Advertisement
ಫೆಬ್ರವರಿಯಲ್ಲಿ ಹೆಚ್ಚಾಗಿತ್ತು; ಮಾರ್ಚ್‌ನಲ್ಲಿ ಶೂನ್ಯ!ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಫೆಬ್ರವರಿಯಲ್ಲಿ ಮಾತ್ರ ವಾಹನ ಮಾರಾಟವು ಶೇ. 2.60ರಷ್ಟು ಏರಿಕೆಯಾಗಿತ್ತು. ಆದರೆ ಆಟೋ ಮಾರಾಟದ ಇತಿಹಾಸದಲ್ಲಿ ಮೊದಲ ಬಾರಿಗೆ ಮಾರ್ಚ್‌ನಲ್ಲಿ ಒಂದೇ ಒಂದು ವಾಹನ ಮಾರಾಟವಾಗಿಲ್ಲ. ಎಫ್ಎಡಿಎ ಪ್ರತೀ ತಿಂಗಳು ದೇಶದಲ್ಲಿ ಮಾರಾಟವಾದ ವಾಹನಗಳ ಅಂಕಿಅಂಶವನ್ನು ಬಿಡುಗಡೆ ಮಾಡುತ್ತಿದ್ದು ಅದರಲ್ಲಿ ಮಾರ್ಚ್ ಮತ್ತು ಎಪ್ರಿಲ್ ತಿಂಗಳ ನೋಂದಣಿ ಮಾಹಿತಿ ಇಲ್ಲ. ಮೇ ತಿಂಗಳಲ್ಲಿ ಆಟೋ ವಲಯ ಮಹಾ ಕುಸಿತ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೇನಲ್ಲಿ ಶೇ. 88ರಷ್ಟು ಕಡಿಮೆ ಸಂಖ್ಯೆಯ ವಾಹನಗಳು ಮಾರಾಟಗೊಂಡಿವೆ. ಮೇ ತಿಂಗಳಿನಲ್ಲಿ ಬೈಕ್‌ಗಳು ಅತೀ ಹೆಚ್ಚು ಮಾರಾಟಗೊಂಡಿದ್ದು, ಇತರ ವಾಹನಗಳ ಪ್ರಮಾಣ ಕುಸಿತ ಕಂಡಿದೆ.
ಆಟೋ ವಲಯ ಭಾರೀ ಕುಸಿತ ಕಂಡರೆ ದಾಖಲೆ ಸಂಖ್ಯೆಯಲ್ಲಿ ಟ್ರ್ಯಾಕ್ಟರ್‌ಗಳು ಮಾರಾಟವಾಗಿವೆ. ಈ ವರ್ಷ ಟ್ರ್ಯಾಕ್ಟರ್ ಮಾರಾಟವು ಶೇ. 30ರಷ್ಟು ವೃದ್ಧಿಯಾಗಿದೆ. ಆದರೆ ಇತರ ವಾಹನಗಳಂತೆ ಮೇ ತಿಂಗಳಿನಲ್ಲಿ ಮಾತ್ರ ಇಳಿಕೆ ಕಂಡಿದೆ. ಇನ್ನು ಸೆಪ್ಟಂಬರ್‌ತಿಂಗಳಿನಲ್ಲಿ ಅತೀ ಹೆಚ್ಚು ಅಂದರೆ ಶೇ. 80ರಷ್ಟು ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೇಶದಲ್ಲಿ ಕೃಷಿ ಚಟುವಟಿಕೆಗಳು ಚಿಗಿತುಕೊಂಡಿದ್ದವು. ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಜಾರಿ ಮಾಡಲಾಗಿದ್ದ ಲಾಕ್‌ಡೌನ್‌ನ ಸಂದರ್ಭದಲ್ಲಿ ಆಹಾರ ಪದಾರ್ಥಗಳು ಮತ್ತು ಧಾನ್ಯಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ರೈತರ ಸಂಪಾದನೆ ಹೆಚ್ಚುವಂತಾಯಿತು. ಯಾವ ರಾಜ್ಯಗಳಲ್ಲಿ ಟ್ರ್ಯಾಕ್ಟರ್‌ಗೆ ಬೇಡಿಕೆ
ಬಿಹಾರ, ಗುಜರಾತ್, ಹರಿಯಾಣ, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ರಾಜ್ಯಗಳಲ್ಲಿ ಟ್ರ್ಯಾಕ್ಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಉತ್ತರ ಪ್ರದೇಶದಲ್ಲಿ ಪ್ರತೀ ತಿಂಗಳು ಸರಾಸರಿ 12,177 ಟ್ರಾಕ್ಟರ್‌ಗಳು ಮಾರಾಟವಾಗಿವೆ.
Related Articles
ತ್ರಿಪುರಾ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಮೇ ತಿಂಗಳಿನಿಂದೀಚೆಗೆ ಆಟೋ ರಿಕ್ಷಾಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಉತ್ತರ ಪ್ರದೇಶ, ಬಿಹಾರ, ಗುಜರಾತ್, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ರಿಕ್ಷಾಗಳ ಬೇಡಿಕೆ ಕುಸಿತ ಕಂಡಿದೆ. ಈ ಹಿಂದೆ ಈ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತ್ರಿಚಕ್ರ ವಾಹನಗಳು ಮಾರಾಟವಾಗುತ್ತಿದ್ದವು.
Advertisement
ನಿಧಾನವಾಗಿ ಹೆಚ್ಚಿದ ಬೇಡಿಕೆದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳು ಕಳೆದ 3 ತಿಂಗಳುಗಳಿಂದ ಬೇಡಿಕೆ ಹೊಂದಿವೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಇವೆರಡರ ಮಾರಾಟ ಪ್ರಮಾಣ ತನ್ನ ಗುರಿಯನ್ನು ಮೀರಿಲ್ಲ. ಈ ವರ್ಷ ಖಾಸಗಿ ವಾಹನಗಳ ಮಾರಾಟವು ಸೆಪ್ಟಂಬರ್‌ನಲ್ಲಿ 1,95,665 ಯುನಿಟ್‌ಗಳಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 9.8ರಷ್ಟು ಏರಿಕೆಯಾಗಿದೆ. ಈ ತಿಂಗಳು ಮಾತ್ರ ಈ ವಲಯ ಚೇತರಿಕೆ ಕಂಡಿದೆ. ಹಬ್ಬಗಳ ಸಂದರ್ಭ ನಿರೀಕ್ಷಿತ ಬೇಡಿಕೆ ಇಲ್ಲ
ಈ ವರ್ಷ ಹಬ್ಬದ ಋತುವಿನಲ್ಲಿ ಆಟೋ ಉದ್ಯಮ ಹೊಸ ನಿರೀಕ್ಷೆಯಲ್ಲಿತ್ತು. ಆದರೆ 42 ದಿನಗಳ ಹಬ್ಬದ ಸಂಭ್ರಮದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 4.74ರಷ್ಟು ಕಡಿಮೆ ಮಾರುಕಟ್ಟೆಯನ್ನು ಕಂಡಿದೆ. ಆದರೆ ಈ ಅವಧಿಯಲ್ಲಿ ಖಾಸಗಿ ವಾಹನ ಮತ್ತು ಟ್ರ್ಯಾಕ್ಟರ್‌ಗಳಿಗೆ ಬೇಡಿಕೆ ಕಂಡುಬಂದರೆ ವಾಣಿಜ್ಯ ಉದ್ದೇಶದ ವಾಹನಗಳು ಹಿಂದುಳಿದವು.