Advertisement
ಶನಿವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಷ್ಟದಲ್ಲಿದ್ದ ಕಾರ್ಖಾನೆಯನ್ನು ಬಂಡವಾಳ ತೊಡಗಿಸಿ ಅಭಿವೃದ್ಧಿಗಾಗಿ ಪ್ರಯತ್ನಿಸಲಾಗುತ್ತಿತ್ತು. ಮೂರು ಬಾರಿ ಕೇಂದ್ರ ಸಚಿವರನ್ನು ಕಾರ್ಖಾನೆಗೆ ಭೇಟಿ ಮಾಡಿಸಿದ್ದರೂ ಸಹ ಅಭಿವೃದ್ಧಿಯಾಗಿರಲಿಲ್ಲ. ಇದರಿಂದಾಗಿ ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಯತ್ನಿಸಿ ಜಾಗತಿಕ ಟೆಂಡರ್ ಮೂಲಕ ಖಾಸಗೀಕರಣ ಪ್ರಕ್ರಿಯೆಗೆ ಯತ್ನಿಸಿತ್ತು. ಆದರೆ ಖಾಸಗಿಯವರು ಕಾರ್ಖಾನೆ ಕೊಳ್ಳಲು ಮುಂದೆ ಬರದ ಹಿನ್ನೆಲೆಯಲ್ಲಿ ಖಾಸಗೀಕರಣ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ ಎಂದರು.
Related Articles
Advertisement
3 ದಶಕಗಳ ಕಾಲ ವಿಶ್ವವಿಖ್ಯಾತಿ ಪಡೆದು ಉತ್ಪಾದನೆಯಲ್ಲಿ ಪಾರಮ್ಯ ಮೆರೆದಿದ್ದ ಕಾರ್ಖಾನೆ ಒಂದು ಕಾಲದಲ್ಲಿ 12 ಸಾವಿರಕ್ಕೂ ಹೆಚ್ಚು ಕಾಯಂ ಕಾರ್ಮಿಕರು ಮತ್ತು 4 ಸಾವಿರ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ನೀಡಿತ್ತು. 1980 ರ ನಂತರ 50-60 ವರ್ಷ ಹಳೆಯದಾದ ಯಂತ್ರೋಪಕರಣಗಳು ಮತ್ತು ಹಳೆಯ ತಾಂತ್ರಿಕತೆಯಿಂದಾಗಿ ನಿರಂತರ ನಷ್ಟ ಅನುಭವಿಸುತ್ತಾ ಬಂದ ಪರಿಣಾಮ ರಾಜ್ಯ ಸರ್ಕಾರ ಕಾರ್ಖಾನೆಯನ್ನು ಕೇಂದ್ರ ಸರ್ಕಾರದ ಒಡೆತನದ ಭಾರತೀಯ ಉಕ್ಕು ಪ್ರಾಕಾರಕ್ಕೆ ಪುಕ್ಕಟೆಯಾಗಿ ವಹಿಸಿಕೊಡಲಾಗಿತ್ತು. ಆದರೆ, ಉಕ್ಕು ಪ್ರಾಧಿಕಾರ ಬಂಡವಾಳ ತೊಡಗಿಸದೇ ಇರುವುದರಿಂದ ಕಾರ್ಖಾನೆ ಇಂದು ನಷ್ಟದಲ್ಲಿದೆ ಎಂದರು.
ಹಲವಾರು ವರ್ಷಗಳಿಂದ ವಾರ್ಷಿಕ 100 ಕೋಟಿ ರೂ. ನಷ್ಟ ಅನುಭವಿಸುತ್ತಿದ್ದ ಕಾರ್ಖಾನೆ ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಪ್ರಯತ್ನದಿಂದಾಗಿ ನಷ್ಟ 35 ಕೋಟಿ ರೂ.ಗೆ ತಲುಪಿದೆ. ಕಾರ್ಖಾನೆಯನ್ನು ಖಾಸಗೀಕರಣ ಮುಂತಾದ ವ್ಯರ್ಥ ಪ್ರಯತ್ನಗಳಲ್ಲಿ ಕಾಲಹರಣ ಮಾಡದೇ ಕೇಂದ್ರ ಸರ್ಕಾರ ಸುಮಾರು ಕನಿಷ್ಠ 2 ಸಾವಿರ ಕೋಟಿ ರೂ. ಬಂಡವಾಳ ತೊಡಗಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾರ್ಖಾನೆಯ ಚಿತ್ರಣವೇ ಬದಲಾಗಿ ಮತ್ತೆ ಗತವೈಭವವನ್ನು ಕಾಣಬಹುದಾಗಿದೆ ಎಂದರು.
ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣ ಪ್ರಕ್ರಿಯೆಯನ್ನು ಆರಂಭಿಸಿದಾಗ ಸಂಸದ ಬಿ.ವೈ. ರಾಘವೇಂದ್ರ ಅವರು ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸಲು ಬಿಡುವುದಿಲ್ಲ ಎಂದು ಮೂರ್ನಾಲ್ಕು ಬಾರಿ ಸಂಘದ ಪದಾಧಿಕಾರಿಗಳನ್ನು ದೆಹಲಿಗೆ ಕರೆದುಕೊಂಡು ಹೋಗಿ ಕೇಂದ್ರ ಸಚಿವರನ್ನು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಭೇಟಿ ಮಾಡಿಸಿ ಬಂಡವಾಳ ಹೂಡಬೇಕೆಂದು ಒತ್ತಡ ಹೇರಿದ್ದರು ಎಂದ ಅವರು, ಖಾಸಗೀಕರಣ ಪ್ರಕ್ರಿಯೆ ಹಿಂಪಡೆದಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಿಸುತ್ತೇವೆ. ಹಾಗೂ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಮತ್ತು ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಬಿ.ವೈ. ರಾಘವೇಂದ್ರ ಅವರಿಗೆ ಅಭಿನಂದಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಕಾರ್ಖಾನೆ ಕಾರ್ಮಿಕರ ಸಂಘದ ಪದಾಕಾರಿಗಳಾದ ಬಿ.ಸಿ. ಶೈಲಶ್ರೀ, ಯು.ಎ. ಬಸಂತಕುಮಾರ್, ಕೆ.ಆರ್. ಮನು, ಎಸ್. ಮೋಹನ್, ಸದಸ್ಯರಾದ ಕೆ.ಎಂ. ಮಂಜುನಾಥ್, ಪಿ. ಕುಮಾರಸ್ವಾಮಿ, ಡಿ. ಸುನಿಲ್ ಕುಮಾರ್ ಉಪಸ್ಥಿತರಿದ್ದರು.