Advertisement

ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿಗೆ ಹೆಚ್ಚಿದ ಬೇಡಿಕೆ

06:18 PM Jun 13, 2022 | Team Udayavani |

ಸಿರುಗುಪ್ಪ: ಆಯುರ್ವೇದಿಕ ಅಂಶಗಳುಳ್ಳ ನೇರಳೆ ಹಣ್ಣು ಸಾಕಷ್ಟು ಮಾರುಕಟ್ಟೆಗೆ ಬಂದಿದ್ದರೂ ಬೆಲೆ ಮಾತ್ರ ಕಳೆದ ವರ್ಷಕ್ಕಿಂತ ಕೊಂಚ ದುಬಾರಿಯಾಗಿದೆ. ಹಣ್ಣು ತಿನ್ನುವವರ ಬಾಯಲ್ಲಿ ನೀರೂರಿಸುತ್ತಿದ್ದು, ಬೆಲೆಯಲ್ಲಿ ಕೊಂಚ ಹೆಚ್ಚಾಗಿದ್ದರೂ ಈ ಹಣ್ಣನ್ನು ಗ್ರಾಹಕರು ಕೊಂಡು ತಿನ್ನುತ್ತಿದ್ದಾರೆ.

Advertisement

ಕೊಪ್ಪಳ ಜಿಲ್ಲೆಯ ತಾವರಗಿ, ಬಳ್ಳಾರಿ ತಾಲೂಕಿನ ಮೋಕಾ ಸುತ್ತಮುತ್ತಲಿನ ಹಳ್ಳಿಗಳು ಮತ್ತು ಸಿಮಾಂಧ್ರಪ್ರದೇಶದ ಆದೋನಿ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ನೇರಳೆ ಹಣ್ಣು ಮಾರಾಟ ಮಾಡಲು ನಗರಕ್ಕೆ ಬರುತ್ತಿದ್ದು, ಈ ವ್ಯಾಪಾರಿಗಳು ರೈತರ ಹೊಲದಲ್ಲಿ ಬೆಳೆದ ನೇರಳೆ ಹಣ್ಣನ್ನು ಗುತ್ತಿಗೆದಾರರಿಂದ ಖರೀದಿಸಿ ತರುತ್ತಿದ್ದಾರೆ. ನಿತ್ಯದ ವ್ಯಾಪಾರದಲ್ಲಿ ಲಾಭದೊಂದಿಗೆ ಹಣ್ಣುಗಳನ್ನು ಮಾರಾಟ ಮಾಡುತ್ತಿರುವುದರಿಂದ ದರ ಹೆಚ್ಚಾಗಲು ಕಾರಣವೆಂದು ಹೇಳಲಾಗುತ್ತಿದೆ.

ತಾಲೂಕಿನಲ್ಲಿ ನೇರಳೆ ಹಣ್ಣು ಬೆಳೆಯುವ ರೈತರೆ ಇಲ್ಲ. ಆದ್ದರಿಂದ ಬೇರೆ ಕಡೆಯಿಂದ ಬಂದ ವ್ಯಾಪಾರಿಗಳು ಭರ್ಜರಿ ಲಾಭದೊಂದಿಗೆ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಕ್ಕರೆ ಖಾಯಿಲೆ ಇರುವವರು ಈ ಹಣ್ಣನ್ನು ತಿನ್ನುವುದರಿಂದ ಖಾಯಿಲೆ ಕಡಿಮೆಯಾಗುತ್ತದೆ ಎನ್ನುವ ಕಾರಣದಿಂದ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿದ್ದರೂ ಕೊಳ್ಳುವ ಗ್ರಾಹಕರಿಗೆ ಕೊರತೆ ಇಲ್ಲ.

ಮಕ್ಕಳಿಗೆ ಇಷ್ಟವಾಗುವ ಈ ಹಣ್ಣನ್ನು ತೊಳೆದು ಉಪ್ಪು ಬೆರೆಸಿ ತಿಂದರೆ ಅದರ ಸ್ವಾದವೇ ಬೇರೆಯಾಗಿರುತ್ತದೆ. ಕಳೆದ ಬಾರಿ ನೇರಳೆ ಹಣ್ಣಿನ ಬೆಲೆ ಒಂದು ಕೆ.ಜಿ.ಗೆ ರೂ.120 ರಿಂದ 150 ಇತ್ತು ಆದರೆ ಈ ವರ್ಷವೂ ಕೆಜಿಗೆ ರೂ.150ಕ್ಕೆ ಮಾರಾಟವಾಗುತ್ತಿದ್ದರೂ ತಿನ್ನುವವರಿಗೆ ಕೊರತೆಯಿಲ್ಲ. ಇದರಿಂದಾಗಿ ವ್ಯಾಪಾರಿಗಳಿಗೆ ಲಾಭದ ಸುಗ್ಗಿಯಾಗಿದೆ. ನೇರಳೆ ಹಣ್ಣಿನ ಬೀಜದ ಪುಡಿ ಸೇವಿಸುವುದರಿಂದ ಅತಿಯಾದ ಮೂತ್ರ ತೊಂದರೆ ನಿವಾರಣೆಯಾಗುತ್ತದೆ.

ಮೂಲವ್ಯಾಧಿ, ಪಿತ್ತಜನಕಾಂಗ ತೊಂದರೆಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಹಣ್ಣಿನಲ್ಲಿ ನೈಸರ್ಗಿಕ ಆಮ್ಲಿಯ ಪದಾರ್ಥಗಳಿದ್ದು, ದೇಹದಲ್ಲಿ ಜೀರ್ಣಕ್ರಿಯೆಗೆ ಅನುಕೂಲವಾಗಲಿದೆ. ಪಿತ್ತ ಜನಕಾಂಗ ಕಾರ್ಯವನ್ನು ಉತ್ತೇಜಿಸುವಲ್ಲಿಯೂ ಸಹಕಾರಿಯಾಗಿದೆ ಎಂಬುದು ವೈದ್ಯರ ಸಲಹೆಯಾಗಿದೆ.

Advertisement

ನೇರಳೆ ಹಣ್ಣಿನಲ್ಲಿ ಐರನ್‌, ಕ್ಯಾಲ್ಸಿಯಂ, ಪೊಟ್ಯಾಷಿಯಂ ಇರುತ್ತದೆ. ಅಜೀರ್ಣ, ಚಂಚಲತೆ, ಕಿಡ್ನಿ ಸಮಸ್ಯೆ ನಿವಾರಣೆಗೂ ನೇರಳೆ ಹಣ್ಣು ದಿವ್ಯ ಔಷಧಿಯಾಗಿದೆ. ಮಧುಮೇಹ ಕಾಯಿಲೆ ಇರುವವರು ಈ ಹಣ್ಣು ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ ಸಹಕಾರಿಯಾಗುತ್ತದೆ. ಹಣ್ಣು ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದ ಉಷ್ಣಾಂಶ ಕಡಿಮೆಯಾಗುವುದರ ಜೊತೆಗೆ ಕೆಲವು ಅಪಾಯಕಾರಿಯಾದ ಕ್ಯಾನ್ಸರ್‌ ರೋಗ ಕಡಿಮೆ ಮಾಡುವ ಅಂಶ ಹೊಂದಿದೆ.

ನೇರಳೆ ಹಣ್ಣು ನಮಗೆ ತುಂಬಾ ಇಷ್ಟ. ಪ್ರತಿಬಾರಿ ಸೀಜನ್‌ನಲ್ಲಿ ತಪ್ಪದೇ ನೇರಳೆ ಹಣ್ಣನ್ನು ಖರೀದಿಸಿ ತಿನ್ನುತ್ತೇವೆ. ಕೆಲವು ಖಾಯಿಲೆಗಳಿಗೆ ಈ ಹಣ್ಣು ರಾಮಬಾಣವಾಗಿದೆ. ವರ್ಷಕ್ಕೆ ಒಂದೇ ಬಾರಿ ಸಿಗುವ ನೇರಳೆ ಹಣ್ಣು ಮತ್ತು ಇದರ ಬೀಜ, ತೊಗಟೆ,ಪುಡಿಯಿಂದ ತಯಾರಿಸಿದ ಜ್ಯೂಸ್‌
ಕುಡಿಯುತ್ತೇವೆ.
ಪಾರ್ವತಿ, ಗ್ರಾಹಕಿ

ನಮ್ಮಲ್ಲಿ ನೇರಳೆ ಹಣ್ಣನ್ನು ಬೆಳೆಯುತ್ತಿಲ್ಲ. ಇದರಿಂದಾಗಿ ನೆರೆ ಜಿಲ್ಲೆ, ನೆರೆ ರಾಜ್ಯಗಳಿಂದ ಖರೀದಿಸಿ ತಂದು ಮಾರಾಟ ಮಾಡುತ್ತೇವೆ. ಹಣ್ಣಿನ ಬೆಲೆಯಲ್ಲಿ ಕಳೆದ ವರ್ಷದಿಂದ ಯಾವುದೇ ಬದಲಾವಣೆಯಾಗಿಲ್ಲ. ರೂ.150ಕ್ಕೆ ಒಂದು ಕೆಜಿ ಮಾರಾಟ ಮಾಡುತ್ತಿದ್ದೇವೆ.
ನೇರಳೆ ಹಣ್ಣು ಮಾರಾಟಗಾರರು

ಆರ್‌. ಬಸವರೆಡ್ಡಿ ಕರೂರ

Advertisement

Udayavani is now on Telegram. Click here to join our channel and stay updated with the latest news.

Next