Advertisement

600 ಕ್ವಿಂಟಾಲ್‌ ಬಿತ್ತನೆ ಬೀಜ ಮಾರಾಟ; ಕೃಷಿ ಚಟುವಟಿಕೆಯಲ್ಲಿ ಹೆಚ್ಚಿದ ಆಸಕ್ತಿ

11:15 PM May 13, 2020 | Sriram |

ಕೋಟ: ಮುಂಗಾರು ಹಂಗಾಮು ಹತ್ತಿರವಾಗುತ್ತಿದ್ದಂತೆ ರೈತರು ಬಿತ್ತನೆಗೆ ಪೂರಕ ತಯಾರಿಗಳನ್ನು ನಡೆಸುತ್ತಿದ್ದು ಬೀಜ ಖರೀದಿಗಾಗಿ ಕೃಷಿ ಕೇಂದ್ರಕ್ಕೆ ಲಗ್ಗೆ ಇಡುತ್ತಿದ್ದಾರೆ. ಲಾಕ್‌ಡೌನ್‌ ಕಾರಣಕ್ಕೆ ಊರಿಗಿಳಿದವರು ಗದ್ದೆ ಕಡೆ ಮುಖ ಮಾಡಿದ್ದು ಕೃಷಿಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಹಡಿಲು ಹಾಕಿದ ಹೆಕ್ಟೇರ್‌ಗಟ್ಟಲೆ ಭೂಮಿ ಈ ಬಾರಿ ಹಸಿರಾಗುವ ಲಕ್ಷಣ ಗೋಚರಿಸುತ್ತಿದ್ದು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಜಾಸ್ತಿಯಾಗುವ ಲಕ್ಷಣಗಳಿವೆ.

Advertisement

ದಾಖಲೆಯ ಬೀಜ ಮಾರಾಟ
ಉಡುಪಿ ಜಿಲ್ಲೆಯ ಹಿಂದಿನ ಋತುವಿನಲ್ಲಿ ಸುಮಾರು 42 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯಲಾಗುತಿತ್ತು ಹಾಗೂ ಮೇ 10ರ ಅನಂತರ ಬೀಜ ಖರೀದಿ ಮುಂತಾದ ಚಟುವಟಿಕೆ ಆರಂಭವಾಗುತಿತ್ತು. ಆದರೆ ಈ ಬಾರಿ ಮೇ 6ರೊಳಗೆ ದಾಖಲೆ ಪ್ರಮಾಣದಲ್ಲಿ 600 ಕ್ವಿಂಟಾಲ್‌ ಎಂ.ಒ.4 ಭತ್ತದ ಬೀಜ ಮಾರಾಟವಾಗಿದೆ ಹಾಗೂ ಪ್ರಸ್ತುತ ಕೋಟ ಹೋಬಳಿಯಲ್ಲಿ 350ಕ್ವಿಂಟಾಲ್‌, ಬ್ರಹ್ಮಾವರ 290ಕ್ವಿಂಟಾಲ್‌, ಬೈಂದೂರು 330ಕ್ವಿಂಟಾಲ್‌, ವಂಡ್ಸೆ 200ಕ್ವಿಂಟಾಲ್‌, ಕಾರ್ಕಳ 60ಕ್ವಿಂಟಾಲ್‌, ಅಜೆಕಾರು 60ಕ್ವಿಂಟಾಲ್‌ ಬೀಜ ಮಾರಾಟವಾಗಿದ್ದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಾರಾಟವಾದ ಬೀಜದ ಪ್ರಮಾಣ ಸಾಕಷ್ಟು ಅಧಿಕವಿದೆ.

ಜಿಲ್ಲೆಯಲ್ಲಿ ಕಳೆದ ಮೇ 1ಕ್ಕೆ 124 ಕ್ವಿಂಟಾಲ್‌ ಬೀಜ ಮಾರಾಟವಾಗಿದ್ದು . ಈ ಬಾರಿ ಜಿಲ್ಲೆಯಲ್ಲಿ 500 ಕ್ವಿಂಟಾಲ್‌ ಬೀಜ ಮಾರಾಟವಾಗಿದೆ.

15 ವರ್ಷಗಳ‌ ಅನಂತರ ಕೃಷಿಯಲ್ಲಿ
15 ವರ್ಷಗಳಿಂದ ಬೆಂಗಳೂರಿನಲ್ಲಿ ಹೊಟೇಲ್‌ ಕೆಲಸ ಮಾಡುತ್ತಿದ್ದು ವರ್ಷದಲ್ಲಿ ಐದಾರು ಬಾರಿ ಒಂದೆರಡು ದಿನದ ಮಟ್ಟಿಗೆ ಊರಿಗೆ ಬಂದು ಹೋಗುತ್ತಿದ್ದೆವು. ಹೀಗಾಗಿ ಕೃಷಿ ಕೆಲಸವೆಲ್ಲ ಮರೆತೇ ಹೋಗಿತ್ತು. ಈ ಬಾರಿ ಲಾಕ್‌ಡೌನ್‌ನಿಂದ ನಾಲ್ಕು ಮಂದಿ ಅಣ್ಣ-ತಮ್ಮಂದಿರು ಊರಿಗೆ ಬಂದಿದ್ದು ಗದ್ದಗೆ ಗೊಬ್ಬರ, ಸುಡುಮಣ್ಣು ಹಾಕಿ ತರಗೆಲೆ ಸಂಗ್ರಸಿದ್ದೇವೆ. 5 ವರ್ಷಗಳಿಂದ ಹಡಿಲು ಹಾಕಿದ 1ಎಕ್ರೆ ಜಮೀನು ಮತ್ತೆ ನಾಟಿ ಮಾಡಲು ನಿರ್ಧರಿಸಿದ್ದೇವೆ.
-ಬಾಬು ಮರಕಾಲ ಕೋಟ, ಕೃಷಿಕ

ಆಸಕ್ತಿ ಹೆಚ್ಚಿದೆ
ಈ ಹಿಂದೆ ಮೇ 10ರ ಅನಂತರ ಬಿತ್ತನೆ ಬೀಜದ ಮಾರಾಟ ಆರಂಭವಾಗುತಿತ್ತು. ಆದರೆ ಈ ಬಾರಿ ಮೇ 6ರೊಳಗೆ 600ಕ್ವಿಂಟಾಲ್‌ ಬೀಜ ಮಾರಾಟವಾಗಿದ್ದು ಸಾಕಷ್ಟು ವಿಚಾರಣೆ ಬರುತ್ತಿದೆ ಹಾಗೂ ಕೃಷಿ ಚಟುವಟಿಕೆಯ ಕುರಿತು ಹೆಚ್ಚು-ಹೆಚ್ಚು ವಿಚಾರಣೆಗಳು ಬರುತ್ತಿವೆ. ಇದೊಂದು ಉತ್ತಮ ಬೆಳವಣಿಗೆಯಾಗಿದ್ದು ರೈತರ ಉತ್ಸಾಹ ಗಮನಿಸಿದರೆ ಹಡವು ಹಾಕಿದ, ಗೇಣಿ ಕೊಟ್ಟ ಭೂಮಿಯಲ್ಲೂ ಭತ್ತ ಬೆಳೆಯುವ ಲಕ್ಷಣವಿದೆ.
-ಕೆಂಪೇಗೌಡ, ಜಂಟಿ ಕೃಷಿ ಆಯುಕ್ತರು
ಉಡುಪಿ ಜಿಲ್ಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next