Advertisement
ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದು ಒಳಹರಿವು ಹೆಚ್ಚಳಕ್ಕೆ ಕಾರಣವಾಗಿದ್ದು, ಮೂರು ಜಿಲ್ಲೆಗಳ ಜನರನ್ನು ಕಾಡುತ್ತಿದ್ದ ಕುಡಿವ ನೀರಿನ ಸಮಸ್ಯೆಯನ್ನೂ ದೂರಮಾಡಿದೆ. 133 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯವುಳ್ಳ ತುಂಗಭದ್ರಾ ಜಲಾಶಯ ಕಳೆದ ಹಲವು ವರ್ಷಗಳಿಂದ ಸಮರ್ಪಕ ಮಳೆ ಕೊರತೆಯಿಂದಾಗಿ ಭರ್ತಿಯಾಗಿರಲಿಲ್ಲ. ಆದರೆ, ಪ್ರಸಕ್ತ ವರ್ಷ ಮೇ ತಿಂಗಳಲ್ಲೇ ಒಳಹರಿವು ಆರಂಭವಾಗಿದೆ.
ಈ ಬಾರಿ ಮುಂಗಾರು ಮಳೆ ಶೀಘ್ರವಾಗಿ ಆರಂಭಗೊಂಡಿದ್ದು, ಜಲಾನಯನ ಪ್ರದೇಶಗಳಾದ ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ದಾವಣಗೆರೆ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಪರಿಣಾಮ ಪ್ರತಿದಿನ ಸರಾಸರಿ 3 ಸಾವಿರ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಇದು ಮೂರು ಜಿಲ್ಲೆಗಳ ರೈತರಲ್ಲಿ ಸಂತಸ ಮೂಡಿಸಿದೆ. ಇನ್ನೊಂದು ತಿಂಗಳು ಮೂರು ಜಿಲ್ಲೆಗಳಲ್ಲಿ ಕುಡಿವ ನೀರಿಗೆ ಯಾವುದೇ ಸಮಸ್ಯೆ ಆಗಲಾರದು ಎನ್ನುತ್ತವೆ ತುಂಗಭದ್ರಾ ಆಡಳಿತ ಮಂಡಳಿಯ ಅಧಿಕಾರಿಗಳು. ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಇದೇ ರೀತಿ ಮುಂದುವರಿದಲ್ಲಿ ಪ್ರಸಕ್ತ ವರ್ಷ ಡೆಡ್‌ಸ್ಟೋರೇಜ್ ನೀರನ್ನು ಬಳಸುವ ಪ್ರಶ್ನೆಯೇ ಉದ್ಭವಿಸಲ್ಲ. ಕುಡಿವ ನೀರಿಗೂ ಜನರ ಪರದಾಟ ತಪ್ಪಲಿದೆ. ಆದರೆ, ಪ್ರಕೃತಿಯಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ, ಪ್ರಸಕ್ತ ವರ್ಷ ಮುಂಗಾರು ಮಳೆ ಒಳ್ಳೆಯ ಮುನ್ಸೂಚನೆ ನೀಡಿದ್ದು, ಕಳೆದ ನಾಲ್ಕು ವರ್ಷಗಳಿಂದ ಭರ್ತಿಯಾಗದ ತುಂಗಭದ್ರಾ ಜಲಾಶಯ ಈ ಬಾರಿಯಾದರೂ
ಭರ್ತಿಯಾಗಿ ಎರಡು ಬೆಳೆಗಳಿಗೆ ನೀರು ದೊರೆಯುವಂತಾಗಲಿ ಎಂಬುದು ಜಿಲ್ಲೆಯ ರೈತರ ಒತ್ತಾಸೆಯಾಗಿದೆ.
Related Articles
ಜಿಲ್ಲೆಯ ಎಮ್ಮಿಗನೂರು, ಇತರೆ ಗ್ರಾಮಗಳಿಗೆ ಕುಡಿವ ನೀರು ಪೂರೈಸುವಂತೆ ಆಗ್ರಹಿಸಿ, ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಗೆ ಮನವಿ ಪತ್ರಗಳನ್ನು ಸಲ್ಲಿಸಲಾಗಿತ್ತು. ಜಲಾಶಯದಲ್ಲಿ ಬಳಕೆ ಮಾಡಬಾರದಾಗಿದ್ದ ಡೆಡ್‌ಸ್ಟೋರೇಜ್ ನೀರನ್ನು ಬಳಸುವುದು ಅಧಿಕಾರಿಗಳಿಗೆ ಅನಿವಾರ್ಯವಾಗಿತ್ತು.
Advertisement
ಮೂರು ದಿನಗಳಿಂದ ಜಲಾಶಯಕ್ಕೆ ನೀರು ಹರಿದು ಬಂದಿರುವುದರಿಂದ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದು, ಕುಡಿಯುವ ಸಲುವಾಗಿ ಎಲ್‌ಎಲ್‌ಸಿ ಕಾಲುವೆಗೆ ಮೊದಲು 500 ಕ್ಯೂಸೆಕ್ ನೀರನ್ನು ಬಿಟ್ಟಿದ್ದ ಮಂಡಳಿಯ ಅಧಿಕಾರಿಗಳು ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ ಪುನಃ 700 ಕ್ಯೂಸೆಕ್ ಹೆಚ್ಚಿಸಿ, ಒಟ್ಟು 1200 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.
ವೆಂಕೋಬಿ ಸಂಗನಕಲ್ಲು