Advertisement

ಟೀಕಿಸಿದಷ್ಟು ಜನ ಬೆಂಬಲ ಹೆಚ್ಚಳ: ಶರಣು ಸಲಗರ

06:37 PM Apr 10, 2021 | Team Udayavani |

ಬಸವಕಲ್ಯಾಣ: ವಿರೋಧ ಪಕ್ಷಗಳು ಹಾಗೂ ತಮ್ಮ ವಿರೋಧಿಗಳು ತಮ್ಮ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡಿದಷ್ಟು ಜನ ಬೆಂಬಲ ಹೆಚ್ಚಾಗುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಶರಣು ಸಲಗರ ಹೇಳಿದರು. ಕ್ಷೇತ್ರದ ಕೋಹಿನೂರ, ಬಟಗೇರಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿದ ಸಲಗರ, ಮೊದಲು ಕ್ಷೇತ್ರದಲ್ಲದವ ಎಂದು ಅಬ್ಬರದ ಪ್ರಚಾರ ಮಾಡಲಾಯಿತು. ತಮ್ಮೂರು ಹಿರನಾಗಾಂವ ಎಂದ ತಕ್ಷಣ ಟಿಕೆಟ್‌ ಕುರಿತು ಇಲ್ಲದ ಆರೋಪ ಮಾಡಿದ್ರು. ಈಗಂತೂ ತಮ್ಮ ತಂದೆ ಕಾಂಗ್ರೆಸ್‌ಗೆ ಬೆಂಬಲಿಸಿದ್ದಾರೆ ಎಂದು ಆರೋಪ ಮಾಡಿರುವುದು ನೋಡಿದರೆ ಕ್ಷೇತ್ರದ ಮತ ಬಾಂಧವರು ತಮಗೆ ನೀಡಿರುವ ಅಭೂತಪೂರ್ವ ಬೆಂಬಲ ಸಾಬೀತುಪಡಿಸುತ್ತದೆ. ಅಲ್ಲದೇ ತಮ್ಮ ಬಗ್ಗೆ ಇರುವ ಭಯ, ಆತಂಕ ಎಷ್ಟಿದೆ ಎನ್ನುವುದನ್ನು ನಿರೂಪಿಸುತ್ತದೆ ಎಂದರು.

Advertisement

ಕಾಂಗ್ರೆಸ್‌ಗೆ ತಮ್ಮ ಮನೆ ನಾಯಿ ಕೂಡ ಹೋಗುವುದಿಲ್ಲ ಎಂದು ತಿರುಗೇಟು ನೀಡಿದ ಶರಣು ಸಲಗರ, ಮನೆ ಶಾಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೊರಗೆ ರಸ್ತೆ ಮೇಲೆ ನಿಂತಿರುವುದನ್ನೇ ಕಾಂಗ್ರೆಸ್ ಪಕ್ಷಕ್ಕೆ ಸೇರಲಾಗಿದೆ ಎನ್ನುವ ಮಟ್ಟಕ್ಕೆ ಇಳಿದಿದ್ದನ್ನು ನೋಡಿದರೆ ಯಾವ ಮಟ್ಟಿಗೆ ಹತಾಶೆಯಾಗಿದ್ದಾರೆ ಎನ್ನುವುದನ್ನು ಜನರೇ ಅರ್ಥ ಮಾಡಿಕೊಂಡು ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದರು.

ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಪಕ್ಷ ಟಿಕೆಟ್‌ ನೀಡಿದೆ. ನಾನಂತೂ ಕೆಳಹಂತದಿಂದ ಜನಸೇವೆ ಮಾಡುತ್ತಾ ಬಂದವನು. ಜನರ ಕಷ್ಟ ಏನೆಂಬುದನ್ನು
ಮನಃಪೂರ್ವಕವಾಗಿ ಬಲ್ಲೇ ಎಂದರು. ಈ ಹಿಂದೆ ಕ್ಷೇತ್ರದ ಶಾಸಕರಾದವರು 18 ಸಾವಿರ ಮತಗಳ ಭಾರಿ ಅಂತರದಿಂದ ಸೋತಿದ್ದರಿಂದ, ಜತೆಗೆ ಶಾಸಕರಾದ ಸಂದರ್ಭ ಹಾಗೂ ವರ್ಷ-6 ತಿಂಗಳುಗಟ್ಟಲೇ ನವದೆಹಲಿಯಲ್ಲಿ ಠಿಕಾಣಿ ಹೂಡಿದ್ದನ್ನು ಮತ್ತು ಕ್ಷೇತ್ರದ ಜನತೆಗೆ, ಅಭಿವೃದ್ಧಿಗಾಗಿ ತಾವು ಸದಾ ಮಿಡಿಯುತ್ತಿರುವುದನ್ನು ಕಂಡು ವರಿಷ್ಠರು ಟಿಕೆಟ್‌ ನೀಡಿದ್ದಾರೆ ಎಂದು ಪುನರುಚ್ಚರಿಸಿದರು.

ಈ ವೇಳೆ ಮುಖಂಡರಾದ ರಾಜಕುಮಾರ ಸಿರಗಾಪುರ, ರತಿಕಾಂತ ಕೋಹಿನೂರ, ಶಿವಶರಣಪ್ಪ ಸಂತಾಜಿ, ಗುರುಲಿಂಗಪ್ಪ ಸೈದಾಪುರೆ, ಜಾನೇಶ್ವರ
ಮೂಳೆ, ರೋಹಿದಾನ ಬಿರಾದಾರ, ವಿಜಯಕುಮಾರ ಖುಬಾ, ರಾಜು ಜಾನೆವಾಲೆ, ವಿಶ್ವನಾಥ ಜಾಧವ ಮುಂತಾದವರು ಇದ್ದರು.

ಶರಣಪ್ರಕಾಶ-ಪ್ರಿಯಾಂಕ್ ಖರ್ಗೆಗೆ ತಿರುಗೇಟು
ತಾವು ಜಿಪಂ ಅಧ್ಯಕ್ಷರ ಆಪ್ತ ಸಹಾಯನಾಗಿ ಜಿಪಂ ಲೂಟಿ ಮಾಡಿದ್ದೆ ಎಂದು ಮಾಜಿ ಸಚಿವರಾದ ಡಾ| ಶರಣಪ್ರಕಾಶ ಪಾಟೀಲ, ಪ್ರಿಯಾಂಕ್‌ ಖರ್ಗೆ ಟೀಕೆಗೆ ತಿರುಗೇಟು ನೀಡಿದ ಶರಣು ಸಲಗರ, ನಾನು ಕೆಳಹಂತದಿಂದ ಎಲ್ಲರ ಕೆಲಸ ಮಾಡುತ್ತ ಬಂದವನು. ಜನರ ಕಷ್ಟ ಸಮೀಪದಿಂದ ಅರಿತವನು. ನಿಮ್ಮಂತೆ ಯಾರ ಕೈಗೊಂಬೆಯಲ್ಲ. ನೀವು ಸ್ವಂತಿಕೆಯಿಂದ ಗೆದ್ದವರಲ್ಲ. ಡಾ| ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಚುನಾವಣೆಯಲ್ಲಿ ಸೋಲಲು ತಾವೇ ಕಾರಣರು ಎಂದು ನಿಮ್ಮದೇ ಪಕ್ಷದ ಸತ್ಯ ಶೋಧನಾ ಸಮಿತಿ ವರದಿ ನೀಡಿದ್ದನ್ನು ಮರೆತಿದ್ದೀರಾ? ತಮ್ಮ ಬಗ್ಗೆ ಇಲ್ಲ ಸಲ್ಲದ್ದು ಹಾಗೂ ಹಗುರವಾಗಿ ಮಾತನಾಡುವುದು ಸರಿಯಲ್ಲ. ನಾನು ಮಾತನಾಡಿದರೆ ತಮ್ಮದೇನು ಉಳಿಯುವುದಿಲ್ಲ ಎಂದು ಗುಡುಗಿದರು.

Advertisement

12ಕ್ಕೆ ಬಸವ ಕಲ್ಯಾಣಕ್ಷೇತ್ರಕ್ಕೆ ಮುಖ್ಯಮಂತ್ರಿ
ಶರಣು ಸಲಗರ ಪರ ಮತಯಾಚಿಸಲು ಏ.12ರಂದು ಮುಖ್ಯಮಂತ್ರಿ ಯಡಿಯೂರಪ್ಪ ಬಸವಕಲ್ಯಾಣ ಕ್ಷೇತ್ರಕ್ಕೆ ಆಗಮಿಸುವರು. ಮುಖ್ಯಮಂತ್ರಿ ಮೂರು ಕಡೆ ಬಹಿರಂಗ ಪ್ರಚಾರ ಸಭೆ ನಡೆಸುವರು. ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿರುವ ಸಿಎಂ ಆಗಮನಕ್ಕೆ ಕ್ಷೇತ್ರದ ಜನರು ಕಾತುರದಿಂದ ಕಾಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next