Advertisement

ಅನನುಭವಿ ಚಾಲಕರಿಂದ ಅಪಘಾತ ಹೆಚ್ಚಳ

06:00 AM Nov 25, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ನಿತ್ಯ ಲಕ್ಷಾಂತರ ಪ್ರಯಾಣಿಕರನ್ನು ಕೊಂಡೊಯ್ಯುವ ಖಾಸಗಿ ಬಸ್‌ಗಳು ಸೇರಿದಂತೆ ಭಾರಿ ವಾಹನಗಳನ್ನು ಚಾಲನೆ ಮಾಡುವ ಚಾಲಕರಿಗೆ ಕೌಶಲ್ಯ ಆಧಾರಿತ ಪರಿಣಿತಿಯೇ ಇಲ್ಲ. ಈ ಕೊರತೆಯೇ “ಮಂಡ್ಯ ಬಸ್‌ ದುರಂತ’ದಂತಹ ಅಪಘಾತಗಳಿಗೆ ಕಾರಣವಾಗುತ್ತಿದೆಯೇ? ಎಂಬ ಪ್ರಶ್ನೆ ಮೊದಲಿನಿಂದಲೂ ಇದೆ..

Advertisement

ಸಾರಿಗೆ ಇಲಾಖೆ ವಾರ್ಷಿಕ ವರದಿ ಪ್ರಕಾರವೇ ರಾಜ್ಯದಲ್ಲಿ ಬಸ್‌, ಒಪ್ಪಂದ ಮತ್ತು ಮಜಲು, ಶಾಲಾ ವಾಹನಗಳು ಸೇರಿದಂತೆ ಸಾರ್ವಜನಿಕ ಸಾರಿಗೆ ವಾಹನಗಳನ್ನು ಚಾಲನೆ ಮಾಡುವ 17.05 ಲಕ್ಷ ಚಾಲಕರಿದ್ದಾರೆ. ಆದರೆ, ಅವರಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ನೀಡುವಂತಹ ಕೌಶಲ್ಯ ಆಧಾರಿತ ಚಾಲನಾ ತರಬೇತಿ ಹೊಂದಿದವರ ಸಂಖ್ಯೆ ಶೇ. 10ರಷ್ಟೂ ಇಲ್ಲ. ಹಾಗೂ ಈ ಚಾಲಕರ ನೇಮಕ ಮಾಡಿಕೊಳ್ಳುವಾಗ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದ ಸೂಕ್ತ ಮಾನದಂಡಗಳ ಪಾಲನೆಯೂ ಇಲ್ಲ. ಪರಿಣಾಮ ಅಮಾಯಕರು ಇದಕ್ಕೆ ಬಲಿಯಾಗುತ್ತಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಕೇವಲ ಭಾರಿ ವಾಹನಗಳ ಚಾಲನಾ ಅನುಜ್ಞಾ ಪತ್ರ (ಲೈಸನ್ಸ್‌) ಹೊಂದಿದರೆ ಸಾಲದು, ಈ ಅನುಜ್ಞಾ ಪತ್ರದೊಂದಿಗೆ ಎರಡು ವರ್ಷ ಅನುಭವ ಇರಬೇಕು. ಕನಿಷ್ಠ ಎಸ್ಸೆಸ್ಸೆಲ್ಸಿ ಪೂರೈಸಿರಬೇಕು. ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಸ್ವಯಂ ಚಾಲಿತ ಚಾಲನಾ ವಾಹನಪಥದಲ್ಲಿ ನಿಗದಿತ ಸಮಯದಲ್ಲಿ ಬಸ್‌ ಓಡಿಸಬೇಕು. ನಂತರ ಹೆದ್ದಾರಿ, ಘಟ್ಟ ಪ್ರದೇಶಗಳಲ್ಲಿ ಹಾಗೂ ಹಗಲು-ರಾತ್ರಿ ಚಾಲನೆ ಬಗ್ಗೆ ತರಬೇತಿ ನೀಡಲಾಗುವುದು. ಅಲ್ಲದೆ, ವಿವಿಧ ಸನ್ನಿವೇಶಗಳಲ್ಲಿ ಚಾಲಕನ ವರ್ತನೆ ಹೇಗಿರಬೇಕು? ಮೋಟಾರು ವಾಹನ ಕಾಯ್ದೆ ಬಗ್ಗೆ ತಕ್ಕಮಟ್ಟಿನ ಜ್ಞಾನ ಹಾಗೂ ವಾಹನದ ಕನಿಷ್ಠ ತಾಂತ್ರಿಕ ಜ್ಞಾನದ ಬಗ್ಗ ತಿಳಿವಳಿಕೆ ನೀಡಲಾಗುವುದು. ಆದರೆ, ಖಾಸಗಿ ಬಸ್‌ ಚಾಲಕರ ನೇಮಕಾತಿ ಸಂದರ್ಭದಲ್ಲಿ ಬಹುತೇಕ ಕಡೆ ಈ ಹಂತಗಳನ್ನು ಅನುಸರಿಸುವುದೇ ಇಲ್ಲ ಎಂದು ಕೆಎಸ್‌ಆರ್‌ಟಿಸಿ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

1.70 ಲಕ್ಷ ಜನಕ್ಕೆ ಫ್ರೆಶರ್‌ ಕೋರ್ಸ್‌
ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಚಾಲನಾ ಅನುಜ್ಞಾ ಪತ್ರ (ಲೈಸನ್ಸ್‌)ಗಳ ನವೀಕರಣ ವೇಳೆ ಫ್ರೆಶರ್‌ ಕೋರ್ಸ್‌ ನೀಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಅದರಂತೆ ರಾಜ್ಯದ ಎರಡು ಕಡೆಗಳಲ್ಲಿ ಮೂರು ವರ್ಷಗಳ ಹಿಂದೆ ಸಾರಿಗೆ ಇಲಾಖೆಯು ಅಶೋಕ್‌ ಲೈಲ್ಯಾಂಡ್‌ ಸಹಯೋಗದಲ್ಲಿ ಚಾಲನಾ ತರಬೇತಿ ಮತ್ತು ಸಂಶೋಧನಾ ಸಂಸ್ಥೆ (ಐಡಿಟಿಆರ್‌) ತೆರೆಯಲಾಗಿದೆ. ಇಲ್ಲಿ ಒಂದು ದಿನದ ತರಬೇತಿ ನೀಡಲಾಗುತ್ತಿದೆ. ಆದರೆ, ಕೇವಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಹಾಗೂ ಧಾರವಾಡ ವಿಭಾಗದ ವ್ಯಾಪ್ತಿಯಲ್ಲಿ ಇರುವವರಿಗೆ ಮಾತ್ರ ಕಡ್ಡಾಯಗೊಳಿಸಿದ್ದು, ಇದುವರೆಗೆ ಎರಡೂ ಕಡೆಯಿಂದ 1.70 ಲಕ್ಷ ಜನ ಪ್ರಮಾಣಪತ್ರ ಪಡೆದಿದ್ದಾರೆ. ಉಳಿದವರಿಗೆ ಇದು ಆಯ್ಕೆ ಮಾತ್ರ ಎಂದು ಐಡಿಟಿಆರ್‌ ಪ್ರಾಂಶುಪಾಲ ರಮೇಶ ಅಂಬಣ್ಣವರ ಮಾಹಿತಿ ನೀಡುತ್ತಾರೆ.

ಸಾಮಾನ್ಯವಾಗಿ ಹತ್ತಾರು ವರ್ಷಗಳ ಹಿಂದೆ ಭಾರಿ ವಾಹನಗಳ ಚಾಲನಾ ಅನುಜ್ಞಾ ಪತ್ರ ಹೊಂದಿರುತ್ತಾರೆ. ಆದರೆ, ನಂತರದ ಅವಧಿಯಲ್ಲಿ ರಸ್ತೆಗಳು ಮತ್ತು ವಾಹನಗಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಆಗಿರುತ್ತದೆ. ಈಗ ಹೈಸ್ಪೀಡ್‌ ವಾಹನಗಳು ರಸ್ತೆಗಿಳಿದಿವೆ. ನಿರ್ದಿಷ್ಟ ಅವಧಿಯಲ್ಲಿ ನಿಗದಿತ ದೂರ ಕ್ರಮಿಸುವ ಒತ್ತಡ ಚಾಲಕರುಗಳ ಮೇಲಿರುತ್ತದೆ. ಈ ಹಿನ್ನೆಲೆಯಲ್ಲಿ ನವೀಕರಣದ ವೇಳೆ ಕೌಶಲ್ಯಾಧಾರಿತ ಚಾಲನಾ ತರಬೇತಿ ಅವಶ್ಯಕತೆ ಹೆಚ್ಚಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

Advertisement

33 ಸಾವಿರ ಅಪಘಾತ; 33 ಸಾವು!
ರಾಜ್ಯದಲ್ಲಿ ಕಳೆದ ಒಂದೇ ವರ್ಷದಲ್ಲಿ 33 ಸಾವಿರಕ್ಕೂ ಅಧಿಕ ಅಪಘಾತಗಳು ಸಂಭವಿಸಿದ್ದು, 32,803 ಜನ ಸಾವನ್ನಪ್ಪಿದ್ದಾರೆ!
ಹೌದು, ಸ್ವತಃ ಸಾರಿಗೆ ಇಲಾಖೆ ನೀಡಿದ ಮಾಹಿತಿಯಂತೆ 2017ರ ಹಣಕಾಸು ವರ್ಷದ ಅಂತ್ಯಕ್ಕೆ ವಿವಿಧ ಪ್ರಕಾರದ 33 ಸಾವಿರಕ್ಕೂ ಅಧಿಕ ಅಪಘಾತಗಳು ಸಂಭವಿಸಿವೆ. ಇದರಲ್ಲಿ 10,609 ಮಾರಣಾಂತಿಕ ಮತ್ತು 22,491 ಮಾರಣಾಂತಿಕವಲ್ಲದ ಅಪಘಾತಗಳಾಗಿವೆ. ಇದರಲ್ಲಿ 32,803 ಜನ ಮೃತಪಟ್ಟಿದ್ದು, 30,470 ಜನ ಗಾಯಗೊಂಡಿದ್ದಾರೆ. ಇದರಲ್ಲಿ ಬಸ್‌ ಅಪಘಾತಗಳೂ ಸೇರಿವೆ.

ಮದ್ಯಪಾನ ಸೇರಿದಂತೆ ಇತರೆ ಅಪರಾಧಗಳ ಹಿನ್ನೆಲೆಯಲ್ಲಿ ಚಾಲಕರಿಂದ ಆಗಸ್ಟ್‌ ಅಂತ್ಯಕ್ಕೆ ಪೊಲೀಸ್‌ ಇಲಾಖೆ ಸಂಗ್ರಹಿಸಿದ ಲೈಸನ್ಸ್‌ಗಳ ಸಂಖ್ಯೆ ಹಾಗೂ ಸಾರಿಗೆ ಇಲಾಖೆ ಅವುಗಳನ್ನು ಅಮಾನತುಗೊಳಿಸಿದ ಸಂಖ್ಯೆ ಹೀಗಿದೆ.
ಲೈಸನ್ಸ್‌ ಸಂಗ್ರಹ        
ಮದ್ಯ ಸೇವಿಸಿ ಚಾಲನೆ- 583
ಇತರೆ ಅಪರಾಧ- 391
ಅಮಾನತು
ಮದ್ಯಪಾನ ಅಪರಾಧ- 340
ಇತರೆ ಅಪರಾಧ- 141

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next