Advertisement

ಸಾರಿಗೆ ಇಲಾಖೆ ಸೇವೆಗಳಿಗೆ ಹೆಚ್ಚಿದ ಬೇಡಿಕೆ

10:54 PM Sep 10, 2019 | Lakshmi GovindaRaju |

ಬೆಂಗಳೂರು: ಸಾರಿಗೆ ನಿಯಮಗಳ ಉಲ್ಲಂಘನೆಗೆ ಭಾರಿ ದಂಡ “ಪ್ರಯೋಗ’ದ ಬೆನ್ನಲ್ಲೇ ರಾಜ್ಯ ಸಾರಿಗೆ ಇಲಾಖೆ ಸೇವೆಗಳಿಗೆ ದಿಢೀರ್‌ ಬೇಡಿಕೆ ಬಂದಿದ್ದು, ಮುಖ್ಯವಾಗಿ ಚಾಲನಾ ಪರವಾನಗಿ, ಕಲಿಕಾ ಚಾಲನಾ ಪರವಾನಗಿ, ವಾಯುಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಗಳಿಗಾಗಿ ವಾಹನ ಸವಾರರು ದುಂಬಾಲು ಬಿದ್ದಿದ್ದಾರೆ.

Advertisement

ರಾಜ್ಯದಲ್ಲಿ ತಿಂಗಳಿಗೆ 3.10ರಿಂದ 3.20 ಲಕ್ಷ ಚಾಲನಾ ಪರವಾನಗಿ (ಡಿಎಲ್‌)ಗಳು ವಿತರಣೆ ಆಗುತ್ತವೆ. ಆದರೆ, ಕೇಂದ್ರ ಸರ್ಕಾರವು ಮೋಟಾರು ವಾಹನ ತಿದ್ದುಪಡಿ ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಿದ ನಂತರದಿಂದ ಅಂದರೆ ಆಗಸ್ಟ್‌ 9ರಿಂದ ಈವರೆಗೆ ಚಾಲನಾ ಪರವಾನಗಿ ಪತ್ರ (ಡಿಎಲ್‌)ಗಳ ವಿತರಣೆ 3.50 ಲಕ್ಷ ತಲುಪಿದೆ. ಅಲ್ಲದೆ, ಪ್ರಾದೇಶಿಕ ಮಟ್ಟದಲ್ಲಿ ಕಲಿಕಾ ಚಾಲನಾ ಪರವಾನಗಿ ಪತ್ರ (ಎಲ್‌ಎಲ್‌ಆರ್‌)ಗಳ ಪ್ರಮಾಣ ಕೂಡ ಸಾಕಷ್ಟು ಹೆಚ್ಚಿದೆ ಎಂದು ಸಾರಿಗೆ ಇಲಾಖೆ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

ಡಿಎಲ್‌ ಮತ್ತು ಎಲ್‌ಎಲ್‌ಆರ್‌ಗಳ ಬೇಡಿಕೆಯಲ್ಲಿ ಒಟ್ಟಾರೆ ಶೇ. 10ರಿಂದ 15ರಷ್ಟು ಬೇಡಿಕೆ ಅಧಿಕವಾಗಿದೆ. ಒಂದು ಡಿಎಲ್‌ಗೆ 200 ರೂ. ಶುಲ್ಕ ಆಗುತ್ತದೆ. ತಿಂಗಳಿಂದ ಇವುಗಳ ಬೇಡಿಕೆ ಹೆಚ್ಚಿದ್ದರಿಂದ ಇಲಾಖೆಗೆ ಬರುವ ಆದಾಯದಲ್ಲಿ 60ರಿಂದ 70 ಲಕ್ಷ ರೂ. ಏರಿಕೆ ಆಗಿದೆ (ಸಾರಿಗೆ ಇಲಾಖೆಗೆ ಪ್ರಮುಖ ಆದಾಯ ಮೂಲ ವಾಹನಗಳ ನೋಂದಣಿ). ಮತ್ತೂಂದೆಡೆ ಅನುಮತಿ ಇಲ್ಲದೆ ವಾಹನಗಳ ವಿನ್ಯಾಸವನ್ನು ವಿರೂಪಗೊಳಿಸಿ, ಶಬ್ದಮಾಲಿನ್ಯ ಉಂಟುಮಾಡುವ ವಾಹನಗಳ ಸದ್ದು ಕೂಡ ಅಡಗಿದೆ. ಇದರಿಂದ ಅಲ್ಟರೇಷನ್‌ ಮಾಡುವವರಿಗೆ ಭಾರೀ ಹೊಡೆತ ಬಿದ್ದಿದೆ ಎಂದೂ ಅಧಿಕಾರಿಗಳು ತಿಳಿಸಿದರು.

ಸ್ವಲ್ಪ ಏರಿಕೆ, ಅಧಿಕಾರಿ: “ಆಗಸ್ಟ್‌ 9ರಲ್ಲಿ ಅಧಿಸೂಚನೆ ಹೊರಡಿಸಿದ್ದರೂ, ರಾಜ್ಯದಲ್ಲಿ ಅದು ಜಾರಿಯಾಗಿ ಕೇವಲ ನಾಲ್ಕು ದಿನಗಳಾಗಿವೆ. ಆದಾಗ್ಯೂ ನಗರದಲ್ಲಿ ಶೇ. 5ರಷ್ಟು ಚಾಲನಾ ಪರವಾನಗಿ ಮತ್ತು ಕಲಿಕಾ ಚಾಲನಾ ಪರವಾನಗಿಗೆ ಬೇಡಿಕೆ ಹೆಚ್ಚಳ ಆಗಿದೆ. ಇನ್ನೊಂದು ವಾರದಲ್ಲಿ ಈ ಪ್ರಮಾಣ ಮತ್ತಷ್ಟು ಏರಿಕೆ ಆಗುವುದರಲ್ಲಿ ಸಂಶಯವಿಲ್ಲ’ ಎಂದು ನಗರ ವಿಭಾಗದ ಜಂಟಿ ಸಾರಿಗೆ ಆಯುಕ್ತ ಜೆ. ಜ್ಞಾನೇಂದ್ರ ಕುಮಾರ್‌ ಸ್ಪಷ್ಟಪಡಿಸಿದರು.

ಈ ಮೊದಲು ತಮ್ಮ ವಾಹನಗಳ ಆರೋಗ್ಯದ ಬಗ್ಗೆಯೂ ಪ್ರಮಾಣಪತ್ರ ತೆಗೆದುಕೊಳ್ಳಬೇಕು ಎಂಬ ಅರಿವು ಬಹುತೇಕ ವಾಹನ ಮಾಲಿಕರಲ್ಲಿ ಇರಲಿಲ್ಲ. ಆದರೆ, ದಂಡದ ಪ್ರಮಾಣ ಹೆಚ್ಚಾದ ಬೆನ್ನಲ್ಲೇ ಈ ಬಗ್ಗೆ ತಿಳಿವಳಿಕೆ ಮೂಡಿದೆ. ಅಧಿಸೂಚನೆಗೂ ಮುನ್ನ ರಾಜ್ಯದಲ್ಲಿ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಿಂದ ಒಟ್ಟಾರೆ 15ರಿಂದ 20 ಸಾವಿರ ಪ್ರಮಾಣಪತ್ರಗಳಿಗೆ ಬೇಡಿಕೆ ಬರುತ್ತಿತ್ತು. ಕಳೆದ 3 ದಿನಗಳಿಂದ ಈ ಸಂಖ್ಯೆ 60 ಸಾವಿರ ತಲುಪಿದೆ ಎಂದು ಅಪರ ಸಾರಿಗೆ ಆಯುಕ್ತ (ಪರಿಸರ ಮತ್ತು ಇ-ಆಡಳಿತ) ಶಿವರಾಜ್‌ ಬಿ. ಪಾಟೀಲ “ಉದಯವಾಣಿ‘ಗೆ ಮಾಹಿತಿ ನೀಡಿದರು.

Advertisement

ರಾಜ್ಯಾದ್ಯಂತ 2.10 ಕೋಟಿ ವಾಹನಗಳಿದ್ದು, 1,020 ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಿವೆ. ಈ ಪೈಕಿ ನಗರದಲ್ಲೇ ಸುಮಾರು 385ರಿಂದ 400 ಕೇಂದ್ರಗಳಿವೆ. ಬೆಂಗಳೂರಿನಲ್ಲಿ ಅಂದಾಜು 20ರಿಂದ 25 ಸಾವಿರ ಪ್ರಮಾಣಪತ್ರಗಳಿಗೆ ಬೇಡಿಕೆ ಬರುತ್ತಿದೆ. ಈ ಪ್ರಮಾಣ ಪತ್ರಗಳ ಅವಧಿ 6 ತಿಂಗಳು ಇರುತ್ತದೆ. ಶುಲ್ಕ ವಾಹನಗಳ ಪ್ರಕಾರವನ್ನು ಅವಲಂಬಿಸಿದ್ದು, ಕನಿಷ್ಠ 30 ರೂ.ಗಳಿಂದ ಗರಿಷ್ಠ 100 ರೂ.ವರೆಗೆ ಇರುತ್ತದೆ. ಅವಧಿ ಮುಗಿದ ನಂತರ ಮತ್ತೆ ಪಡೆಯಬೇಕಾಗುತ್ತದೆ. ಇವುಗಳ ತಪಾಸಣೆ ಕಾರ್ಯಾಚರಣೆಯನ್ನು ಸಾರಿಗೆ ಇಲಾಖೆ ಅಧಿಕಾರಿಗಳು ನಡೆಸುತ್ತಾರೆ ಎಂದು ಅವರು ತಿಳಿಸಿದರು.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next