ಮಂಗಳೂರು: ಕೋವಿಡ್ ಉಲ್ಬಣಿಸುತ್ತಿರುವ ಕಾರಣ ದೇಶದ ವಿವಿಧ ಭಾಗಗಳಲ್ಲಿ ಆಕ್ಸಿಜನ್ (ಆಮ್ಲಜನಕ) ಬೇಡಿಕೆ ಏರಿಕೆಯಾಗುತ್ತಿರುವಂತೆ ಕರಾವಳಿ ಜಿಲ್ಲೆಗಳ ಲ್ಲಿಯೂ ಬೇಡಿಕೆ ವೃದ್ಧಿಸಿದೆ. ಆದರೆ ದ.ಕ., ಉಡುಪಿ ಜಿಲ್ಲೆಗಳಲ್ಲಿ ಸದ್ಯ ಕೊರತೆಯಿಲ್ಲ. ದ.ಕ.ದಲ್ಲಿರುವ 8 ಮೆಡಿಕಲ್ ಕಾಲೇಜು ಆಸ್ಪತ್ರೆಗಳು, ವೆನ್ಲಾಕ್‌ನಲ್ಲಿ ಆಕ್ಸಿಜನ್ ಸಂಗ್ರಹ ಸ್ಥಾವರವಿದ್ದು, 15 ದಿನಗಳಿಗೆ ಅಗತ್ಯವಿರುವಷ್ಟು ಸಂಗ್ರಹಿಸಲು ಸಾಧ್ಯವಿದೆ.
ದ.ಕ. 3 ಉತ್ಪಾದನಾ ಘಟಕ :
ದ.ಕ.ದಲ್ಲಿ ಸದ್ಯ ಸುಮಾರು 6,000 ಕ್ಯುಬಿಕ್ ಲೀಟರ್, ಉಡುಪಿಯಲ್ಲಿ 4,000 ಕ್ಯುಬಿಕ್ ಲೀ. ಆಕ್ಸಿಜನ್ ಬೇಡಿಕೆಯಿದೆ. “ಲಿಕ್ವಿಡ್ ಆಕ್ಸಿಜನ್’ ಅನ್ನು ಕೇರಳದಿಂದ ತಂದು ರೀಫಿಲ್ಲಿಂಗ್ ಮಾಡುವ ಒಂದು ಘಟಕ ಹಾಗೂ “ನ್ಯಾಚುರಲ್ ಏರ್’ ಅನ್ನು ಕಂಪ್ರಸ್ ಮಾಡಿ ಪ್ರತ್ಯೇಕಿಸಿ ಆಕ್ಸಿಜನ್ ತಯಾರಿಸುವ ಮತ್ತು ರೀಫಿಲ್ಲಿಂಗ್ ಮಾಡುವ ಎರಡು ಘಟಕಗಳು ದ.ಕ. ಜಿಲ್ಲೆಯಲ್ಲಿವೆ. ದ.ಕ. ಹಾಗೂ ಉಡುಪಿ ಜಿಲ್ಲೆಯ ಬಹುತೇಕ ಆಸ್ಪತ್ರೆಗಳಿಗೆ ಇಲ್ಲಿಂದಲೇ ಸರಬರಾಜಾಗುತ್ತಿದೆ.
ಕೊರೊನಾಕ್ಕಿಂತ ಮೊದಲು ಮಂಗಳೂರಿನ ಕೆಲವು ಆಸ್ಪತ್ರೆಗಳು 20 ಸಿಲಿಂಡರ್ ಸಾಮರ್ಥ್ಯದ ಒಂದು ಲಿಕ್ವಿಡ್ ಕಂಟೈನರ್ ಬಳಕೆ ಮಾಡುತ್ತಿದ್ದರೆ, ಕಳೆದ ವರ್ಷದ ಕೊರೊನಾ ವೇಳೆ ದಿನಕ್ಕೆ 4 ಲಿಕ್ವಿಡ್ ಕಂಟೈನರ್ ಬಳಕೆ ಮಾಡುತ್ತಿದ್ದವು. “ಉದಯವಾಣಿ’ ಜತೆಗೆ ಮಾತನಾಡಿದ ಆಕ್ಸಿಜನ್ ಪೂರೈಕೆದಾರ ನಾರಾಯಣ ಐತಾಳ ಅವರು, ಎಲ್ಲ ಆಸ್ಪತ್ರೆಗಳಿಂದ ಬೇಡಿಕೆ ಏರಿಕೆಯಾ ಗಿದೆ. ಸದ್ಯ ಕೊರತೆಯಿಲ್ಲ. ಲಿಕ್ವಿಡ್ ಆಕ್ಸಿಜನ್ ಮತ್ತು ಇತರ ಪರಿಕರಗಳು ಸೂಕ್ತ ರೀತಿಯಲ್ಲಿ ದೊರೆತರೆ ಪೂರೈಕೆ ಸಮಸ್ಯೆ ಆಗಲಾರದು ಎಂದರು.
ಕೈಗಾರಿಕೆಗಳಿಗೆ ಕಡಿತ? :
ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಕೈಗಾರಿಕೆಗಳಿಗೆ ವೆಲ್ಡಿಂಗ್, ಕಟ್ಟಿಂಗ್, ಫ್ಯಾಬ್ರಿಕೇಶನ್ ಸೇರಿದಂತೆ ವಿವಿಧ ಕಾರಣಕ್ಕೆ ಆಕ್ಸಿಜನ್ ಸಿಲಿಂಡರ್ ಬೇಕಾ ಗುತ್ತದೆ. ಕಳೆದ ವರ್ಷ ಕೊರೊನಾ ಸಂದರ್ಭ ವೈದ್ಯಕೀಯ ಆಕ್ಸಿಜನ್ ಕೊರತೆಯಾದ ಕಾರಣಕೈಗಾರಿಕಾ ಆಕ್ಸಿಜನ್ ಸಿಲಿಂಡರ್‌ಗಳನ್ನೇ ಆಸ್ಪತ್ರೆಗಳಲ್ಲಿ ಬಳಸುವಂತೆ ಸರಕಾರ ಸೂಚಿಸಿತ್ತು. ಸದ್ಯ ಕೈಗಾರಿಕೆಗಳಿಗೆ ಆಕ್ಸಿಜನ್ ಸಿಲಿಂಡರ್ ನೀಡಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ವೈದ್ಯಕೀಯ ಬಳಕೆಗೆ ಅಗತ್ಯವಿದ್ದರೆ ಕೈಗಾರಿಕೆಗೆ ನೀಡುವ ಆಕ್ಸಿಜನ್ ಕಡಿತ ಮಾಡುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಲ್ಲ. ಆವಶ್ಯಕತೆ ಯಷ್ಟನ್ನು ಮಂಗಳೂರಿನಲ್ಲೇ ಉತ್ಪಾದಿಸಲಾಗುತ್ತಿದೆ. ಮುಂದೆಯೂ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಔಷಧ ನಿಯಂತ್ರಕರ ಸಮಿತಿ ರಚಿಸಲಾಗಿದೆ. ರಾಜ್ಯದ ಎಲ್ಲ ಆಕ್ಸಿಜನ್ ಪೂರೈಕೆ ಮಾಡುವವರು ಹಾಗೂ ಅಧಿಕಾರಿಗಳು ಈ ಸಮಿತಿಯಲ್ಲಿದ್ದಾರೆ.
– ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ