ಧಾರವಾಡ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ಹಾಲು ಉತ್ಪಾದನೆಗೆ ಇನ್ನಷ್ಟು ಪ್ರೋತ್ಸಾಹ ನೀಡುವುದಾಗಿ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಹೇಳಿದರು.
ಆಲೂರು ವೆಂಕಟರಾವ್ ಭವನದಲ್ಲಿ ಆಯೋಜಿಸಿದ್ದ ವಿಶ್ವಹಾಲು ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅÊರು ಮಾತನಾಡಿದರು. ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಹಾಲು ಪ್ರಮುಖ ಪಾತ್ರ ವಹಿಸುತ್ತಿದೆ. ಹಾಲಿನ ಉತ್ಪಾದನೆ ಹೆಚ್ಚಿಸಲು ಧಾರವಾಡ ಹಾಲು ಒಕ್ಕೂಟವು ರೈತರಿಗೆ ಮತ್ತು ಹಾಲು ಉತ್ಪಾದಕರಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ವಿಶ್ವ ಹಾಲು ದಿನಾಚರಣೆಯು 2001ರಿಂದ ಆಚರಣೆಗೆ ಬಂದಿದ್ದು, ಹಾಲಿನಲ್ಲಿರುವ ಎಲ್ಲ ಸೂಕ್ಷ್ಮ ಪೋಷಕಾಂಶಗಳ ಮಾಹಿತಿ ಪ್ರಚುರ ಪಡಿಸಲು ವಿಶ್ವ ಹಾಲು ದಿನ ಆಚರಿಸಲಾಗುತ್ತಿದೆ ಎಂದರು.
ಅಪೌಷ್ಠಿಕತೆ ಹೋಗಲಾಡಿಸಲು ಆರಂಭದಲ್ಲಿ ಅಂಗನವಾಡಿ ಮಕ್ಕಳಿಗೆ ಮಾತ್ರ ಹಾಲನ್ನು ವಿತರಿಸಲಾಗುತ್ತಿತ್ತು. ರಾಜ್ಯದ ಮಕ್ಕಳಲ್ಲಿಯ ವಿಶೇಷ ಪೋಷಕಾಂಶಗಳ ಕೊರತೆ ಪರಿಗಣಿಸಿ ರಾಜ್ಯ ಸರ್ಕಾರವು ಕ್ಷೀರಭಾಗ್ಯ ಯೋಜನೆ ರೂಪಿಸಿದೆ. ಹಾಲಿನಲ್ಲಿರುವ ಸೂಕ್ಷ್ಮ ಪೋಷಕಾಂಶಗಳನ್ನು ಸೇವಿಸುವುದರಿಂದ ಮಕ್ಕಳು ಆರೋಗ್ಯವಾಗಿ ಮತ್ತು ಸದೃಢವಾಗಿ ಬೆಳೆಯುತ್ತಾರೆ ಎಂದು ಹೇಳಿದರು.
ಹಾಲು ಒಕ್ಕೂಟದ ನಿರ್ದೇಶಕರಾದ ಎನ್.ಎಸ್. ಅಸೂಟಿ, ಶಂಕರ ಮುಗದ, ಗೀತಾ ಸುರೇಶ ಮರಿಲಿಂಗಣ್ಣವರ ಮಾತನಾಡಿದರು. ಡಾ| ಸುಷ್ಮಾ ರಾಮನಗೌಡರ ಹಾಗೂ ಡಾ| ಪ್ರವೀಣಕುಮಾರ ಪ್ರಭು ಟಿ. ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿಗೆ ನಂದಿನಿ ಬಾದಾಮ ಹಾಲು, ಶಾಲಾ ಪಠ್ಯ ಪರಿಕರಗಳನ್ನು ವಿತರಿಸಲಾಯಿತು. ರೈತರ ಜೀವನಾಡಿ ಮತ್ತು ಗ್ರಾಹಕರ ನೆಚ್ಚಿನ ನಂದಿನಿ ವಿಷಯ ಕುರಿತು ಸಿಎಸ್‌ಐ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಿರುನಾಟಕ ಪ್ರಸ್ತುತಪಡಿಸಿದರು.
ಹಾಲು ಒಕ್ಕೂಟದ ಶೇಖರಣೆ ಹಾಗೂ ತಾಂತ್ರಿಕ ವಿಭಾಗದ ಉಪವ್ಯವಸ್ಥಾಪಕ ಡಾ| ವೀರೇಶ ತರಲಿ ಸ್ವಾಗತಿಸಿದರು. ವ್ಯವಸ್ಥಾಪಕ ಡಾ|ಎಸ್.ಎಸ್. ಆಲೂರ ಪ್ರಾಸ್ತಾವಿಕ ಮಾತನಾಡಿದರು. ಎನ್.ಎಸ್. ಕೋಡಿಯಾಲಮಠ ನಿರೂಪಿಸಿದರು.ಆರ್.ಎಸ್. ಸಿದ್ಧರಾಜು ವಂದಿಸಿದರು.