ಉಡುಪಿ: ಕರಾವಳಿ ಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ ಕೃಷಿಕರಿಗೆ ಕಾಟ ಕೊಡುತ್ತಿರುವ ಬಸವನ ಹುಳು ಬಾಧೆ ಮತ್ತೆ ಮುಂದುವರಿದಿದೆ. ಕಳೆದ ವರ್ಷವು ಪರ್ಕಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದ ಈ ಹುಳು ಈ ವರ್ಷ ದೊಡ್ಡ ಗಾತ್ರಗಳಲ್ಲಿ ಹೆಚ್ಚು ಕಂಡು ಬಂದಿದೆ. ಮನೆಗಳ ಅಂಗಳ, ಕಾಂಪೌಂಡ್, ಗೋಡೆ, ಹೂವಿನ ತೋಟ, ಹಣ್ಣಿನ ಗಿಡಗಳು, ಒರಗಡೆ ಒಣಗಿದ ಹಾಕಿದ ಬಟ್ಟೆಗಳ ಮೇಲೆ, ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನಗಳಲ್ಲಿ ಹೆಚ್ಚು ಕಂಡು ಬರುತ್ತಿದೆ.
ಜೈಂಟ್ ಆಫ್ರಿಕನ್ ಸ್ಟೈಲ್
ಬಸವನ ಹುಳು, ಶಂಖದ ಹುಳು ಎಂದು ಕರೆಯಲ್ಪಡುವ ಇದು ಜೈಂಟ್ ಆಫ್ರಿಕನ್ ಸ್ಟೈಲ್ ದ್ವಿಲಿಂಗಗಳಾಗಿದ್ದು, 50 ರಿಂದ 200ರವರೆಗೆ ಹಳದಿ ಬಣ್ಣದಲ್ಲಿ ಭೂಮಿಯ ಮೇಲ್ಪದರದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳಿಂದ ವಾರದ ಒಳಗೆ ಮರಿಗಳು ಹೊರಗೆ ಬರುತ್ತವೆ. ಜೀವಿತಾವಧಿ 3ರಿಂದ 5 ವರ್ಷವಾಗಿರುತ್ತದೆ ಎನ್ನುತ್ತಾರೆ ತಜ್ಞರು.
ಗಿಡಗಳಿಗೆ ಹಾನಿ
ನಿಶಾಚರಿಗಳಾದ ಇವುಗಳು ಹಗಲಿನಲ್ಲಿ ಮರೆಯಲ್ಲಿ ಅಡಗಿ ಕುಳಿತುಕೊಂಡಿರುತ್ತವೆ. ರಾತ್ರಿ ವೇಳೆ ಚಟುವಟಿಕೆಯಿಂದ ಸಂಚರಿಸುತ್ತದೆ. ಅಡಕೆ ಮರ, ಪಪ್ಪಾಯಿ, ಎಳೆಯ ಎಲೆ, ಕಾಂಡ, ಹೂಗಳನ್ನು ಇವು ಭಕ್ಷಿಸುತ್ತವೆ. ಮನೆಯ ಆವರಣದಲ್ಲಿರುವ ಹೂವು ಮತ್ತು ಗಾರ್ಡನ್ ಗಿಡಗಳನ್ನು ಇವುಗಳು ಹಾನಿ ಮಾಡುತ್ತಿವೆ ಎಂದು ಸ್ಥಳೀಯರು ದೂರುತ್ತಾರೆ.
ಎಲ್ಲಿ ನೋಡಿದರೂ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕಿರಿಕಿರಿಯಾಗುತ್ತಿದೆ. ಮನೆಯ ಕಿಟಕಿ ಸಂದಿಗಳ ಮೂಲಕ ಒಳಗಡೆ ಗೋಡೆ, ಶೌಚಾಲಯಗಳಲ್ಲಿಯೂ ಇವುಗಳು ಪ್ರವೇಶಿಸಿ ಅಡಗಿ ಕುಳಿತುಕೊಂಡಿರುತ್ತವೆ ಎಂದು ನಾಗರಿಕರು ಹೇಳುತ್ತಾರೆ.
ಸುಣ್ಣ, ಬ್ಲೀಚಿಂಗ್ ಪುಡಿ ಹಾಕಿ
ಪರಿಸರದಲ್ಲಿ ಬಸವನ ಹುಳು ಹೆಚ್ಚಿದ್ದಲ್ಲಿ ಬಲಿತ ಪಪ್ಪಾಯಿ ಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಸಂಜೆ 6ರಿಂದ 7ಗಂಟೆ ಸಮಯದಲ್ಲಿಡಬೇಕು. ಇದಕ್ಕೆ ಎಲ್ಲ ಗಾತ್ರದ, ಎಲ್ಲ ವಯಸ್ಸಿನ ಬಸವನ ಹುಳುಗಳು ಆಕರ್ಷಿತವಾಗುತ್ತವೆ. ಈ ಸಮಯದಲ್ಲಿ ಎಲ್ಲವನ್ನು ಒಟ್ಟು ಮಾಡಿ ಅದಕ್ಕೆ ಸುಣ್ಣ, ಬ್ಲೀಚಿಂಗ್ ಪುಡಿ ಧೂಳೀಕರಿಸಿ ನಾಶಪಡಿಸಬಹುದು. ಅಥವಾ ಇತರೆ ಕೀಟನಾಶಕಗಳಿಂದಲೂ ಇದನ್ನು ನಿಯಂತ್ರಿಸಬಹುದಾಗಿದ್ದು, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಅಥವಾ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. –
ನಿದೀಶ್ ಹೊಳ್ಳ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ