ಬೆಂಗಳೂರು: ಬಿಬಿಎಂಪಿ ಆಯುಕ್ತರ ಅಧಿಕಾರ ವಿಕೇಂದ್ರೀಕರಣ ಮಾಡುವ ಉದ್ದೇಶದಿಂದ ಬಿಬಿಎಂಪಿಯ ವಿಶೇಷ (ಅಪರ) ಆಯುಕ್ತರಿಗೆ ತಲಾ ಎರಡು ವಲಯಗಳ ಸಂಪೂರ್ಣ ಅಧಿಕಾರ ಜವಾಬ್ದಾರಿ ನೀಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೆ.6ರಂದು ಬಿಬಿಎಂಪಿಯ ಆಡಳಿತ ವಿಕೇಂದ್ರೀಕರಣ ಹಾಗೂ ಜನರ ಸಮಸ್ಯೆಗಳು ವಲಯ ಮಟ್ಟದಲ್ಲೇ ಪರಿಹರಿಸುವುದಕ್ಕೆ ಕ್ರಮಕೈಗೊಳ್ಳುವ ಉದ್ದೇಶದಿಂದ ಪಾಲಿಕೆಯ ಎಂಟು ವಲಯಗಳಿಗೆ ನಾಲ್ಕು ಮಂದಿ ವಿಶೇಷ ಆಯುಕ್ತರನ್ನು ನೇಮಿಸಿ, ತಲಾ ಎರಡು ವಲಯಗಳ ಜವಾಬ್ದಾರಿ ನೀಡುವಂತೆ ಸೂಚನೆ ನೀಡಿದರು.
ಇದರಂತೆ ಸೋಮವಾರ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕ್ರಮವಹಿಸುವುದಕ್ಕೆ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಲಯಗಳಿದ್ದು, ಎಲ್ಲ ವಲಯಗಳ ಮೇಲುಸ್ತುವಾರಿಯನ್ನು ಬಿಬಿಎಂಪಿಯ ಆಯುಕ್ತರೇ ನಿರ್ವಹಿಸುತ್ತಿರುವುದರಿಂದ ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ ಸಮಸ್ಯೆಯಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ವಿಶೇಷ ಆಯುಕ್ತರಿಗೆ ತಲಾ ಎರಡು ವಲಯಗಳ ಅಧಿಕಾರವಹಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಕೆಎಂಸಿ ಕಾಯ್ದೆಯಡಿ ವಿಶೇಷ ಆಯುಕ್ತರು ಎರಡು ವಲಯಗಳಿಗೆ ಸಂಬಂಧಿಸಿದ ಕಾಮಗಾರಿ, ಘನತ್ಯಾಜ್ಯ ನಿರ್ವಹಣೆ, ತೋಟಗಾರಿಕೆ, ರಸ್ತೆ ಗುಂಡಿ, ತ್ಯಾಜ್ಯ ವಿಲೇವಾರಿ ವಿದ್ಯುತ್, ಆರೋಗ್ಯ, ಶಿಕ್ಷಣ ಹಾಗೂ ಕಟ್ಟಡ ನಿರ್ಮಾಣ ಸೇರಿದಂತೆ ವಲಯಗಳಿಗೆ ಸಂಬಂಧಿಸಿದ ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಬಹುದಾಗಿದೆ. ಇದರೊಂದಿಗೆ ಪಾಲಿಕೆ ಆಯವ್ಯಯ, ವಿಶೇಷ ಅನುದಾನ, ಆಯವ್ಯಯದ ಯೋಜನೆಗಳಿಗೆ ಅನುಮೋದನೆ, ವಿಶೇಷ ಆಯುಕ್ತರಿಗೆ ಹಂಚಿಕೆಯಾಗದ ವಿಷಯ ಮತ್ತು ಶಾಖೆ ಜವಾಬ್ದಾರಿ, ಪಾಲಿಕೆ ಕೌನ್ಸಿಲ್ ಸಭೆ ಮತ್ತು ಸ್ಥಾಯಿ ಸಮಿತಿಗೆ ಪ್ರಸ್ತಾವನೆ ಮಂಡಿಸುವ ಅಧಿಕಾರಿ ನಿರ್ವಹಣೆ ಹಾಗೂ ಸರ್ಕಾರದ ಹಂತದ ಸಭೆ, ಸಮಿತಿಗಳಲ್ಲಿ ಪಾಲಿಕೆಯಿಂದ ಆಯುಕ್ತರು ಪ್ರತಿನಿಧಿಸುವ ಹೊಣೆಗಾರಿಕೆ ನೀಡಲಾಗಿದೆ.
ವಿಶೇಷ ಆಯುಕ್ತರಿಗೆ ಆಸ್ತಿ ತೆರಿಗೆ ಸಂಗ್ರಹ, ಕಂದಾಯ ಹಾಗೂ ಜಾಹೀರಾತು ಸೇರಿದಂತೆ ಬಿಬಿಎಂಪಿಯ ಆದಾಯ ಹೆಚ್ಚಿಸುವ ಜವಾಬ್ದಾರಿಯನ್ನೂ ನೀಡಲಾಗಿದೆ. ಈಗ ಎಲ್ಲ ಕಡತಗಳಿಗೂ ಆಯುಕ್ತರೇ ಸಹಿ ಮಾಡುತ್ತಿದ್ದು, ಇದರಿಂದ ಕಾಮಗಾರಿಗಳು ವೇಗ ಪಡೆದುಕೊಳ್ಳುತ್ತಿಲ್ಲ ಹಾಗೂ ಆಡಳಿತಾತ್ಮಕ ನಿರ್ವಹಣೆ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ, ಈಗ ವಿಶೇಷ ಆಯುಕ್ತರಿಗೆ ವಲಯಗಳ ಮೇಲುಸ್ತುವಾರಿ ನೀಡಿರುವುದರಿಂದ ಬಿಬಿಎಂಪಿ ಆಯುಕ್ತರಿಗೆ ಹೊರೆ ಕಡಿಮೆ ಆಗುವುದರ ಜತೆಗೆ ಸಮಸ್ಯೆಗಳಿಗೆ ಶ್ರೀಘ್ರ ಪರಿಹಾರ ಸಿಗಲಿದೆ. ವಿಶೇಷ ಆಯುಕ್ತರು ಈಗ ಇರುವ ಜವಾಬ್ದಾರಿಯ ಜತೆಗೆ ವಲಯಗಳ ಜವಾಬ್ದಾರಿಯನ್ನೂ ನಿರ್ವಹಿಸಲಿದ್ದಾರೆ.
ವಲಯ ವಿಶೇಷ ಆಯುಕ್ತರು
-ಪೂರ್ವ ಮತ್ತು ಯಲಹಂಕ ಡಾ.ರವಿಕುಮಾರ್ ಸುರಪುರ (ಯೋಜನೆ ವಿಭಾಗ)
-ದಕ್ಷಿಣ ಮತ್ತು ಆರ್.ಆರ್.ನಗರ ಎಂ.ಲೋಕೇಶ್ (ಹಣಕಾಸು)
-ಪಶ್ವಿಮ ಮತ್ತು ದಾಸರಹಳ್ಳಿ ಅನ್ಬುಕುಮಾರ್ (ಆಡಳಿತ)
-ಮಹಾದೇವಪುರ ಮತ್ತು ಬೊಮ್ಮನಹಳ್ಳಿ ಡಿ.ರಂದೀಪ್ (ಘನತ್ಯಾಜ್ಯ ನಿರ್ವಹಣೆ)