Advertisement

ಮಹಿಳೆಯರಲ್ಲಿ ಹೆಚ್ಚುತ್ತಿದೆ ದ್ವಿಚಕ್ರ ವಾಹನ ಕ್ರೇಜ್‌

02:32 PM Aug 17, 2018 | |

ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಲು ಮನೆಯಲ್ಲೇ ವಾಹನಗಳಿದ್ದರೆ ಚೆನ್ನ ಎಂಬುದು ಪ್ರಸ್ತುತ ಎಲ್ಲರ ಮನದಲ್ಲಿರುವ ಯೋಚನೆ. ಸಾರ್ವಜನಿಕ ವಾಹನಗಳಾದ ಬಸ್ಸು, ರಿಕ್ಷಾದಲ್ಲಿ ಹೋಗಬೇಕಾದರೆ ಅದು ಬರುವ ಸಮಯಕ್ಕಾಗಿ ಕಾಯಬೇಕು. ಇದರಿಂದ ನಮ್ಮ ಸಮಯ ಹಾಳು ಎನ್ನುವ ಕಾರಣಕ್ಕಾಗಿ ಮನೆಯಲ್ಲಿ ದ್ವಿಚಕ್ರ ವಾಹನಗಳಿಗೆ ಹೆಚ್ಚು ಪ್ರಾಶಸ್ತ್ಯ  ನೀಡುತ್ತಾರೆ.

Advertisement

ಪಾರ್ಕಿಂಗ್‌, ಹಣದ ಸಮಸ್ಯೆ ಇರುವುದರಿಂದ ಎಲ್ಲರಿಗೂ ಕಾರುಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ದ್ವಿಚಕ್ರ ವಾಹನ ಎಲ್ಲರ ಮೆಚ್ಚಿನ ವಾಹನವಾಗುತ್ತಿರುವುದಂತೂ ನಿಜ. ದ್ವಿಚಕ್ರ ವಾಹನಗಳೆಂದರೆ ದೂರ ಸಾಗುತ್ತಿದ್ದ ಮಹಿಳೆಯರು ಈಗ ದ್ವಿಚಕ್ರ ವಾಹನ ಓಡಿಸಲು ತುದಿಗಾಲಲ್ಲಿ ನಿಂತಿದ್ದಾರೆ ಎಂಬುದನ್ನು ದ್ವಿಚಕ್ರ ವಾಹನ ಮಾರಾಟ ಮಾಡುತ್ತಿರುವ ಸಂಸ್ಥೆಗಳ ವರದಿ ಬಹಿರಂಗಪಡಿಸುತ್ತಿದೆ. ತಮ್ಮ ಕೆಲಸಗಳಿಗೆ ವೇಗವಾಗಿ ಚಲಿಸಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಮಹಿಳೆಯರೂ ದ್ವಿಚಕ್ರ ವಾಹನದತ್ತ ಮುಖ ಮಾಡುತ್ತಿದ್ದಾರೆ.

ಮಹಿಳೆಯರು ದ್ವಿಚಕ್ರ ವಾಹನದ ಬಗ್ಗೆ ಹೆಚ್ಚು ಆಸಕ್ತರಾಗಿರುವುದನ್ನು ಅರಿತ ಬೈಕ್‌ ಕಂಪೆನಿಗಳು ಗೇರ್‌ಲೆಸ್‌ ಹಾಗೂ ಕಡಿಮೆ ಭಾರದ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ. ವರ್ಕಿಂಗ್‌ ವುಮೆನ್‌ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿ ಕಂಪೆನಿಗಳು ಸ್ಟೈಲಿಶ್‌ ಲಕ್ಷಣಗಳನ್ನು ಹೊಂದಿರುವ ವಾಹನಗಳನ್ನು ಮಹಿಳೆಯರ ಮುಂದಿಡುತ್ತಿದೆ. ಆಕರ್ಷಕ ಬಣ್ಣ, ಬ್ಯಾಲೆನ್ಸ್‌ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಹೆಣ್ಮಕ್ಕಳೂ ಕೂಡ ದ್ವಿಚಕ್ರ ವಾಹನ ಖರೀದಿಯತ್ತ ವಾಲುತ್ತಿದ್ದಾರೆ.

ವಿವಿಧ ಕಂಪೆನಿಗಳು
ಟಿವಿಸ್‌ ಕಂಪೆನಿ ಮಹಿಳೆಯರಿಗಾಗಿಯೇ ಪೆಪ್‌, ಟೀನ್ಸ್‌, ವೀಗೋ, ಸ್ಟೇಕ್‌, ಜುಪೀಟರ್‌, ಹೋಂಡಾ ಆಕ್ಟಿವಾ, ಡಿಯೋ, ಮಹೇಂದ್ರ ಕಂಪೆನಿ ಡ್ನೂಯೋ, ರೋಡಿಯೋ, ಬಜಾಜ್‌ ಕಂಪೆನಿ ಕ್ಟಿಸಲ್‌, ವೇವ್‌, ಸುಝುಕಿ ಕಂಪೆನಿ ಆಕ್ಸಿಸ್‌, ಸ್ಟೀಶ್‌, ಹೀರೊ ಪ್ರೇಶರ್‌, ಮೆಸ್ಟ್ರೋ, ವೆಸ್ಬಾ, ಯಮಹಾ ರೇ ಸೇರಿದಂತೆ ಬಹುತೇಕ ಕಂಪೆನಿಗಳು ಅಲ್ಪವಧಿಯಲ್ಲಿ ಹೊಸ ಲಕ್ಷಣಗಳೊಂದಿಗೆ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ. ವಾಹನದ ಗುಣಲಕ್ಷಣಗಳನ್ನು ಪರಿಶೀಲಿಸಿ ಖರೀದಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ.

ಗೇರ್‌ಲೆಸ್ಸ್ ವಾಹನಕ್ಕೆ ಮಹಿಳಾ ಗ್ರಾಹಕರೇ ಹೆಚ್ಚು
ಪ್ರಸ್ತುತ ಮಾರುಕಟ್ಟೆಯಲ್ಲಿ ಗೇರ್‌ಲೇಸ್‌ ವಾಹನಗಳನ್ನು ಕಂಡುಕೊಳ್ಳುವವರಲ್ಲಿ ಮಹಿಳಾ ಗ್ರಾಹಕರೇ ಹೆಚ್ಚಿದ್ದಾರೆ. ಗೇರ್‌ಲೆಸ್ಸ್ ವಾಹನಗಳನ್ನು ಬಳಸಲು ಆರಾಮದಾಯಕವಾಗಿ ಇರುವುದರಿಂದ ಮಹಿಳೆಯರು ಅದಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಸಾಮಾನ್ಯವಾಗಿ ಸೈಕಲ್‌ ಬ್ಯಾಲೆನ್ಸ್‌ ಎಲ್ಲರಿಗೂ ಇರುತ್ತದೆ. ಆ ಕಾರಣದಿಂದ ದ್ವಿಚಕ್ರ ವಾಹನ ಬಿಡುವುದು ಅಷ್ಟು ಕಷ್ಟವಾಗುವುದಿಲ್ಲ. ಪುರುಷರು ಹೆಚ್ಚಾಗಿ ಗೇರ್‌ ವಾಹನಗಳನ್ನು ಬಳಸುವುದರಿಂದ ಗೇರ್‌ ರಹಿತ ವಾಹನಗಳಿಗೆ ಮಹಿಳಾ ಮಣಿಗಳು ಸೋಲುತ್ತಿದ್ದಾರೆ.

Advertisement

ವರದಿಗಳ ಪ್ರಕಾರ 2016-17ರಲ್ಲಿ ಶೇ.30 ಇದ್ದ ಮಹಿಳಾ ಖರೀದಿದಾರರ ಸಂಖ್ಯೆ ಶೇ. 52ಕ್ಕೆ ಏರಿಕೆಯಾಗಿದೆ. ಹಾಗಿದ್ದಲ್ಲಿ ಮಹಿಳಾ ದ್ವಿಚಕ್ರ ವಾಹನ ಸವಾರರ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳಾ ವಾಹನ ಸವಾರರಲ್ಲಿ ನಾಲ್ಕು ಚಕ್ರದ ವಾಹನಗಳಿಗಿಂತ ದ್ವಿಚಕ್ರ ವಾಹನಗಳ ಮೋಹ ಹೆಚ್ಚುತ್ತಿದೆ. ಇತ್ತೀಚೆಗಷ್ಟೇ ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ದ್ವಿಚಕ್ರ ವಾಹನ ಓಡಿಸಲು ಅಲ್ಲಿನ ಸರಕಾರ ಪರವಾನಿಗೆ ನೀಡಿತ್ತು. ಇದರಿಂದ ಆ ದೇಶದಲ್ಲೂ ಮಹಿಳೆಯರು ದ್ವಿಚಕ್ರ ವಾಹನ ಸವಾರಿ ಮಾಡುವಂತಾಗಿದೆ. ಬೈಕ್‌ ಕಂಪೆನಿಗಳು ಅಲ್ಲಿಯೂ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಲು ಹಾತೊರೆಯುತ್ತಿವೆ.

ಅಲ್ಪವಧಿಯಲ್ಲಿ ಹೊಸ ವಾಹನಗಳು 
ಮಹಿಳೆಯರು ಹೆಚ್ಚಾಗಿ ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ ಎಂಬುದನ್ನು ಅರಿತುಕೊಂಡ ಕಂಪೆನಿಗಳು ಒಂದು ವಾಹನ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಕೆಲವೇ ಸಮಯದಲ್ಲಿ ಹೊಸ ಲಕ್ಷಣದೊಂದಿಗೆ ಮಗುದೊಂದು ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದ ದ್ವಿಚಕ್ರ ವಾಹನಗಳಿಗೆ ಇರುವ ಬೇಡಿಕೆ ತಿಳಿಯುತ್ತದೆ.

ಬುಲೆಟ್‌ ಮೇಲೆ ಮಹಿಳೆಯರ ಕಣ್ಣು
ಗೇರ್‌ ರಹಿತ ದ್ವಿಚಕ್ರ ವಾಹನಗಳಲ್ಲೇ ಓಡಾಡುತ್ತಿದ್ದ ಮಹಿಳೆಯರ ಕಣ್ಣು ಬುಲೆಟ್‌ ಮೇಲೆ ಬಿದ್ದಿದೆ. ಪ್ರಸ್ತುತ ಕೆಲವು ಮಹಿಳಾ ಮಣಿಗಳು ನಗರ ಪ್ರದೇಶದಲ್ಲಿ ಬುಲೆಟ್‌ ಸವಾರಿ ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಪುರುಷರಿಗಿಂತ ನಾವೇನೂ ಕಡಿಮೆ ಇಲ್ಲ ಎಂಬುದನ್ನು ಮಹಿಳೆಯರು ತೋರಿಸಿ ಕೊಡುತ್ತಿದ್ದಾರೆ. ಹಾಗಾಗಿ ಬುಲೆಟ್‌ ರೈಡ್‌ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಿದೆ.

 ಪ್ರಜ್ಞಾ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next