Advertisement
ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ಬರುವ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಗಳು ತಾವು ಪ್ರಕಟಿಸಿದ ಹಲವು ಪುಸ್ತಕಗಳನ್ನು ಶೇ. 50ರ ರಿಯಾಯ್ತಿ ದರದಲ್ಲಿ ಮಾರಾಟ ಮಾಡಿದ್ದು, ಸುಮಾರು 5 ಲಕ್ಷ ರೂ. ವಹಿವಾಟು ನಡೆದಿದೆ.
Related Articles
Advertisement
ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದು ಸುಮಾರು 2 ಲಕ್ಷದ 48 ಸಾವಿರ ರೂ. ವಹಿವಾಟು ನಡೆಸಿದೆ. ಲೇಖಕ ಪ್ರಧಾನ ಗುರುದತ್ತ ಅವರ “ನಾಗರಿಕತೆಗಳು’ ಡಾ.ಸಿ.ಚಂದ್ರಪ್ಪ ಅವರ ‘ಪೆರಿಯಾರ್ ಚಿಂತನೆ’ ಕೃತಿಗಳು ಸೇರಿದಂತೆ ಹಲವು ಕೃತಿಗಳು ಸೇಲ್ ಆಗಿವೆ ಎಂದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿರುವ ಕೃತಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಯಾಗಿದ್ದು 1 ಲಕ್ಷದ 4 ಸಾವಿರ ವಹಿವಾಟು ನಡೆದಿದೆ. ಜತೆಗೆ ಕನ್ನಡ ಸಾಹಿತ್ಯ ಅಕಾಡೆಮಿ 60 ಸಾವಿರ ಪುಸ್ತಕಗಳು ಮಾರಾಟವಾಗಿವೆ.
ಊರು ಕೇರಿಗೆ ಬಾರಿ ಬೇಡಿಕೆ: ರಿಯಾಯ್ತಿ ದರದ ಪುಸ್ತಕ ಮಾರಾಟದಲ್ಲಿ ಕವಿ ಸಿದ್ಧಲಿಂಗಯ್ಯ ಅವರ ಆತ್ಮಕಥನ “ಊರು ಕೇರಿ’ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಈ ಕೃತಿಯ ಸುಮಾರು ನೂರು ಪುಸ್ತಕಗಳು ಮಾರಾಟವಾಗಿವೆ. ಜತೆಗೆ ನಟರಾಜ ಹುಳಿಯಾರ್ ಮತ್ತು ಕಾಳೇಗೌಡ ನಾಗರವ ಸಂಪಾದಕತ್ವದ “ಲೋಹಿಯಾ ಚಿಂತನೆಗಳು’, ಜಿ.ಪಿ.ರಾಜರತ್ನಂ ಅವರ “ಮಕ್ಕಳ ಕತೆಗಳು’,” ವಿಶ್ವ ಸಮ್ಮೇಳನ ಪುಸ್ತಕ’, ಸಿದ್ದಯ್ಯ ಪುರಾಣಿಕ ಅವರ “ಶರಣ ಚರಿತಾಮೃತ’ ಕೃತಿಗಳಿಗೆ ಬೇಡಿಕೆ ಇದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.
ಓದುಗರ ಬಳಿಗೆ ಪುಸ್ತಕಗಳನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ರಿಯಾಯ್ತಿದರ ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಧಿಕಾರದ ಪುಸ್ತಕಗಳು ಮಾರಾಟವಾಗಿರುವುದು ಖುಷಿ ತಂದಿದೆ.-ವಸುಂಧರಾ ಭೂಪತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ. ನನ್ನ “ಊರುಕೇರಿ’ ಕೃತಿಯನ್ನು ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕೊಳ್ಳುತ್ತಿದ್ದಾರೆ. ಈಗಾಗಲೇ ಮೂರು ಭಾಗಗಳನ್ನು ಹೊರತಂದಿದ್ದು, 4ನೇ ಭಾಗ ಬರೆಯಲು ಇದು ಪ್ರೇರಣೆ ನೀಡಿದೆ. ಶೀಘ್ರದಲ್ಲೇ ನಾಲ್ಕನೇ ಭಾಗ ಹೊರ ಬರಲಿದೆ.
-ಸಿದ್ದಲಿಂಗಯ್ಯ, ಕವಿ. * ದೇವೇಶ ಸೂರಗುಪ್ಪ