ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್‌ನ ರಮೇಶ್ ಜಾರಕಿಹೊಳಿಯವರು ಇತರ ಅತೃಪ್ತ ಶಾಸಕರೊಂದಿಗೆ ರಾಜೀನಾಮೆ ನೀಡುವುದಾಗಿ ಹೇಳಿರುವುದರಿಂದ ಬಿಜೆಪಿಯಲ್ಲಿ ಉತ್ಸಾಹ ಗರಿಗೆದರಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎನ್ನುತ್ತಿದ್ದ ರಾಜ್ಯ ಬಿಜೆಪಿ ನಾಯಕರು ಎರಡನೇ ಹಂತದ ಮತದಾನ ಮುಗಿಯುವ ಹೊತ್ತಿಗೆ ಸರ್ಕಾರ ಯಾವುದೇ ಕ್ಷಣದಲ್ಲಿ ಪತನವಾದರೂ ಅಚ್ಚರಿ ಇಲ್ಲ ಎನ್ನಲಾರಂಭಿಸಿದ್ದಾರೆ.
ಆ ಮೂಲಕ ಅವಕಾಶ ಸಿಕ್ಕರೆ ಈ ಬಾರಿ ರಾಜ್ಯದಲ್ಲಿ ಸರ್ಕಾರವನ್ನು ರಚಿಸಿಯೇ ತೀರುವ ಉಮೇದಿನಲ್ಲಿ ರಾಜ್ಯ ಬಿಜೆಪಿ ನಾಯಕರಿದ್ದಾರೆ. ಆದರೂ, ಈ ಬಗ್ಗೆ ಎಚ್ಚರಿಕೆಯ ಹೆಜ್ಜೆಯನ್ನಿಡಲು ಮುಂದಾಗಿರುವ ಬಿಜೆಪಿ, ರಾಜೀನಾಮೆ ನೀಡುವ ಆಡಳಿತ ಪಕ್ಷಗಳ ಶಾಸಕರ ಸಂಖ್ಯೆ ಆಧರಿಸಿ ಮುಂದಿನ ರಾಜಕೀಯ ಹೆಜ್ಜೆ ಇಡಲು ತೀರ್ಮಾನಿಸಿದಂತಿದೆ.
ಕೆಲ ತಿಂಗಳಿನಿಂದ ಕಾಂಗ್ರೆಸ್ ಪಕ್ಷದೊಂದಿಗೆ ಅಂತರ ಕಾಯ್ದುಕೊಂಡಿರುವ ರಮೇಶ್ ಜಾರಕಿಹೊಳಿ, ಮೊದಲ ಬಾರಿಗೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿರುವುದನ್ನು ರಾಜಕೀಯವಾಗಿ ಬಳಸಿಕೊಳ್ಳುವತ್ತ ಬಿಜೆಪಿ ಪ್ರಯತ್ನ ನಡೆಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಬೆಳಗ್ಗೆ ಬೆಂಗಳೂರಿಗೆ ಹಿಂತಿರುಗಲಿದ್ದು, ಪ್ರಮುಖ ನಾಯಕರನ್ನು ಭೇಟಿಯಾಗಿ ಚರ್ಚಿಸುವ ಸಾಧ್ಯತೆ ಇದೆ.
ಉಪ ಚುನಾವಣೆಗೆ ವರದಾನ ನಿರೀಕ್ಷೆ: ಲೋಕಸಭೆ ಚುನಾವಣೆಗೆ ಮತದಾನ ಮುಗಿಯುತ್ತಿದ್ದಂತೆ ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮೇ 19ರಂದು ಮತದಾನ ನಡೆಯಲಿದೆ. ಆಡಳಿತಾರೂಢ ಪಕ್ಷದ ಶಾಸಕರೇ ಕಾಂಗ್ರೆಸ್ ತೊರೆಯುವುದಾಗಿ ಘೋಷಿಸಿರುವುದು,
ಡಾ.ಉಮೇಶ್ ಜಾಧವ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಸಹಜವಾಗಿಯೇ ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳ ಮತದಾರರ ಮೇಲೆ ಪರಿಣಾಮ ಬೀರಬಹುದು. ಕಾಂಗ್ರೆಸ್‌ನ ಅತೃಪ್ತರ ಶಾಸಕರ ನಡೆಯೂ ಪಕ್ಷದಲ್ಲಿನ ಗೊಂದಲ ಹೆಚ್ಚಿಸಲಿದೆ. ಇದು ಸಹಜವಾಗಿಯೇ ಉಪಚುನಾವಣೆಯಲ್ಲಿ ಪಕ್ಷಕ್ಕೆ ವರದಾನವಾಗುವ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದಾರೆ ಎಂಬ ಮಾತು ವ್ಯಾಪಕವಾಗಿ ಕೇಳಿ ಬಂದಿದೆ.
ಈ ಮಧ್ಯೆ, “ರಮೇಶ್ ಜಾರಕಿಹೊಳಿಯವರ ರಾಜೀನಾಮೆ ಪ್ರಸ್ತಾಪ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರ. ಅದಕ್ಕೂ, ಬಿಜೆಪಿಗೂ ಸಂಬಂಧವಿಲ್ಲ. ಮೈತ್ರಿ ಸರ್ಕಾರದ ಸ್ಪಷ್ಟ ಬಹುಮತಕ್ಕೆ ಅಗತ್ಯವಾದಷ್ಟು ಶಾಸಕರ ಸಂಖ್ಯಾಬಲವಿಲ್ಲ ಎಂಬುದು ಖಾತರಿಯಾದ ಬಳಿಕವಷ್ಟೇ ಬಿಜೆಪಿ ತನ್ನ ರಾಜಕೀಯ ಹೆಜ್ಜೆಯನ್ನಿಡಲಿದೆ’ ಎಂದು ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಹಾಗೂ ಉಪಚುನಾವಣೆಗಳ ಫಲಿತಾಂಶ ಪ್ರಕಟವಾಗುವವರೆಗೆ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆಯಾಗುವ ಸಾಧ್ಯತೆ ಕಡಿಮೆ. ಹಾಗಾಗಿ, ಸೂಕ್ತ ಸನ್ನಿವೇಶ ಸೃಷ್ಟಿಯಾಗುವವರೆಗೆ ಬಿಜೆಪಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಒಟ್ಟಾರೆ ಮೈತ್ರಿ ಸರ್ಕಾರದ ಬಗ್ಗೆ ಜನರಿಗೆ ಮಾತ್ರವಲ್ಲ, ಆ ಪಕ್ಷಗಳ ಶಾಸಕರಿಗೂ ವಿಶ್ವಾಸವಿಲ್ಲ ಎಂಬುದನ್ನು ಈ ಬೆಳವಣಿಗೆಗಳು ಖಾತರಿಪಡಿಸುತ್ತಿವೆ. ಸೂಕ್ತ ಸಂದರ್ಭದಲ್ಲಿ ಬಿಜೆಪಿ ತನ್ನ ರಾಜಕೀಯ ದಾಳ ಉರುಳಿಸಲಿದೆ ಎಂದು ಪದಾಧಿಕಾರಿ ತಿಳಿಸಿದ್ದಾರೆ.