Advertisement
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ದೇವನಹಳ್ಳಿ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದ ನಂತರ ಭೂಮಿಗೆ ಹೆಚ್ಚಿನ ಬೆಲೆ ಬಂದಂತಾಗಿದೆ. ಲೇಔಟ್‌ಗಳು ನಾಯಿ ಕೊಡೆಗಳಂತೆ ನಿರ್ಮಾಣವಾಗಿವೆ. ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ನೀರಾವರಿ ಮತ್ತು ಕೃಷಿಗೆ ಯೋಗ್ಯವಾದ ಭೂಮಿಯನ್ನು ಕೆಐಡಿಬಿ ಭೂಸ್ವಾಧೀನ ಪ್ರಕ್ರಿಯೆ ಆಗುತ್ತಿದೆ. ಇರುವ ಅಲ್ಪಸ್ವಲ್ಪದ ಜಮೀನುಗಳಲ್ಲಿ ರೈತರು ತರಕಾರಿ, ಹೂವು, ಹಣ್ಣು ಸೇರಿದಂತೆ ಹಲವು ಬೆಳೆಗಳನ್ನು ಬೆಳೆದು ಬೆಂಗಳೂರಿಗೆ ನೀಡುತ್ತಿದ್ದಾರೆ.
Related Articles
Advertisement
ಏನಿದು ಡ್ರಾಗನ್ ಫ್ರೂಟ್ಸ್ ಬೆಳೆ?: ಡ್ರಾಗನ್ ಫ್ರೂಟ್ಸ್ ನ್ನು ಮೊದಲ ಬಾರಿಗೆ ದಕ್ಷಿಣ ಅಮೆರಿಕಾದಲ್ಲಿ ಬೆಳೆಯಲಾಯಿತು. ಈ ಹಣ್ಣಿನಲ್ಲಿನ ಔಷಧೀಯ ಗುಣಗಳಿಂದ ಹೆಚ್ಚಿನ ಬೇಡಿಕೆ ಸೃಷ್ಟಿಯಾದ ಬೆನ್ನಲ್ಲೇ ಥಾಯ್‌ಲ್ಯಾಂಡ್, ವಿಯೇಟ್ನಾಂನಲ್ಲಿ ಈ ಬೆಳೆ ಪರಿಚಯಗೊಂಡಿತು. ಮಾರುಕಟ್ಟೆಯಲ್ಲಿ ಪ್ರತಿ ಹಣ್ಣಿಗೆ 70ರಿಂದ 100 ರೂ. ಇದ್ದು, ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ವಿದೇಶಗಳಲ್ಲಿ ಈ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ 6.4 ಹೆಕ್ಟೇರ್ ಡ್ರಾಗನ್ ಫ್ರೂಟ್ಸ್ ಬೆಳೆಯಲಾಗುತ್ತಿದೆ. ನೆಲಮಂಗಲ ತಾಲೂಕಿನಲ್ಲಿ ಡ್ರಾಗನ್ ಫ್ರೂಟ್ಸ್ ಬೆಳೆಯುತ್ತಿಲ್ಲ. ಇನ್ನುಳಿದ ಮೂರು ತಾಲೂಕುಗಳಾದ ದೇವನಹಳ್ಳಿ 0.64 ಹೆಕ್ಟೇರ್, ದೊಡ್ವಬಳ್ಳಾಪುರ 3.77 ಹೆಕ್ಟೇರ್, ಹೊಸಕೋಟೆ 2 ಹೆಕ್ಟೇರ್‌ನಲ್ಲಿ ಡ್ರಾಗನ್ ಫ್ರೂಟ್ಸ್ ಬೆಳೆಯಲಾಗುತ್ತಿದೆ.
4ರಿಂದ 6 ಲಕ್ಷ ರೂ. ವಾರ್ಷಿಕ ಆದಾಯ ಗಳಿಕೆ : ಮಾರುಕಟ್ಟೆಯಲ್ಲಿ ಡ್ರಾಗನ್ ಫ್ರೂಟ್ಸ್ ಪ್ರತಿ ಸಸಿ ದರ 40 ರೂ, ಇದ್ದು, ಒಮ್ಮೆ ನಾಟಿ ಮಾಡಿದರೆ 20 ರಿಂದ 25 ವರ್ಷ ಫಲ ನೀಡುತ್ತದೆ. 1 ಎಕರೆಯಲ್ಲಿ 1,800 ಸಸಿ ಗಳನ್ನು ನಾಡಿ ಮಾಡಬಹುದಾಗಿದ್ದು, ಪ್ರತಿ ಸಸಿಯಿಂದ 5 ರಿಂದ 8 ಕೆ.ಜಿ. ಹಣ್ಣು ಸಿಗುತ್ತದೆ. ಹೀಗಾಗಿ, ವಾರ್ಷಿಕ ಕನಿಷ್ಠ 4 ರಿಂದ 6 ಲಕ್ಷ ರೂ. ಆದಾಯ ಗಳಿಸಬಹುದಾಗಿದೆ. ಅಸ್ಥಿರ ಮಾರುಕಟ್ಟೆಯಲ್ಲಿ ಸಹಜ ರೀತಿಯ ಹಣ್ಣು ಬೆಳೆದು ಕೈಸುಟ್ಟುಕೊಳ್ಳುತ್ತಿರುವರ ನಡುವೆ ರಾಜ್ಯದಲ್ಲಿ ನರೇಗಾ ಸಹಾಯಧನ ಬಳಸಿಕೊಂಡು ಹಣ್ಣನ್ನು ಬೆಳೆದು ವಿದೇಶಗಳಿಗೆ ರಫ್ತು ಮಾಡುವ ಯುವ ರೈತರ ಸಂಖ್ಯೆ ಹೆಚ್ಚುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ : ಡ್ರಾಗನ್ ಫ್ರೂಟ್ಸ್ ನಲ್ಲಿ ನಾರಿನಂಶ ಹೆಚ್ಚಿದ್ದು, ಕಬ್ಬಿಣ, ಪ್ರೊಟೀನ್, ಕಾರ್ಬೋ ಹೈಡ್ರೇಟ್, ಮೆಗ್ನೀಷಿಯಂ, ವಿಟಮಿನ್ ಸಿ, ವಿಟಮಿನ್ ಇ ಪೋಷಕಾಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಕ್ಯಾನ್ಸರ್, ಹೃದಯ ರೋಗ, ಮಧುಮೇಹವನ್ನು ದೂರವಿಡಲು ಸಹಕಾರಿ ಯಾಗಿದೆ. ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಆರೋಗ್ಯಕ್ಕೆ ಪೂರಕ ಬೆಳೆಯಾಗಿದೆ. ನಿರ್ವಹಣಾ ವೆಚ್ಚ ತೀರಾ ಕಡಿಮೆ. ಶೇ.50ರಷ್ಟು ಸರ್ಕಾರದ ಸಹಾಯಧನ ಸಿಗಲಿದೆ.
ಡ್ರಾಗನ್ ಫ್ರೂಟ್ಸ್ ನ್ನು ನಮ್ಮ ಜಮೀನುಗಳಲ್ಲಿ ಬೆಳೆಯಬೇಕು ಎಂದು ನಿರ್ಧರಿಸಿ ಭೂಮಿಯನ್ನು ಹದ ಮಾಡಿ ಕೊಂಡು ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಾಡಲಾಯಿತು. ಪ್ರತಿ ಎಕರೆಗೆ 3 ಲಕ್ಷ ರೂ. ವೆಚ್ಚದಲ್ಲಿ ಬೆಳೆಗೆ ಕಂಬ ಸಿದ್ದಪಡಿಸಿಕೊಳ್ಳಬೇಕು. ನಿಗದಿತ ಅಂತರದಲ್ಲಿ ಕಲ್ಲುಗಳ ಕಂಬ, ಸುರುಳಿಯಾಕಾರದ ಟೈರ್, ಕಬ್ಬಿಣದ ಕಂಬಿ ಸಿದ್ಧಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಪ್ರಾಯೋ ಗಿಕವಾಗಿ ಬೆಳೆಯಲು ಮುಂದಾಗಿದ್ದೇವೆ. – ಕೃಷ್ಣಮೂರ್ತಿ, ರೈತ, ಕೋಡಿಹಳ್ಳಿ, ಮಧುರೆ ಹೋಬಳಿ
ಜಿಲ್ಲೆಯಲ್ಲಿ ಡ್ರಾಗನ್ ಫ್ರೂಟ್ಸ್ ಬೆಳೆಯಲು ರೈತರು ಮುಂದಾಗಿದ್ದಾರೆ. ಡ್ರಾಗನ್ ಫ್ರೂಟ್ಸ್ ಗೆ ಹೆಚ್ಚಿನ ಬೇಡಿಕೆ ಇದೆ. ಉದ್ಯೋಗಖಾತ್ರಿ ಯೋಜನೆಯಡಿ ತೋಟಗಾರಿಕಾ ಬೆಳೆಗೆ ಸಹಾಯಧನ ವಿತರಿಸಲಾಗುತ್ತಿದೆ. ಡ್ರಾಗನ್ ಫ್ರೂಟ್ಸ್ ಬೆಳೆಯುವ ರೈತರು ಇದರ ಸದುಪಯೋಗ ಮಾಡಿಕೊಳ್ಳಬಹುದಾಗಿದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಆರಂಭಿಸಿದ್ದು, ಡ್ರಾಗನ್ ಫ್ರೂಟ್ಸ್ ಗೆ ಸಹಾಯಧನ ಸಿಗಲಿದೆ. – ಗುಣವಂತ, ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕ
–ಎಸ್.ಮಹೇಶ್