Advertisement

ಕರಾವಳಿ ಜಿಲ್ಲೆಯಲ್ಲಿ ಹೆಚ್ಚಿದ ತಾಪಮಾನ 

03:31 PM Nov 29, 2018 | |

ಕಾರವಾರ: ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ತಾಪಮಾನ ಹೆಚ್ಚಿದ್ದು, ಜನರು ವಿಪರೀತ ಬಿಸಿಲಿನಿಂದ ಬಸವಳಿದಿದ್ದಾರೆ. ಮೇ ತಿಂಗಳ ಬಿಸಿಲನ್ನು ಚಳಿಗಾಲದ ಬಿಸಿಲು ಮೀರಿಸಿದೆ. ಕಳೆದ ಸೋಮವಾರ 36.6 ಡಿಗ್ರಿ ಸೆಲ್ಸಿಯ್ಸ ತಾಪಮಾನ ದಾಖಲಾಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಭಾರತದ ಕರ್ನಾಟಕ ಕರಾವಳಿಯಲ್ಲಿ ಅತೀ ಹೆಚ್ಚು ಉಷ್ಣಾಂಶ ಕಳೆದ ಸೂಮವಾರ ದಾಖಲಾಗಿದೆ. ಒಂದು ಶತಮಾನದಿಂದ ಇಷ್ಟು ಪ್ರಮಾಣದ ಉಷ್ಣಾಂಶ ನವ್ಹೆಂಬರ್‌ ತಿಂಗಳ ಕೊನೆಯ ವಾರದಲ್ಲಿ ದಾಖಲಾದುದು ಇದೇ ಮೊದಲು ಎನ್ನಲಾಗಿದೆ.

Advertisement

ಪಶ್ಚಿಮ ಘಟ್ಟಗಳು ಹಾದು ಹೋಗಿರುವ ಕಾರವಾರದಲ್ಲಿ ಹಾಗೂ ಜಿಲ್ಲೆಯ ಕರಾವಳಿಯಲ್ಲಿ ನವೆಂಬರ್‌ನಲ್ಲಿ 20 ಡಿಗ್ರಿಯಿಂದ 33 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರುವುದು ಸಹಜ. ಆದರೆ 36.6 ಡಿಗ್ರಿ ಸೆಲ್ಸಿಯಸ್‌ ದಾಖಲಾದುದು ಆತಂಕಕಾರಿಯಾಗಿದೆ. ಮಂಗಳವಾರ ಮತ್ತು ಬುಧವಾರ 35 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇದರಿಂದ ಪರಿಸರ ಮತ್ತು ಜನಜೀವನ ಹಾಗೂ ಜಲಚರಗಳ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತಿದೆ ಎಂದು ಪರಿಸರವಾದಿ ಆರ್‌. ಜಗದೀಶ್‌ ಅಭಿಪ್ರಾಯ ಪಟ್ಟಿದ್ದಾರೆ. ಹೆದ್ದಾರಿ ಅಗಲೀಕರಣಕ್ಕೆ ಸಾವಿರಾರು ಮರಗಳ ಬಲಿ: ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಕಾಮಗಾರಿಗೆ ಸಾವಿರಾರು ಮರಗಳು ಕಾರವಾರದಿಂದ ಭಟ್ಕಳದ ತನಕ 145 ಕಿ.ಮೀ. ಉದ್ದಕ್ಕೂ ಕತ್ತರಿಸಲಾಗಿದೆ. ಇದರಿಂದ ಸಹಜವಾಗಿ ತಾಪಮಾನದಲ್ಲಿ ಏರಿಕೆಯಾಗಿದೆ. ನಗರೋತ್ಥಾನದಲ್ಲಿ ವಿವಿಧ ನಗರಗಳಲ್ಲಿನ ಸಿಮೆಂಟ್‌ ರಸ್ತೆಗಳು ಉಷ್ಣಾಂಶ ಹೆಚ್ಚಲು ಕಾರಣವಾಗಿದ್ದು, ಹೆದ್ದಾರಿ ಅಗಲೀಕರಣಕ್ಕೆ ಗುಡ್ಡುಗಳನ್ನು ಕತ್ತರಿಸಲು ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಇದು ಸಹ ಕರಾವಳಿಯಲ್ಲಿ ತಾಪಮಾನ ಹೆಚ್ಚಲು ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪರ್ಯಾಯ ಏನು?: ಹೆದ್ದಾರಿ ಅಗಲೀಕರಣದ ವೇಳೆ ಕತ್ತರಿಸಲಾದ ಮರಗಳಿಗೆ ಪರ್ಯಾಯವಾಗಿ ಚಿತ್ರದುರ್ಗದ ಚಳ್ಳಕೇರಿಯಲ್ಲಿ ಮರಗಳ ಬೆಳೆಸಲು ಅರಣ್ಯ ಇಲಾಖೆ ಮುಂದಾಗಿದೆ. ಇದು ಅರಣ್ಯದ ಬದಲು ಪರ್ಯಾಯ ಅರಣ್ಯೀಕರಣದ ಭಾಗವಾದರೂ, ಇಲ್ಲಿಯ ನಷ್ಟವನ್ನು ಇಲ್ಲಿಯೇ ತುಂಬಿಕೊಡಬೇಕು ಎಂಬುದು ಪರಿಸರವಾದಿಗಳ ಅಭಿಮತ. ಜಿಲ್ಲೆಯಲ್ಲಿ ಮರಗಳು ಇಲ್ಲದೇ ಇರುವ ಭೂಮಿಯಲ್ಲಿ ಪರ್ಯಾಯ ಅರಣ್ಯ ಬೆಳೆಸಬೇಕು. ಹೆದ್ದಾರಿಯಲ್ಲಿ ಕಡಿಯಲಾದ ವಿವಿಧ ಜಾತಿಯ ಮರಗಳನ್ನು ದೇವಕಾರು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಅರಣ್ಯ ಭೂಮಿಯಲ್ಲೇ ಬೆಳೆಸಬೇಕು ಎಂಬ ವಾದ ಪ್ರಬಲವಾಗಿ ಕೇಳಿ ಬರುತ್ತಿದೆ.

ಕೈಗಾ, ಕಾಳಿ ನದಿ ಅಣೆಕಟ್ಟು ಯೋಜನೆ ಹಾಗೂ ಸೀಬರ್ಡ್‌ ಯೋಜನೆಗೆ ನೀಡಲಾದ ಸಾವಿರಾರು ಹೆಕ್ಟೇರ್‌ ಅರಣ್ಯ ಭೂಮಿಗೆ ಪರ್ಯಾಯವಾಗಿ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಭೂಮಿಯಲ್ಲಿ ಮರ ಬೆಳೆಸುವ ಯೋಜನೆಯನ್ನು ರೈತರಿಗೆ ಕೊಟ್ಟರೆ, ಅಲ್ಲಿ ಹತ್ತು ವರ್ಷಗಳಲ್ಲಿ ಅರಣ್ಯ ಬೆಳೆದೀತು. ಮಳೆಯಾದರೂ ಆದೀತು ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ.

ಸಾಮಾಜಿಕ ಅರಣ್ಯ ಬೆಳೆಸುವ ಯೋಜನೆಯ ಕಡಕ್ಕಾಗಿ ಅನುಷ್ಠಾನವಾದರೆ ಅರಣ್ಯ ಪಾಲನೆ ಸಾಧ್ಯ ಎಂಬ ಮಾತು ಸಹ ಕೇಳಿ ಬರುತ್ತಿದೆ. ಇಲ್ಲದೇ ಹೋದರೆ ನದಿ ಹಾಗೂ ಕಡಲಿನ ತಾಪಮಾನ ಹೆಚ್ಚಿ ಜಲಚರ ಮತ್ತು ಅರಣ್ಯ ಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಕಾದಿದೆ. ಕಾಡಿನ ನಾಶವೇ ವನ್ಯ ಜೀವಿಗಳು ಮತ್ತು ಮಾನವ ವಸತಿ ನಡುವಿನ ಸಂಘರ್ಷಕ್ಕೆ ಕಾರಣ ಎನ್ನುತ್ತಿದ್ದಾರೆ ವನ್ಯಜೀವಿ ಪ್ರಿಯರು. ಅರಣ್ಯವನ್ನು ಉಳಿಸಿಕೊಳ್ಳುವ ಮೂಲಕ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೂ ತಡೆಯೊಡ್ಡಬೇಕಿದೆ. ಈ ಮೂಲಕ ಕರಾವಳಿಯಲ್ಲಿ ಏರುತ್ತಿರುವ ಉಷ್ಣಾಂಶಕ್ಕೂ ಸ್ವಲ್ಪ ತಡೆಯೊಡ್ಡಬಹುದು ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

Advertisement

ಕಾರವಾರದಲ್ಲಿ ಉಷ್ಣಾಂಶ ಹೆಚ್ಚಿದೆ. ಇದಕ್ಕೆ ಹೆದ್ದಾರಿಯಲ್ಲಿನ ಮರಗಳ ನಾಶವೂ ಒಂದು ಕಾರಣ. ಅರಣ್ಯ ಪ್ರೀತಿಯನ್ನು ಹೆಚ್ಚಿಸಬೇಕಿದೆ. ಕಾಡನ್ನು ಉಳಿಸಿಕೊಳ್ಳುವುದೊಂದೆ ಹಲವು ಸಮಸ್ಯೆಗಳಿಗೆ ಪರಿಹಾರ.
 ಗಿರೀಶ್‌ ನಾಯ್ಕ
ಪರಿಸರ ಪ್ರೇಮಿ ಕಾರವಾರ.

„ನಾಗರಾಜ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next