Advertisement

ಮಕ್ಕಳಲ್ಲಿ ಹೆಚ್ಚುತ್ತಿದೆ ಅಭದ್ರತಾ ಭಾವನೆ

01:51 PM Jan 16, 2021 | Team Udayavani |

ಒಂದು ಮನೆಯಲ್ಲಿ 10- 15 ಮಕ್ಕಳು ಜತೆಯಾಗಿ ಬೆಳೆದವರು ನಾವು. ನನ್ನದು, ನಿನ್ನದು ಎನ್ನುವ ಬೇಧಭಾವವೇ ಇರಲಿಲ್ಲ. ಆದರೆ ನನ್ನ ಮಗ ಬೇರೆ
ಮಕ್ಕಳೊಂದಿಗೆ ಕೂಡುವುದಿಲ್ಲ, ಆಟಿಕೆಗಳನ್ನು  ಹಂಚಿಕೊಳ್ಳುವುದಿಲ್ಲ, ನಾನು ಬೇರೆ ಮಕ್ಕಳ ಮೇಲೆ ಪ್ರೀತಿ ತೋರಿಸಿದರೆ ತಾನು ಏನೋ ಕಳೆದುಕೊಂಡೆ
ಅನ್ನೋ ರೀತಿ ವರ್ತಿಸುತ್ತಾನೆ ಎಂದು ಗೆಳತಿಯೊಬ್ಬಳು ಕರೆ ಮಾಡಿ ಹೇಳಿದಾಗ ನನ್ನ ಮಗಳತ್ತ ನೋಡಿದೆ.

Advertisement

ಆದರೆ ಅವಳು ಪಕ್ಕದ ಮನೆಯ ಮಗುವಿಗೆ ತನ್ನ ಆಟಿಕೆಗಳನ್ನು ತೋರಿಸಿ ಖುಷಿಯಿಂದ ಆಡುತ್ತಿದ್ದಳು. ಇದು ನನ್ನ ಒಬ್ಬ ಗೆಳತಿಯ ಸಮಸ್ಯೆಯಲ್ಲ.
ಹಲವಾರು ಮನೆಗಳಿಗೆ ಯಾವುದೋ ಕಾರಣ ನಿಮಿತ್ತ ಹೋದಾಗ ಕಂಡುಕೊಂಡ ಸತ್ಯ. ಮಕ್ಕಳನ್ನು ಬೆಳೆಸುವಲ್ಲಿ ನಾವು ಎಲ್ಲೋ ದಾರಿ ತಪ್ಪಿದ್ದೇವೆ. ಅವರ ಬೇಕು ಬೇಡಗಳಿಗೆ ಆದ್ಯತೆ ನೀಡಿ ಮುದ್ದು ಮಾಡಿ ಅವರು ಸಂಪೂರ್ಣವಾಗಿ ನಮ್ಮನ್ನೇ ಅವಲಂಬಿಸುವ ಹಾಗೇ ಮಾಡಿದ್ದೇವೆ ಎಂದರೆ ತಪ್ಪಾಗಲಾರದು.

ಮೊನ್ನೆ ಒಂದು ಮನೆಗೆ ಹೋಗಿದ್ದೆ. ಸಹೋದರ, ಸಹೋದರಿಯ ಮಕ್ಕಳಿಬ್ಬರು ಆಟವಾಡುತ್ತಿದ್ದರು. ಅದರಲ್ಲಿ ಹಿರಿಯವಳು ತಂಗಿಯನ್ನು ತಿರಸ್ಕರಿಸುವುದು, ಅವಳಿಗೆ ಕೊಟ್ಟದ್ದನ್ನು ಕಿತ್ತುಕೊಳ್ಳುವುದು, ಕೊಡದೇ ಹೋದರೆ ರಂಪಾಟ ಮಾಡಿದ್ದನ್ನು ನೋಡಿದೆ. ಇಲ್ಲಿ ನಾವಿಬ್ಬರು ಒಂದೇ ಮನೆಯ ಮಕ್ಕಳು ಎನ್ನುವ ಬದಲು ನಾನು ಈ ಮನೆಯವಳು, ನೀನು ಬೇರೆಯವಳು ಎನ್ನುವ ಯಾರೂ ಯೋಚಿಸಲಾಗದ ಸೂಕ್ಷ್ಮ ವಿಷಯವೊಂದು ನನ್ನ ಗಮನಕ್ಕೆ ಬಂದಿತ್ತು. ಇಂಥ
ಸಣ್ಣಪುಟ್ಟ ತಪ್ಪುಗಳನ್ನು ಬಾಲ್ಯದಲ್ಲೇ ಮಾಡುವಾಗ ನಾವು ತಿದ್ದಿ ತೀಡಬೇಕು. ಇಲ್ಲವಾದರೆ ಮುಂದೆ ಹುಟ್ಟುವಾಗ ಅಣ್ಣತಮ್ಮಂದಿರು, ಬೆಳೆಯುತ್ತ
ದಾಯಾದಿಗಳು ಎನ್ನುವ ಮಾತು ನಮ್ಮ ಮನೆಯಲ್ಲೇ ಸತ್ಯವಾದೀತು.

ಇದನ್ನೂ ಓದಿ:ಕಹಿ ಮೆಂತ್ಯೆಯ ಸವಿ: ಆರೋಗ್ಯಕ್ಕೆ ಬಹು ಉಪಕಾರಿ

ಕುಟುಂಬದ ಪರಿಕಲ್ಪನೆ ಈಗ ಬದಲಾಗಿದೆ. ಸಣ್ಣ ಮನೆ, ಆ ಮನೆಗೆ ಒಂದೋ ಎರಡೋ ಮಕ್ಕಳು. ಅವರ ಪ್ರತಿಯೊಂದು ಬೇಡಿಕೆಗಳನ್ನು ಈಡೇರಿಸುವ
ಹೆತ್ತವರು. ಹೀಗಾಗಿ ಅವರಿಗೆ ಕುಟುಂಬದ ಮಹತ್ವವೇ ತಿಳಿದಿಲ್ಲ. ಜತೆಗೆ ತಾವು ಯಾವುದಕ್ಕೆ ಆದ್ಯತೆ ನೀಡಬೇಕು ಎನ್ನುವ ಯೋಚನೆ ಕೂಡ ಆ ಮಕ್ಕಳಲ್ಲಿ ಬೆಳೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮನೆಯಲ್ಲಿ ಮಕ್ಕಳು ಕಡಿಮೆಯಿದ್ದರೂ  ಅವರನ್ನು ಸಮಾಜಮುಖಿಯಾಗಿ ಬೆಳೆಸಬೇಕು. ಅದು ಹೇಗೆಂದರೆ ಇತರ ಮಕ್ಕಳೊಂದಿಗೆ ಬೆರೆಯುವ ಅವಕಾಶ ಅವರಿಗೆ ಮಾಡಿಕೊಡಬೇಕು. ಜತೆಗೆ ಹೆತ್ತವರ ಬಳಿ ಅವರು ಎಷ್ಟು ಸುರಕ್ಷಿತ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು.

Advertisement

ಇದನ್ನೂ ಓದಿ:ದಿನಕ್ಕೊಂದು ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೆಯದು

ಇತ್ತೀಚಿನ ಮಕ್ಕಳಲ್ಲಿ ಅಭದ್ರತಾ ಭಾವನೆ ಹೆಚ್ಚಾಗುತ್ತಿದೆ. ಅದಕ್ಕೆ ಮೂಲ ಕಾರಣ ಪೋಷಕರೇ ಆಗಿರುತ್ತಾರೆ. ಅದಕ್ಕಾಗಿ ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕವಾದ ವಿಷಯಗಳನ್ನು ಮಕ್ಕಳಿಗೆ ಮೂರು ವರ್ಷ ಆದಾಗಿನಿಂದಲೇ ತಿಳಿಸುವ ಪ್ರಯತ್ನ ಮಾಡಬೇಕು. ಹುಟ್ಟಿದಾಗಿನಿಂದಲೇ ಮಕ್ಕಳು ಹೊಸತನ್ನು ಕಲಿಯುವ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಅದಕ್ಕೆ ಪೂರಕವಾದ ವಾತಾವರಣ ನಾವು ಮನೆಯಲ್ಲೇ ಸೃಷ್ಟಿಸಿಕೊಳ್ಳಬೇಕು. ಅಂದರೆ ಮಕ್ಕಳೊಂದಿಗೆ ಹೇಗೆ ವರ್ತಿಸಬೇಕು, ಅವರ ನಡವಳಿಕೆಯನ್ನು ಹೇಗೆ ತಿದ್ದುಪಡಿ ಮಾಡಬೇಕು ಎಂಬುದುನನ್ನು ಆರಂಭದಿಂದಲೇ ಪ್ರಯತ್ನಿಸಬೇಕು. ಆಗ ಮಾತ್ರ ಮುಂದೆ ಭವಿಷ್ಯದಲ್ಲಿ ಅವರು ಸಮಾಜದ ಸುಸಂಸ್ಕೃತ ನಾಗರಿಕರಾಗಲು ಸಾಧ್ಯವಿದೆ.

ಇದನ್ನೂ ಓದಿ:ಮಕ್ಕಳೊಂದಿಗೆ ಯೋಗಾಭ್ಯಾಸ ಆರೋಗ್ಯಕ್ಕೆ ಹಲವು ಲಾಭ

Advertisement

Udayavani is now on Telegram. Click here to join our channel and stay updated with the latest news.

Next