ಬೆಂಗಳೂರು : ಎಂಬಿಎ, ಎಂಸಿಎ ಹಾಗೂ ಎಂ.ಟೆಕ್ ಮೊದಲಾದ ಸ್ನಾತಕೋತ್ತರ ಕೋರ್ಸ್‌ಗಳ ಸರ್ಕಾರಿ ಕೋಟದ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪ್ರವೇಶ ಪರೀಕ್ಷೆ, ದಾಖಲಾತಿ ಪರಿಶೀಲನೆ ಹಾಗೂ ಸೀಟು ಹಂಚಿಕೆ ಫಲಿತಾಂಶ ಸೇರಿದಂತೆ ಇಡೀ ಪ್ರಕ್ರಿಯೆ ಈ ವರ್ಷ ಗೊಂದಲದ ಗೂಡಾಗಿದೆ.
ಪ್ರವೇಶ ಪರೀಕ್ಷೆಗೆ ಮೇ.25ರಂದು ಅರ್ಜಿ ಸ್ವೀಕಾರ ಮಾಡಿದ ದಿನದಿಂದ ಆ.18ರಂದು ಪ್ರಕಟಿಸಿದ್ದ ರ್‍ಯಾಂಕಿಂಗ್ ಲಿಸ್ಟ್ ವರೆಗೂ ಅಭ್ಯರ್ಥಿಗಳಿಗೆ ಸೂಕ್ತ ಮಾಹಿತಿ ನೀಡಿದೇ, ನಿಗದಿತ ಸಮಯಕ್ಕೆ ಪ್ರಕ್ರಿಯೆ ಪೂರ್ಣಗೊಳಿಸದೇ ಇರುವುದರಿಂದ ಸರ್ಕಾರಿ ಕೋಟದಡಿ ಸೀಟು ಬಯಸಿ, ರ್‍ಯಾಂಕ್ ಪಡೆದಿರುವ ಅಭ್ಯರ್ಥಿಗಳು ಈಗ ಆತಂಕದಲ್ಲಿ ಇರುವಂತಾಗಿದೆ.
ಜುಲೈ 19ರಂದು ಪ್ರವೇಶ ಪರೀಕ್ಷೆಯ ಕೀ ಉತ್ತರ ಪ್ರಕಟಿಸಿದ್ದ ಪ್ರಾಧಿಕಾರ, ಅದರಲ್ಲಿ ತಪ್ಪುಗಳಾಗಿದೆ ಎಂದು ಸಬೂಬು ನೀಡಿ ವಾಪಾಸ್ ಪಡೆದು, ಪುನಃ ಹೊಸ ಕೀ ಉತ್ತರ ಪ್ರಕಟಿಸಿತ್ತು. ಈ ನಡುವೆ ಆ.18ರಂದು ರ್‍ಯಾಂಕಿಂಗ್ ಲಿಸ್ಟ್ ಬಿಡುಗಡೆ ಮಾಡಿತ್ತು. ಆದರೆ, ಇದೀಗ ಮೆರಿಟ್ ಲಿಸ್ಟ್ ಹೊಸದಾಗಿ ಪ್ರಕಟಿಸಲಿದ್ದೇವೆ ಎಂದು ಪ್ರಾಧಿಕಾರ ಸಂದೇಶ ರವಾನಿಸಿದೆ. ಹೀಗಾಗಿ ಎಂಬಿಎ ಮೊದಲಾದ ಸ್ನಾತಕೋತ್ತರ ಕೋರ್ಟ್‌ಗಳ ಸರ್ಕಾರಿ ಸೀಟುಗಾಗಿ ಕಾದು ಕುಳಿತಿರುವ ಸಾವಿರಾರು ಅಭ್ಯರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.
ಈ ವರ್ಷ ಸುಮಾರು 25 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ರ್‍ಯಾಂಕಿಂಗ್ ಲಿಸ್ಟ್ ಆಧಾರದಲ್ಲಿ ಸೀಟು ಆಯ್ಕೆ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಹೊಸದಾಗಿ ಮೆರಿಟ್ ಲಿಸ್ಟ್ ಪ್ರಕಟ ಸಂದೇಶ ದೂರವಾಣಿ ಮೂಲಕ ರವಾನಿಸಿದ್ದರಿಂದ ಮುಂದೆನಾಗುವುದು ಎಂಬ ಆತಂಕದಲ್ಲಿ ಇದ್ದಾರೆ.
ಪ್ರಾಧಿಕಾರವು ಪ್ರಸಕ್ತ ಸಾಲಿನಲ್ಲಿ ಅರ್ಜಿ ಸ್ವೀಕಾರ, ಪ್ರವೇಶ ಪತ್ರ ಡೌನ್‌ಲೋಡ್, ದಾಖಲಾತಿ ಪರಿಶೀಲನೆ, ಕೀ ಉತ್ತರ ಪ್ರಕಟ ಸೇರಿದಂತೆ ಎಲ್ಲ ಹಂತದಲ್ಲೂ ವಿಳಂಬ ಹಾಗೂ ಗೊಂದಲವನ್ನೇ ಸೃಷ್ಟಿಸಿತ್ತು. ಖಾಸಗಿ ಕಾಲೇಜುಗಳಲ್ಲಿ ಈಗಾಗಲೇ ವಾಣಿಜ್ಯ ಶಾಸ್ತ್ರದ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಮುಗಿದು, ತರಗತಿಗಳು ಆರಂಭವಾಗಿ ತಿಂಗಳು ಕಳೆದಿದೆ. ಮೊದಲ ಸೆಮಿಸ್ಟರ್ ಪರೀಕ್ಷೆಗೆ ವಿದ್ಯಾರ್ಥಿಗಳು ಸಜ್ಜಾಗುತ್ತಿದ್ದಾರೆ. ಆದರೆ, ಸರ್ಕಾರಿ ಕೋಟಾದಡಿ ಸೀಟು ಬಯಸಿರುವವರಿಗೆ ಇನ್ನೂ ಪ್ರವೇಶ ಪ್ರಕ್ರಿಯೆಯೇ ಮುಗಿದಿಲ್ಲ. ಸದ್ಯದ ವೇಳಾಪಟ್ಟಿ ಪ್ರಕಾರ ಸೀಟು ಹಂಚಿಕೆ ಪ್ರಕ್ರಿಯೆ ಮುಗಿಯಲು ಇನ್ನೂ ಹದಿನೈದಿ ದಿನ ಬೇಕಾಗುತ್ತದೆ. ಹೀಗಾದರೇ ಅಭ್ಯರ್ಥಿಗಳು ಸೆಮಿಸ್ಟರ್ ಪರೀಕ್ಷೆ ಸಜ್ಜಾಗುವುದು ಹೇಗೆ ಎಂದು ಪೋಷಕರು ಪ್ರಶ್ನಿಸಿದ್ದಾರೆ.