ರಾಮನಾಥಪುರ: ಪ್ರಮುಖ ವಾಣಿಜ್ಯ ಬೆಳೆ ತಂಬಾಕಿನ ಉತ್ಪಾದನಾ ಚಟುವಟಿಕೆ ಬಿರುಸಾಗಿದ್ದು, ತಂಬಾಕು ಎಲೆಗಳನ್ನು ಬೇಯಿಸಿ ಹದಗೊಳಿಸಲು ಬಳಸುವ ಉರುವಲಿಗೂ ಬೇಡಿಕೆ ಹೆಚ್ಚಿದೆ.
ರಾಮನಾಥಪುರ ತಂಬಾಕು ಮಾರುಕಟ್ಟೆ ವ್ಯಾಪ್ತಿಯಲ್ಲಿ 30 ಸಾವಿರಕ್ಕೂ ಹೆಚ್ಚು ತಂಬಾಕು ಬೆಳೆಗಾರರಿದ್ದು, ತಂಬಾಕು ಕಟಾವು ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ 10 ದಿನಗಳಿಂದಲೂ ಮಳೆ ಬಿಡುವು ನೀಡಿರುವುದರಿಂದ ತಂಬಾಕು ಕಟಾವು ಕಾರ್ಯಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.
ತಂಬಾಕು ಹದಗೊಳಿಸಲು ಬಳಸುವ ಉರುವಲಿಗೆ ಈಗ ಬೇಡಿಕೆ ದಿನೇ, ದಿನೆಹೆಚ್ಚುತ್ತಿದ್ದು, ಸೌದೆ, ಕಾಫಿ ಹೊಟ್ಟು, ತೆಂಗಿನ ಮಟ್ಟೆ, ಮರದಹೊಟ್ಟು, ತೆಂಗಿನ ಚಿಪ್ಪುಗಳ ಬೆಲೆ ಏರಿಕೆಯಾಗಿರುವುದು ಬೆಳೆಗಾರರನ್ನು ಬೆಚ್ಚಿ ಬೀಳಿಸಿದೆ. ಸೌದೆಗೆ ಪರ್ಯಾಯವಾಗಿ ಬಳಸುವ ಕಾಫಿ ಹೊಟ್ಟು, ಮರದಹೊಟ್ಟು, ತೆಂಗಿನ ಮಟ್ಟೆ, ಚಿಪ್ಪುಗಳಿಗೆ ಬೇಡಿ ಹೆಚ್ಚತ್ತಿರುವುದರಿಂದ ರಾಮನಾಥಪುರದ ಅರಣ್ಯ ಇಲಾಖೆ ಕಚೇರಿಯ ರಸ್ತೆ ಬದಿಯಲ್ಲಿ ಕಳೆದ ಕೆಲವು ದಿನಗಳಿಂದ ಸೌದೆ, ತೆಂಗಿನಮಟ್ಟೆ ತುಂಬಿದ ಲಾರಿಗಳು ಸಾಲಾಗಿ ನಿಲ್ಲಿಸಿಕೊಂಡಿರುವ ವ್ಯಾಪಾರಿಗಳು ಬಿರುಸಿನ ವ್ಯಾಪಾರ ನಡೆಸುತ್ತಿದ್ದಾರೆ.
ಪ್ರಾರಂಭದಲ್ಲಿ ಸೌದೆ ಹಾಗೂ ಕಾಫಿ ಹೊಟ್ಟು ಒಂದು ಲಾರಿ ಲೋಡ್‌ಗೆ 60ರಿಂದ 65 ಸಾವಿರ ರೂ. ಇತ್ತು. ಈಗ 70 ರಿಂದ 80 ಸಾವಿರ ರೂ.ಗೆ ಏರಿಕೆಯಾಗಿದೆ. ತೆಂಗಿನ ಮಟ್ಟೆ ಈ ವಾರ ಲಾರಿ ಲೋಡ್‌ಗೆ 16ರಿಂದ 20 ಸಾವಿರ ರೂ.ನಷ್ಟು ಏರಿಕೆಯಾಗಿದೆ. ಉರುವಲು ಬೆಲೆ ಏರಿರುವುದರಿಂದ ತಂಬಾಕು ಉತ್ಪಾದನಾ ವೆಚ್ಚವೂ ಹೆಚ್ಚುತ್ತಿದೆ. ಈ ರ್ಷ ತಂಬಾಕು ಬೆಳವಣಿಗೆ ಹಂತದಲ್ಲಿ ನಿರೀಕ್ಷಿತ ಮಳೆ ಕೈಕೊಟ್ಟ ಪರಿಣಾಮ ತಂಬಾಕು ಇಳುವರಿ ಕುಸಿದಿದೆ. ಈಗ ಉರುವಲು ಬೆಲೆ ಏರಿಕೆ ಜೊತೆಗೆ ದಲ್ಲಾಳಿಗಳ ಹಾವಳಿ ಹೆಚ್ಚಿರುವುದು ತಂಬಾಕು ಬೆಳೆಗಾರರಿಗೆ ತಲೆನೋವಾಗಿ ಪರಿಣುಸಿದೆ.