Advertisement

ಮೈಸೂರಿಗೂ ವಿಸ್ತರಿಸಿದ ಆ್ಯಂಬಿಡೆಂಟ್‌ ವಂಚನೆ

12:17 PM Dec 22, 2018 | |

ಬೆಂಗಳೂರು: ಆ್ಯಂಬಿಡೆಂಟ್‌ ಕಂಪನಿಯು ಮೈಸೂರಿನಲ್ಲಿ 1,500ಕ್ಕೂ ಹೆಚ್ಚು ಹೂಡಿಕೆದಾರರಿಗೆ ಅಂದಾಜು 80ರಿಂದ 100 ಕೋಟಿ ರೂ. ವಂಚಿಸಿದ್ದು, ಪ್ರಕರಣವನ್ನು ಕೇಂದ್ರ ತನಿಖಾ ದಳದ (ಸಿಬಿಐ) ತನಿಖೆಗೆ ವಹಿಸಲು ಕೋರಿ ಕಂಪನಿಯಿಂದ ವಂಚನೆಗೆ ಒಳಗಾಗಿರುವ ಮೈಸೂರಿನ ನಿವಾಸಿಗಳು ಇದೀಗ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಈ ಕುರಿತಂತೆ ನಫೀಸ್‌ ಪಾಷಾ ಸೇರಿ 20 ಹೂಡಿಕೆದಾರರು ಸಲ್ಲಿಸಿದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾ. ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಗೃಹ ಇಲಾಖೆ, ಮೈಸೂರಿನ ಉದಯಗಿರಿ ಪೊಲೀಸ್‌ ಠಾಣೆ ಹಾಗೂ ಸಿಬಿಐಗೆ ನೋಟಿಸ್‌ ಜಾರಿಗೊಳಿಸಿ ಆದೇಶಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅಮೃತೇಶ್‌ ಎಸ್‌.ಚೌಧರಿ ವಾದ ಮಂಡಿಸಿ, ಆ್ಯಂಬಿಡೆಂಟ್‌ ಕಂಪನಿ ಸಾವಿರಾರು ಜನರಿಂದ ಕೋಟ್ಯಂತರ ರೂ. ಪಡೆದು ಹಿಂದಿರುಗಿಸದೆ ವಂಚಿಸಿದೆ. ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ಪ್ರಕರಣವನ್ನು ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ. ಆದ್ದರಿಂದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿದರು.

ಈ ವೇಳೆ ಯಾವ ಕಾರಣಕ್ಕೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ನ್ಯಾಯಪೀಠ ಪ್ರಶ್ನಿಸಿತು, ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ಸಾರ್ವಜನಿಕರಿಗೆ ವಂಚಿಸಿದ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿ ಆದೇಶಿಸಬೇಕು ಎಂದು ಶಾರದಾ ಹಗರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ ಎಂದು ತಿಳಿಸಿ ಆ ತೀರ್ಪಿನ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ನೋಟಿಸ್‌ ಜಾರಿಗೆ ಆದೇಶಿಸಿತು.

ಅರ್ಜಿಯಲ್ಲಿ ಏನಿದೆ?: ಮೆರ್ಸೆಸ್‌ ಆ್ಯಂಬಿಟೆಂಡ್‌ ಮಾರ್ಕೆಟಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ 2016ರಲ್ಲಿ ಆರಂಭವಾಗಿತ್ತು. “ಬಂಧನ’ ಎಂಬ ಸ್ಕೀಂ ಪರಿಚಯಿಸಿ, ಹೂಡಿಕೆ ಮಾಡುವ ಪ್ರತಿ ಒಂದು ಲಕ್ಷ ರೂಪಾಯಿಗೆ ಪ್ರತಿ ವಾರ 9ರಿಂದ 10 ಸಾವಿರ ರೂ. ಲಾಭಾಂಶ ನೀಡುವುದಾಗಿ ತಿಳಿಸಿತ್ತು.

Advertisement

ಮೈಸೂರಿನಲ್ಲಿ 1,500ಕ್ಕೂ ಹೆಚ್ಚು ಹೂಡಿಕೆದಾರರು 80ರಿಂದ 100 ಕೋಟಿ ರೂ.ವರೆಗೆ ಹಣ ಹೂಡಿಕೆ ಮಾಡಿದ್ದರು. ಆರಂಭದಲ್ಲಿ ಲಾಂಭಾಂಶ ನೀಡಿದ್ದರೂ ನಂತರ ಯಾವುದೇ ಮಾಹಿತಿ ನೀಡದೆ ಹಾಗೂ ಹಣ ಹಿಂದಿರುಗಿಸದೆ ಕಂಪನಿಯನ್ನು ಮುಚ್ಚಲಾಯಿತು ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅಲ್ಲದೆ, ಈ ಕುರಿತು ನಫೀಸ್‌ ಪಾಷ ಮತ್ತಿತರರು ಉದಯಗಿರಿ ಠಾಣೆಗೆ ದೂರು ಸಲ್ಲಿಸಿದರೆ, ಅದನ್ನು ಪೊಲೀಸರು ಸ್ವೀಕರಿಸಲಿಲ್ಲ. ಹೀಗಾಗಿ, 2018ರ ಮೇ 29ರಂದು ಮೈಸೂರಿನ 1ನೇ ಎಸಿಜೆ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಲಾಗಿತ್ತು.

ನ್ಯಾಯಾಲಯವು ಜೂನ್‌ 9ರಂದು ದೂರಿನ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉದಯಗಿರಿ ಠಾಣೆ ಪೊಲೀಸರಿಗೆ ಆದೇಶಿಸಿತ್ತು. ಆದರೂ ಪ್ರಕರಣದ ತನಿಖಾಧಿಕಾರಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಅರ್ಜಿಯಲ್ಲಿ ಕೋರಲಾಗಿದೆ.

ಉದ್ಯಮಿಯ ಬಂಧಿಸದಂತೆ ಸಿಸಿಬಿಗೆ ನಿರ್ದೇಶನ: ಆ್ಯಂಬಿಡೆಂಟ್‌ ವಂಚನೆ ಪ್ರಕರಣಕ್ಕೆ ಸಂಬಂಧ ರಿಯಲ್‌ ಎಸ್ಟೇಟ್‌ ಉದ್ಯಮಿ ವಿಜಯ್‌ ಟಾಟಾ ಅವರನ್ನು ಸದ್ಯಕ್ಕೆ ಬಂಧಿಸದಂತೆ ಸಿಸಿಬಿ ಪೊಲೀಸರಿಗೆ ಶುಕ್ರವಾರ ಹೈಕೋರ್ಟ್‌ ನಿರ್ದೇಶನ ನೀಡಿದೆ. ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ವಿಜಯ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ಏಕ ಸದಸ್ಯ ಪೀಠ, ವಿಜಯ್‌ ಟಾಟಾರನ್ನು ಸದ್ಯಕ್ಕೆ ಬಂಧಿಸದಂತೆ ಸಿಸಿಬಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಜ.10ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next