Advertisement

Rubber: ರಬ್ಬರ್‌ ಧಾರಣೆ ಏರಿಕೆ; ಬೆಳೆಗಾರರಲ್ಲಿ ಮಂದಹಾಸ

01:12 AM Jan 31, 2024 | Team Udayavani |

ಮಂಗಳೂರು: ಕೇಂದ್ರ ಸರಕಾರವು ಹೊಸ ರಬ್ಬರ್‌ ಕಾಯಿದೆಯ ಜಾರಿಗೆ ಸಜ್ಜಾಗುತ್ತಿರುವಂತೆಯೇ ರಬ್ಬರ್‌ ಧಾರಣೆ ಕೆಲವು ತಿಂಗಳುಗಳಿಂದ ಏರುಹಾದಿಯಲ್ಲಿರುವುದು ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ.

Advertisement

ದಶಕದ ಹಿಂದೆ ಇದ್ದ ಕಿಲೋಗೆ 250 ರೂ.ಗಳನ್ನು ಇನ್ನೂ ತಲುಪಿಲ್ಲವಾದರೂ 130-140 ರೂ. ಆಸುಪಾಸಿನಲ್ಲಿದ್ದ ಧಾರಣೆ 160 ರೂ.ಗಳಿಗೆ ತಲುಪಿದೆ.

ಭಾರತೀಯ ರಬ್ಬರ್‌ ಮಂಡಳಿ ಅಧಿಕಾರಿಗಳ ಮಾಹಿತಿ ಪ್ರಕಾರ ಇಂಡೋನೇಷ್ಯಾ, ಮಲೇಷ್ಯಾ ಮುಂತಾದೆಡೆ ರಬ್ಬರ್‌ ಉತ್ಪಾದನೆ ಕುಸಿದಿದೆ. ದೇಶೀಯ ರಬ್ಬರ್‌ಗಿಂತಲೂ ಕಡಿಮೆ ದರಕ್ಕೆ ಈ ದೇಶಗಳಿಂದ ಬರುತ್ತಿದ್ದ ಬ್ಲ್ಯಾಕ್‌ ರಬ್ಬರ್‌ ಪ್ರಮಾಣ ಕಡಿಮೆ ಯಾಗಿದೆ. ಹಾಗಾಗಿ ದೇಶಿ ರಬ್ಬರ್‌ ದರದಲ್ಲಿ ತುಸು ಏರಿಕೆ ಕಂಡು ಬಂದಿದೆ.

ಬೆಂಬಲ ಬೆಲೆ ಬೇಕೇಬೇಕು

ಒಂದೆಡೆ ದರ ಕುಸಿತ, ಇನ್ನೊಂದೆಡೆ ರಬ್ಬರ್‌ ಟ್ಯಾಪರ್‌ಗಳ ಕೂಲಿ ಹೆಚ್ಚಳ ಕೃಷಿಕರಿಗೆ ಸಮಸ್ಯೆ ತಂದೊಡ್ಡಿತ್ತು. ಒಂದು ಹಂತದಲ್ಲಿ ಅಡಿಕೆ ಮರ ಕಡಿದು ರಬ್ಬರ್‌ ಹಾಕುತ್ತಿದ್ದರೆ ಈಗ ರಬ್ಬರ್‌ ಕಡಿದು ಅಡಿಕೆ ಗಿಡ ಹಾಕುವ ಸ್ಥಿತಿ ಬಂದಿದೆ.

Advertisement

ರಬ್ಬರ್‌ ಉತ್ಪಾದನೆಗೆ ಕನಿಷ್ಠ ವೆಚ್ಚ 160 ರೂ. ಎನ್ನುವುದು 5 ವರ್ಷಗಳಷ್ಟು ಹಳೆಯ ಲೆಕ್ಕಾಚಾರ. ಈಗ ವೆಚ್ಚ ಹೆಚ್ಚಿದ್ದು ಕನಿಷ್ಠ 240 ರೂ. ಆದರೂ ನಿಗದಿಪಡಿಸಬೇಕು, ಬೆಂಬಲ ಬೆಲೆ ನೀಡಿದರಷ್ಟೇ ರಬ್ಬರ್‌ ತೋಟ ಉಳಿಯ  ಬಹುದು ಎನ್ನುವುದು ಬೆಳೆಗಾರರ ಬೇಡಿಕೆ.

ರಾಜ್ಯ ಸರಕಾರ ನೆರವಾಗಲಿ
ಕೇರಳದಲ್ಲಿ ಅಲ್ಲಿನ ಸರಕಾರ 5 ವರ್ಷಗಳಿಂದ ರಬ್ಬರ್‌ಗೆ ಬೆಂಬಲ ಬೆಲೆ ನೀಡುತ್ತಿದೆ. ಆದರೆ ಕರ್ನಾಟಕ ಇನ್ನೂ ಯಾವ ತೀರ್ಮಾನವನ್ನೂ ಕೈಗೊಂಡಿಲ್ಲ. ಅಲ್ಲಿ 170 ರೂ. ಬೆಂಬಲ ಬೆಲೆ ನಿಗದಿ ಪಡಿಸಿದ್ದು, ಅದಕ್ಕಿಂತ ದರ ಕಡಿಮೆ ಯಾದಲ್ಲಿ ವ್ಯತ್ಯಾಸ ಮೊತ್ತವನ್ನು ಸರಕಾರ ನೀಡುತ್ತದೆ. ಕರ್ನಾಟಕದಲ್ಲೂ ಇದೇ ಮಾದರಿಯನ್ನು ಅನುಸರಿಸಬೇಕು ಎನ್ನುತ್ತಾರೆ ಅಖೀಲ ಕರ್ನಾಟಕ ರಬ್ಬರ್‌ ಬೆಳೆಗಾರರ ಸಂಘದ ಅಧ್ಯಕ್ಷ ಪಕಳಕುಂಜ ಗೋಪಾಲಕೃಷ್ಣ ಭಟ್‌.

ಕೃಷಿ ಅಥವಾ ತೋಟಗಾರಿಕಾ ಇಲಾಖೆಯ ಅಧೀನಕ್ಕೆ ರಬ್ಬರ್‌ ಇಲ್ಲದೆ ಕೇಂದ್ರ ವಾಣಿಜ್ಯ ಸಚಿವಾಲಯದ ಅಧೀನದಲ್ಲಿ ಬರುವ ಕಾರಣ ರಾಜ್ಯ ಸರಕಾರ ಇದರ ಗೋಜಿಗೆ ಹೋಗು ವುದಿಲ್ಲ. ವಾಸ್ತವವಾಗಿ ರಬ್ಬರ್‌ ಬೆಳೆಗಾರರ ವಹಿವಾಟಿನಲ್ಲಿ, ಖರೀದಿಯಲ್ಲಿ ಸಂಗ್ರಹವಾಗುವ ಜಿಎಸ್‌ಟಿ ರಾಜ್ಯ ಸರಕಾರಕ್ಕೂ ಸಿಗುತ್ತದೆ, ಆದರೆ ಅದನ್ನು ಪರಿಗಣಿಸುತ್ತಿಲ್ಲ ಎನ್ನುತ್ತಾರೆ ಅವರು.

ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next