ಗಜೇಂದ್ರಗಡ: ಹಸುವಿನ ಆಹಾರವೆಂದೇ ಪರಿಗಣಿಸಲ್ಪಟ್ಟಿದ್ದ ಹುರುಳಿ ಬೀಜದಲ್ಲಿ ರೋಗ ನಿರೋಧಕ ಶಕ್ತಿ ಇದೆ ಎನ್ನುವ ಕಾರಣದಿಂದಾಗಿ ಇದೀಗ ಮಾರುಕಟ್ಟೆಯಲ್ಲಿ ಹುರುಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹೀಗಾಗಿ ತಾಲೂಕಿನಾದ್ಯಾಂತ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಹುರುಳಿ ಬೆಳೆ ಬೆಳೆದಿದ್ದು, ಫಸಲು ನಳನಳಿಸುತ್ತಿದೆ.
ಯಾವಾಗಲು ಶೇಂಗಾ, ಸೂರ್ಯಕಾಂತಿ, ಗೋವಿನ ಜೋಳ ಹಾಗೂ ಹತ್ತಿಯಂತಹ ವಾಣಿಜ್ಯ ಬೆಳೆ ಬೆಳೆದು ನಷ್ಟ ಅನುಭವಿಸಿ ಸಾಲಕ್ಕೆ ತುತ್ತಾದ ರೈತರು ಇನ್ನೇನು ಭೂಮಿ ಬಂಜರು ಗೆಡುವಬಾರದು ಎಂಬ ಕಾರಣಕ್ಕೆ ಕೊನೆಗೆ ಹಸುವಿಗೆ ಆಹಾರವಾದರೂ ಆಗಲಿ ಎಂದು ಬೇಕಾ ಬಿಟ್ಟಿಯಾಗಿ ಹುರಳಿ ಬೆಳೆದಿದ್ದರು. ಇದಕ್ಕೆ ಈಗ ಬೇಡಿಕೆ ಬಂದಿದೆ.
ಕಾಲಕಾಲೇಶ್ವರ, ಬೆಣಚಮಟ್ಟಿ, ಗೊಗೇರಿ, ಬೈರಾಪುರ, ಕುಂಟೋಜಿ, ನಾಗರಸಕೊಪ್ಪ, ಮ್ಯಾಕಲಝರಿ, ರಾಜೂರು, ದಿಂಡೂರ, ಮುಶಿಗೇರಿ, ನೆಲ್ಲೂರ, ಮಾಟರಂಗಿ, ರಾಮಾಪುರ, ಕೊಡಗಾನೂರ, ವೀರಾಪುರ, ಲಕ್ಕಲಕಟ್ಟಿ, ಜಿಗೇರಿ ಸೇರಿದಂತೆ ತಾಲೂಕಿನ ಹಲವಾರು ಗ್ರಾಮದ ರೈತರು ಕೆಂಪು ಮಿಶ್ರಿತ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹುರಳಿ ಫಸಲು ಕಂಗೊಳಿಸುತ್ತಿದೆ.
ಔಷಧಿ ಗುಣ: ಹಿಂದೆ ಹುರಳಿ ಸಂಗಟಿಗೆ ಬೆಲ್ಲ ಸೇರಿಸಿ ಸೇವಿಸಿದರೇ ಮನುಷ್ಯ ಯಾವುದೇ ರೋಗ ರುಜಿನ ವಿಲ್ಲದೇ ಸದೃಢ ಕಾಯ ಹೊಂದಿರುತ್ತಿದ್ದ. ಜೊತೆಗೆ ರೈತರ ಒಡನಾಡಿಯಾದ ಎತ್ತುಗಳು ಜಮೀನಿನಲ್ಲಿ ದಿನಪೂರ್ತಿ ದುಡಿದು ದಣಿದು ಬಂದ ಸಂದರ್ಭದಲ್ಲಿ ಸಂಜೆ ಹೊಟ್ಟು ಮೇವಿನೊಂದಿಗೆ ವಿಶೇಷವಾಗಿ ಹುರಳಿ ಕಾಳುಗಳನ್ನು ಆಹಾರವಾಗಿಡುತ್ತಿದ್ದರು. ಕ್ರಮೇಣ ಕಾಲ ಬದಲಾದಂತೆ ನೇಪತ್ಯಕ್ಕೆ ಸರಿಯಲಾರಂಭಿಸಿದ ಹುರಳಿ ಬೀಜದಲ್ಲಿ ಮಧುಮೇಹ ಸೇರಿದಂತೆ ಹಲವಾರು ರೋಗ ನಿರೋಧಕ ಶಕ್ತಿ ಇದೆ ಎನ್ನುವ ಅಂಶ ತಿಳಿದ ಬಳಿಕ ಇದೀಗ ಮಾರುಕಟ್ಟೆಯಲ್ಲಿ ಹುರಳಿ ಕಾಳಿಗೆ ಉತ್ತಮ ಬೆಲೆ ಬಂದ ಹಿನ್ನೆಲೆಯಲ್ಲಿ ರೈತರು ಹುರಳಿ ಬೆಳೆಯನ್ನು ಹೆಚ್ಚೆಚ್ಚು ಬೆಳೆಯುತ್ತಿದ್ದಾರೆ.
ಹುರಳಿಯಲ್ಲಿದೆ ಪೌಷ್ಟಿಕಾಂಶ: ಇಂದಿನ ತಾಂತ್ರಿಕ ಯುಗದಲ್ಲಿ ಆಧುನಿಕ ಆಹಾರ ಪದ್ಧತಿಗೆ ಮಾರು ಹೋಗಿ ಸದಾ ಆರೋಗ್ಯದ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ದುಷ್ಪರಿಣಾಮ ಬೀರಿ ಮನುಷ್ಯನನ್ನು ರೋಗ ಗ್ರಸ್ಥನನ್ನಾಗಿಸುವ ಆಹಾರಕ್ಕೆ ತದ್ವೀರು ದ್ಧವಾಗಿ ಜತೆಗೆ ಉತ್ತಮ ಆರೋಗ್ಯಕ್ಕೆ ಅತ್ಯಂತ ಅವಶ್ಯ ಹಾಗೂ ಪೌಷ್ಟಿಕಾಂಶ ಗುಣವುಳ್ಳ ರಾಗಿ, ನವಣೆ ಹೊರತುಪಡಿಸಿದರೆ ಹುರಳಿ ಕಾಳು ಆರೋಗ್ಯಕ್ಕೆ ಹೇಳಿ ಮಾಡಿಸಿದ ಆಹಾರವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆಯುಳ್ಳ ಬೆಳೆ ಇದಾಗಿದೆ. ರೈತರ ಬದುಕಿಗೆ ಸಹಕಾರಿಯಾಗಿದೆ.
ಪ್ರತಿವರ್ಷ ಗೋವಿನಜೋಳ, ಸೂರ್ಯಕಾಂತಿ, ಶೇಂಗಾ ಬೆಳೆದು ಸಾಲ ಮಾಡಿ ಸಾಕಾಗೈತ್ರೀ. ಇನ್ನೇನು ಭೂಮಿ ಹಂಗ ಬಿಟ್ರ ಕಸ ಬೆಳೆದ ಭೂಮಿ ಹಾಳಾಕೈತೀ, ಬೆಳದ್ರ ಎತ್ತಿಗೆ ಹೊಟ್ಟು ಆಗತೈತಿ, ಅಂತ ಹುಳ್ಳಿ ಬಿತ್ತೀವ್ರಿ ಆದ್ರ ಈಗ ಬಜಾರದಾಗ ಹುಳ್ಳಿಗೆ ಭಾರಿ ರೇಟ್ ಬಂದೈತ್ರೀ. ಬಿತ್ತಿದ ಹುಳ್ಳಿ ಭಾರಿ ಚೋಲೋ ಐತ್ರೀ. ಭೂಮಿ ತಾಯಿ ಈ ಬೆಳ್ಯಾಗರ ಲಾಭ ಕೊಡ್ತಾಳ ಅನ್ನೋ ಆಸೆ ಹುಟೈತ್ರಿ.
ಬಸಪ್ಪ ಬಂಡಿಹಾಳ,
ಹುರಳಿ ಬೆಳೆದ ರೈತ
ಹುರುಳಿಗೆ ಹೆಚ್ಚಿದ ಬೆಲೆ
ಅತ್ಯಂತ ಕಡಿಮೆ ಖರ್ಚಿನ ಜತೆ ಬಿತ್ತಿದ 90 ದಿನದಲ್ಲಿ ಕೇವಲ ತಂಪು ವಾತಾವರಣದಲ್ಲಿ ಬೆಳೆಯುವ ಹುರಳಿ ಎಕರೆ ಒಂದಕ್ಕೆ 2ರಿಂದ 3 ಕ್ವಿಂಟಾಲ ಬೆಳೆ ಬರುತ್ತದೆ. ಮಾರುಕಟ್ಟೆಯಲ್ಲಿ ಕೇವಲ 1000ರಿಂದ 1500 ಇದ್ದ ಹುರಳಿ ಬೆಲೆ ಪ್ರಸ್ತುತ ದಿನಗಳಲ್ಲಿ ಕ್ವಿಂಟಾಲ ಒಂದಕ್ಕೆ 2500ರಿಂದ 3000 ವರೆಗೆ ಬೆಲೆ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 70 ರೂ. ಇದೆ. ಹೀಗಾಗಿ ಹುರಳಿ ಬೆಳೆಗೆ ಉತ್ತಮ ಬೆಲೆ ದೊರೆಯುತ್ತಿದೆ.
ಡಿ.ಜಿ. ಮೋಮಿನ್