರ್‌ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಪ್ರಸ್ತುತ ಲಸಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ಸರ್ಕಾರ ಆರೋಗ್ಯ ಸಂಸ್ಥೆಗಳಲ್ಲಿ ಈ ಸೌಲಭ್ಯ ಇಲ್ಲದ ಕಾರಣ ಖಾಸಗಿ ಆಸ್ಪತ್ರೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.

8 ನಿಮಿಷಕ್ಕೆ ಒಬ್ಬ ಮಹಿಳೆ ಬಲಿ: ರಾಷ್ಟೀಯ ಕ್ಯಾನ್ಸರ್‌ ನಿಯಂತ್ರಣ ಹಾಗೂ ಸಂಶೋಧನಾ ಸಂಸ್ಥೆಯ ವರದಿ ಪ್ರಕಾರ ಗರ್ಭಕೋಶ ಕಂಠ ಕ್ಯಾನ್ಸರ್‌ ಭಾರತ 3ನೇ ಸ್ಥಾನದಲ್ಲಿದ್ದು, ವಾರ್ಷಿಕ 97 ಸಾವಿರ ಮಹಿಳೆಯ ರಲ್ಲಿ ಈ ಕ್ಯಾನ್ಸರ್‌ ಕಾಣಿಸಿ ಕೊಳ್ಳುತ್ತಿದ್ದು, ಪ್ರತಿ ಎಂಟು ನಿಮಿಷಕ್ಕೆ ಒಬ್ಬ ಮಹಿಳೆ ಇದಕ್ಕೆ ಬಲಿಯಾಗುತ್ತಿದ್ದಾರೆ. ವಾರ್ಷಿಕ 60 ಸಾವಿರಕ್ಕೂ ಹೆಚ್ಚು ಮಹಿಳೆಯರು ಸಾವಿಗೀಡಾಗುತ್ತಿದ್ದಾರೆ.

Advertisement

ಕರ್ನಾಟಕದಲ್ಲಿಯೂ ಪ್ರಸ್ತುತ ಎಂಟು ಸಾವಿರ ಮಂದಿ ಮಹಿಳೆಯರು ಗರ್ಭಕೋಶ ಕ್ಯಾನ್ಸರ್‌ನಿಂದ ಬಳಲು ತ್ತಿದ್ದಾರೆ. ಇದರಿಂದಲೇ ಅನೇಕರು ಮುಂಜಾಗ್ರತಾ ಕ್ರಮವಾಗಿ ಹೆಣ್ಣುಮಕ್ಕಳಿಗೆ ಗರ್ಭಕೋಶ ಕಂಠ ಕ್ಯಾನ್ಸರ್‌ ತಡೆ ಲಸಿಕೆ ಹಾಕಿಸಲು ಮುಂದಾಗುತ್ತಿದ್ದಾರೆ.

ಬೆಂಗಳೂರಿನ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಈ ಎಚ್‌ಪಿವಿ ಲಸಿಕೆಗೆ 2,500 ರೂ.ನಿಗದಿ ಮಾಡಿದ್ದು, ಮಾಸಿಕ 1500ಕ್ಕೂ ಹೆಚ್ಚು ಪೋಷಕರೇ ತಮ್ಮ ಹೆಣ್ಣು ಮಕ್ಕಳೊಂದಿಗೆ ಬಂದು ಈ ಲಸಿಕೆ ಹಾಕಿಸುತ್ತಿದ್ದಾರೆ. ಕನಿಷ್ಠ 14 ವರ್ಷ ಮೇಲ್ಪಟ್ಟು ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಮುಂಚೆಯೇ ಹೆಣ್ಣುಮಕ್ಕಳಿಗೆ ಎರಡು ಬಾರಿ ಈ ಲಸಿಕೆ ಹಾಕಿಸಬೇಕಿದೆ ಎನ್ನುತ್ತಾರೆ ವೈದ್ಯರು.

ಸರ್ಕಾರದಿಂದಲೇ ಲಸಿಕ ಆರಂಭಿಸಲು ಒತ್ತಾಯ: ವಿಶ್ವಸಂಸ್ಥೆಯು ಎಚ್‌ಪಿವಿ ತಡೆ ಲಸಿಕೆಯನ್ನು ಶಿಫಾರಸು ಮಾಡಿರುವುದರಿಂದ ಭಾರತದಲ್ಲಿಯೂ ಆರೋಗ್ಯ ಇಲಾಖೆಯು ತನ್ನ ಲಸಿಕಾ ಅಭಿಯಾನದಲ್ಲಿ ಈ ಲಸಿಕೆಯನ್ನು ಸೇರಿಸಿ ಹೆಣ್ಣು ಮಕ್ಕಳಿಗೆ ನೀಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಈ ಕುರಿತು ರಾಜ್ಯಗಳಿಂದ ಹಾಗೂ ಕ್ಯಾನ್ಸರ್‌ ತಜ್ಞರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಅಭಿಯಾನದಲ್ಲಿ ಈ ಲಸಿಕೆ ಸೇರಿಸುವುದರಿಂದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿಯೂ ಲಸಿಕೆ ಲಭ್ಯವಾಗಲಿದೆ. ಇದರಿಂದ ಖಾಸಗಿ ಆಸ್ಪತ್ರೆಯಲ್ಲಿ ಸಾವಿರಾರು ರೂ.ಶುಲ್ಕ ನೀಡುವುದು ತಪ್ಪಲಿದೆ. ಗ್ರಾಮೀಣ ಭಾಗದಲ್ಲಿಯೇ ಗರ್ಭಕೋಶಕಂಠ ಕ್ಯಾನ್ಸರ್‌ ಹೆಚ್ಚಿರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಲಸಿಕೆ ಸೇವೆ ಲಭ್ಯವಾಗಬೇಕು ಎನ್ನವುದು ಕ್ಯಾನ್ಸರ್‌ ತಜ್ಞರ ಅಭಿಪ್ರಾಯ.

ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಕೋಶಕಂಠ ಕ್ಯಾನ್ಸರ್‌ ತಡೆ ಲಸಿಕೆ ನೀಡುವ ಬಗ್ಗೆ ಕೇಂದ್ರದ ಬಳಿ ಪ್ರಸ್ತಾವನೆಯಿದೆ. ಈ ಬಾರಿ ನಡೆಯುವ ರಾಷ್ಟ್ರೀಯ ಕ್ಯಾನ್ಸರ್‌ ಮೇಳದಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಬಹುದು.
-ಡಾ. ರಂಗಸ್ವಾಮಿ, ಉಪ ನಿರ್ದೇಶಕ, ಆರೋಗ್ಯ ಇಲಾಖೆ

ಸರ್ವಿಕಲ್‌ ಕ್ಯಾನ್ಸರ್‌ ತಡೆ ಲಸಿಕೆಯು ಕ್ಯಾನ್ಸರ್‌ ತಡೆಗೆ ಉಪಯುಕ್ತವಾಗಿದ್ದು, ಸರ್ಕಾರ ಸೂಚಿಸಿದರೆ ಸರ್ಕಾರಿ ಕ್ಯಾನ್ಸರ್‌ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ.
-ಡಾ.ಸಿ.ರಾಮಚಂದ್ರ, ನಿರ್ದೇಶಕ, ಕಿದ್ವಾಯಿ ಗಂಥಿ ಸಂಸ್ಥೆ

ಸರ್ವಿಕಲ್‌ ವ್ಯಾಕ್ಸಿನೇಷನ್‌ಗೂ ಬೇಡಿಕೆ ಹೆಚ್ಚಾಗಿದೆ. ಲಸಿಕಾ ಅಭಿಯಾನದಲ್ಲಿ ಈ ಎಚ್‌ಪಿವಿ ವ್ಯಾಕ್ಸಿನೇಷನ್‌ ಸೇರಿಸಲು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಲಾಗಿದೆ.
-ಡಾ. ಎಸ್‌.ಪಿ. ಸೋಮಶೇಖರ್‌, ಕ್ಯಾನ್ಸರ್‌ ತಜ್ಞರು

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next