Advertisement

ಇಂದಿರಾ ಕ್ಯಾಂಟೀನ್‌ಗೆ ಹೆಚ್ಚಿದ ಬೇಡಿಕೆ 

05:34 PM Oct 07, 2018 | Team Udayavani |

ಹುಬ್ಬಳ್ಳಿ: ನಗರದಲ್ಲಿ ಆರಂಭಗೊಂಡ ಮೂರು ಇಂದಿರಾ ಕ್ಯಾಂಟೀನ್‌ಗಳಿಗೆ ಜನಸ್ಪಂದನೆ ಹೆಚ್ಚುತ್ತಿದ್ದು, ನಿತ್ಯ 500 ಜನರಿಗೆ ಊಟ-ಉಪಹಾರ ನೀಡಿದರೂ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ನಗರದ ಇನ್ನಷ್ಟು ಕಡೆ ಇಂದಿರಾ ಕ್ಯಾಂಟೀನ್‌ ಆರಂಭಿಸುವ ಒತ್ತಾಯವೂ ಹೆಚ್ಚತೊಡಗಿದೆ.

Advertisement

ನಗರದಲ್ಲಿ ಪ್ರಸ್ತುತ ಆರಂಭಗೊಂಡಿರುವ ಪ್ರತಿ ಕ್ಯಾಂಟೀನ್‌ ನಲ್ಲಿ 500 ಪ್ಲೇಟ್‌ ಉಪಹಾರ, ಊಟ ನೀಡಲಾಗುತ್ತಿದೆ. ಆದರೆ ಇದು ಕಡಿಮೆ ಬೀಳುತ್ತಿದ್ದು, ಬೆಳಗ್ಗೆ ಉಪಹಾರ ಹಾಗೂ ಮಧ್ಯಾಹ್ನ ಊಟಕ್ಕೆ ಹೆಚ್ಚಿನ ಬೇಡಿಕೆ ಇದೆ. ಬೆಳಗ್ಗೆ ಉಪಹಾರ 500 ಹಾಗೂ ಮಧ್ಯಾಹ್ನ ಊಟ 500 ಪ್ಲೇಟ್‌ಗಳು ಖಾಲಿ ಆಗುತ್ತಿದ್ದು ಜನರು ಮರಳಿ ಹೋಗುತ್ತಿದ್ದಾರೆ. ಆದರೆ ರಾತ್ರಿ ಊಟ ಸುಮಾರು 350-400 ಪ್ಲೇಟ್‌ಗಳು ಮಾರಾಟವಾಗುತ್ತಿದೆ.

ಅವಳಿನಗರಕ್ಕೆ ಮಂಜೂರಾದ 12 ಕ್ಯಾಂಟೀನ್‌ಗಳಲ್ಲಿ, ಸದ್ಯಕ್ಕೆ ಮೂರು ಮಾತ್ರ ಆರಂಭವಾಗಿದ್ದು, ಇನ್ನುಳಿದ 9 ಕ್ಯಾಂಟೀನ್‌ ಗಳು ಆರಂಭವಾಗಬೇಕಾಗಿವೆ. ಇದರಲ್ಲಿ ಬೆಂಗೇರಿ ಮಾರುಕಟ್ಟೆ, ಉಣಕಲ್ಲ ಹಾಗೂ ಕಿಮ್ಸ್‌ ಹಿಂಭಾಗ, ಹೊಸ ಬಸ್‌ ನಿಲ್ದಾಣದಲ್ಲಿನ ಕ್ಯಾಂಟಿನ್‌ಗಳು ಸಿದ್ಧಗೊಂಡಿದ್ದರೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

ಕಿಮ್ಸ್‌, ಬೆಂಗೇರಿ ಹಾಗೂ ಉಣಕಲ್ಲನಲ್ಲಿರುವ ಕ್ಯಾಂಟೀನ್‌ಗಳಿಗೆ ದಿನವೂ ಜನರು ಬಂದು ಹೋಗುತ್ತಿದ್ದಾರೆ. ಆದರೆ ಉದ್ಘಾಟನೆಯಾಗದ ಹಿನ್ನೆಲೆಯಲ್ಲಿ ಉಪಹಾರ, ಊಟ ಅಲ್ಲಿ ವಿತರಿಸಲಾಗುತ್ತಿಲ್ಲ. ಧಾರವಾಡದಲ್ಲಿ ಮಿನಿವಿಧಾನಸೌಧ ಹಾಗೂ ಹೊಸ ಬಸ್‌ ನಿಲ್ದಾಣದಲ್ಲಿ ಕ್ಯಾಂಟೀನ್‌ ನಿರ್ಮಾಣ ಸಂಪೂರ್ಣವಾಗಿದ್ದು ಉದ್ಘಾಟನೆ ಆಗಬೇಕಿದೆ. ಹುಬ್ಬಳ್ಳಿ ಹೊಸ ಬಸ್‌ ನಿಲ್ದಾಣದಲ್ಲಿ ನೀರಿನ ಕೊರತೆ ಎದುರಾಗಿದೆ.

ಎಲ್ಲ ಕ್ಯಾಂಟೀನ್‌ಗಳಲ್ಲಿ ನೀರಿನ ಕೊರತೆ: ಈಗಾಗಲೇ ಆರಂಭಗೊಂಡಿರುವ ನ್ಯೂ ಇಂಗ್ಲಿಷ್‌ ಸ್ಕೂಲ್‌, ಎಸ್‌.ಎಂ.ಕೃಷ್ಣ ನಗರ ಹಾಗೂ ಸೋನಿಯಾ ಗಾಂಧಿ ನಗರ ಇಂದಿರಾ ಕ್ಯಾಂಟೀನ್‌ ಗಳಲ್ಲಿ ನೀರಿನ ಕೊರತೆ ಎದುರಾಗುತ್ತಿದ್ದು, ಜಲಮಂಡಳಿ ಪ್ರತಿದಿನ ಒಂದು ಟ್ಯಾಂಕರ್‌ ನೀರು ನೀಡುತ್ತಿದೆ. ಆದರೆ ಎಲ್ಲ ಕ್ಯಾಂಟೀನ್‌ ಹಾಗೂ ಬೆಂಗೇರಿಯಲ್ಲಿರುವ ಕಿಚನ್‌ಗೆ ಎರಡು ನೀರಿನ ಟ್ಯಾಂಕ್‌ಗಳು ಬೇಕಾಗುತ್ತದೆ. ಇನ್ನು ಎಸ್‌.ಎಂ.ಕೃಷ್ಣಾ ನಗರ ಹಾಗೂ ಸೋನಿಯಾ ಗಾಂಧಿ ನಗರದಲ್ಲಿ ಕುಡಿಯುವ ನೀರಿನ ಬದಲಾಗಿ ಬೋರ್‌ವೆಲ್‌ ನೀರು ನೀಡಲಾಗುತ್ತಿದ್ದು, ಇದು ಕೂಡಾ ಒಂದು ಸಮಸ್ಯೆ ಆಗಿದೆ.

Advertisement

ಸದ್ಯ ಆರಂಭಗೊಂಡಿರುವ ಮೂರು ಇಂದಿರಾ ಕ್ಯಾಂಟೀನ್‌ನಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹೆಚ್ಚಿನ ಬೇಡಿಕೆಯೂ ಬರುತ್ತಿದೆ. ಆದರೆ ಸರಕಾರದ ನಿರ್ದೇಶನದಂತೆ 500 ಪ್ಲೇಟ್‌ಗಳಿಗೆ ಸೀಮಿತಗೊಳಿಸಿದ್ದಾರೆ. ಹೆಚ್ಚಿಗೆ ಆಗಮಿಸಿದ ಜನರು ಮರಳಿ ಹೋಗುತ್ತಿರುವುದನ್ನು ಕಾಣುತ್ತಿದ್ದೇವೆ. ಇನ್ನುಳಿದ ಹುಬ್ಬಳ್ಳಿಯ ಮೂರು ಹಾಗೂ ಧಾರವಾಡದ ಎರಡು ಕ್ಯಾಂಟೀನ್‌ಗಳು ಉದ್ಘಾಟನೆಗೊಂಡರೆ ಜನರಿಗೆ 
 ಅನುಕೂಲವಾಗಲಿದೆ. ಇದಲ್ಲದೇ ಕಿಮ್ಸ್‌ ಹಿಂಭಾಗದಲ್ಲಿರುವ ಕ್ಯಾಂಟೀನ್‌ಗೆ ದಿನನಿತ್ಯ ಜನರು ಆಗಮಿಸಿ ಯಾವಾಗ ಆರಂಭಿಸುತ್ತೀರಿ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
 ಪ್ರಕಾಶ ಪವಾರ,
 ಇಂದಿರಾ ಕ್ಯಾಂಟಿನ್‌ ನಿರ್ವಹಣಾ ವ್ಯವಸ್ಥಾಪಕ.

„ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next