Advertisement

ಕಿಂಡಿ ಅಣೆಕಟ್ಟಿಗೆ ಹೆಚ್ಚಿದೆ ಪ್ರೋತ್ಸಾಹ: ಗ್ರಾಮೀಣರಲ್ಲಿ ಉತ್ಸಾಹ

03:58 PM Dec 02, 2017 | Team Udayavani |

ಪುತ್ತೂರು: ಅಂತರ್ಜಲ ಮಟ್ಟ ಕುಸಿಯುತ್ತಿರುವ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ರೈತವರ್ಗ ಅನುಸರಿಸಿಕೊಂಡು ಬಂದಿರುವ ಕಟ್ಟ ಕಟ್ಟಿ ನೀರು ನಿಲ್ಲಿಸುವ ವ್ಯವಸ್ಥೆ ಉಪಯುಕ್ತವಾಗಿ ಮುನ್ನಲೆಗೆ ಬರುತ್ತಿವೆ.

Advertisement

ನೀರಿನ ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕಿಂಡಿ ಅಣೆಕಟ್ಟುಗಳನ್ನು ಬಳಸಿಕೊಳ್ಳಲು ಅಗತ್ಯ ಕ್ರಮಕೈಗೊಳ್ಳುವಂತೆ ತಾ.ಪಂ. ಆಡಳಿತ ಗ್ರಾ.ಪಂ.ಗಳಿಗೆ ಸ್ಪಷ್ಟ ಸೂಚನೆ ನೀಡಿದ್ದು, ಗ್ರಾಮಗಳಲ್ಲಿರುವ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸುವ ಕಾಮಗಾರಿಗಳನ್ನು ಡಿ. 10 ರೊಳಗೆ ಪೂರ್ಣಗೊಳಿಸುವಂತೆ ತಿಳಿಸಿದೆ.

ಏನು ಪ್ರಯೋಜನ
ಗ್ರಾಮಾಂತರ ಭಾಗದಲ್ಲಿ ಸಣ್ಣ ತೋಡುಗಳು, ತೊರೆ, ಕಣಿ, ಹೊಳೆಗಳು ಹರಿಯುತ್ತವೆ. ಡಿಸೆಂಬರ್‌, ಜನವರಿ ತನಕ
ಇಲ್ಲಿ ಹರಿಯುವ ನೀರಿಗೆ ತಡೆಕಟ್ಟಿದರೆ ನೀರು ಶೇಖರಣೆಗೊಂಡು ಭೂಮಿಯಲ್ಲಿ ಇಂಗುವ ಜತೆಗೆ ಸುತ್ತಲಿನ ಪರಿಸರದಲ್ಲಿರುವ ತೋಟಗಳಿಗೂ ಪ್ರಯೋಜನವಾಗುತ್ತದೆ. ಮುಂದೆ ಕೆಲವು ಸಮಯ ನೀರಿಲ್ಲದಿದ್ದರೂ ಈ ಶೇಖರಣೆಗೊಂಡ ನೀರಿನ ಲಾಭ ಸುತ್ತಲಿನವರಿಗೆ ಸಿಗುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಭೀತಾಗಿದೆ.

ತಾಲೂಕಿನಲ್ಲಿ ಯಶಸ್ಸು
ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಹಿಂದೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಹೊಳೆಗಳಿಗೆ ನಿರ್ಮಿಸಲಾದ ಕಿಂಡಿ ಅಣೆಕಟ್ಟುಗಳು ನಿರುಪಯೋಗಿಯಾಗುತ್ತಿದ್ದವು. ಇವುಗಳಿಗೆ ಕೆಲವು ವರ್ಷಗಳಿಂದ ಸ್ಥಳೀಯಾಡಳಿತ, ಸಾರ್ವಜನಿಕರು, ಸಂಘಟನೆಗಳ ಸಹಕಾರದಿಂದ ಹಲಗೆ ಅಳವಡಿಸಿ ನೀರು ನಿಲ್ಲಿಸುವ ಕೆಲಸ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಉದ್ಯೋಗ ಖಾತರಿ ಯೋಜನೆಯೂ ಪೂರಕವಾಗಿ ಬೆಂಬಲ ನೀಡುತ್ತಿದೆ.

ಸಣ್ಣ ನೀರಾವರಿ ಇಲಾಖೆ ಇದ್ದಾಗ ಮಾಡಿದ ಅಂದಾಜಿನಂತೆ ವಿವಿಧ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ 59ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟುಗಳಿವೆ. ಪಾಣಾಜೆ, ಬಲ್ನಾಡು, ಆರ್ಯಾಪು, ಕಬಕ, ಒಳಮೊಗ್ರು, ಕೆದಿಲ, ಇಡ್ಕಿದು, ಸವಣೂರು, ಬಡಗನ್ನೂರು, ಬೆಟ್ಟಂಪಾಡಿ, ಅರಿಯಡ್ಕ ಮೊದಲಾದ ಗ್ರಾಮಗಳಲ್ಲಿ ಹಲಗೆ ಅಳವಡಿಸಲು ಸಾಧ್ಯವಾಗುವ ಕಿಂಡಿ ಅಣೆಕಟ್ಟುಗಳಿವೆ. ಕೆಲವು ಗ್ರಾಮಗಳಲ್ಲಿ 3-4 ಕಿಂಡಿ ಅಣೆಕಟ್ಟುಗಳೂ ಇವೆ. ಖಾಸಗಿ ಜಾಗಗಳಲ್ಲಿ ಹಲಗೆ ಅಳವಡಿಸಿ ನೀರು ನಿಲ್ಲಿಸಬಹುದಾದ ಲೆಕ್ಕಕ್ಕೆ ಸಿಗದ 50 ಕ್ಕೂ ಹೆಚ್ಚು ಸಣ್ಣ ಅಣೆಕಟ್ಟುಗಳಿವೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

Advertisement

ಎದುರ್ಕಳ ಮಾದರಿ
ಗ್ರಾ.ಪಂ. ವ್ಯಾಪ್ತಿಯಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಿ ಜಲಸಂಪನ್ಮೂಲ ಬಳಸಿಕೊಳ್ಳುವಲ್ಲಿ ಯಶಸ್ವಿ ಪ್ರಯೋಗ ಕೈಗೊಂಡ ಪಿಡಿಒ ಗೋಕುಲ್‌ ದಾಸ್‌ ಭಕ್ತ ಅವರು, ಎದುರ್ಕಳ ಕಿಂಡಿ ಅಣೆಕಟ್ಟನ್ನು ಮಾದರಿಯಾಗಿರಿಸಿ ಹಲವು ಅಣೆಕಟ್ಟುಗಳು ರೂಪುಗೊಂಡಿವೆ ಎನ್ನುತ್ತಾರೆ.

ಮಾಮೂಲು
ಅಡಿಕೆ ಸೇರಿದಂತೆ ತೋಟಗಳ ಬೆಳೆಯನ್ನು ಬೆಳೆಯುವ ರೈತರು ಹಿಂದಿನಿಂದಲೇ ಇಂತಹ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ತೋಟದ ಮಧ್ಯೆ ಇರುವ ಕಣಿಗಳಲ್ಲಿ ತಡೆಯೊಡ್ಡಿ ನೀರು ನಿಲ್ಲಿಸುವ ಯೋಜನೆಯಿಂದ ಪ್ರಯೋಜನ ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದ್ದರಿಂದ ಬೆಳೆಗಾರರಿಗೆ ಇದು ಸಾಂಪ್ರದಾಯಿಕ ಕ್ರಮ.

ಗ್ರಾ.ಪಂ.ಗಳಿಗೆ ಸೂಚನೆ
ತಾಲೂಕು ವ್ಯಾಪ್ತಿಯಲ್ಲಿ 59ಕ್ಕೂ ಮಿಕ್ಕಿ ಕಿಂಡಿ ಅಣೆಕಟ್ಟುಗಳು ಕಳೆದ ಅವಧಿಯಲ್ಲಿ ಪೂರ್ಣಗೊಂಡಿವೆ. ಈಗಾಗಲೇ 18 ಕಿಂಡಿ ಅಣೆಕಟ್ಟುಗಳಿಗೆ ಕಟ್ಟ ಅಳವಡಿಸುವ ಕಾರ್ಯ ನಡೆಸಲಾಗಿದೆ.ಉದ್ಯೋಗ ಖಾತರಿ ಯೋಜನೆಯಲ್ಲಿ ಕಿಂಡಿ ಅಣೆಕಟ್ಟು ಅಳವಡಿಕೆಗೆ 5 ಲಕ್ಷ ರೂ. ತನಕ ಪಡೆಯುವ ಅವಕಾಶವಿದೆ. ಜನವರಿ ಅವಧಿಯಲ್ಲಿ ಕಿಂಡಿ ಅಣೆಕಟ್ಟುಗಳಲ್ಲಿ ನೀರು ನಿಲ್ಲುವ ವ್ಯವಸ್ಥೆ ಆಗಲಿದೆ.
–  ಜಗದೀಶ್‌ ಎಸ್‌., ಕಾರ್ಯ
   ನಿರ್ವಹಣಾಧಿಕಾರಿ, ಪುತ್ತೂರು ತಾ.ಪಂ.

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next