Advertisement
ಹುಬ್ಬಳ್ಳಿ: ಕೋವಿಡ್-19 ಪರಿಣಾಮ ತರಗತಿಗಳು ನಡೆಯದ ಕಾರಣ ಉಚಿತ ಶಿಕ್ಷಣ ನೀಡುವ ಸರಕಾರಿ ಶಾಲೆಗಳ ಮೌಲ್ಯ ಹೆಚ್ಚಾಗಿದ್ದು, 2021-22ನೇ ಶೈಕ್ಷಣಿಕ ವರ್ಷದಲ್ಲೂ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಏರಿಕೆಯಾಗಿದೆ.
Related Articles
Advertisement
ಧಾರವಾಡ ನಗರ ಹಾಗೂ ಮಹಾನಗರ ಪಾಲಿಕೆ (ಹುಬ್ಬಳ್ಳಿ ನಗರ) ಎರಡು ಬ್ಲಾಕ್‌ಗಳಲ್ಲಿ ಖಾಸಗಿ ಶಾಲೆಗಳು ಕೊಂಚ ಪಾರಮ್ಯ ಮೆರೆದಿವೆ. ಆದರೆ ಅನುದಾನಿತ ಶಾಲೆಗಳಲ್ಲಿ ಎಲ್ಲಾ ತರಗತಿಗಳ ದಾಖಲಾತಿಯಲ್ಲಿ ಇಳಿಮುಖ ಕಂಡಿದೆ. ಪ್ರಸಕ್ತ ಸಾಲಿನಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯಬೇಕಿದ್ದ ಗುರಿಯಲ್ಲಿ ಸಾಕಷ್ಟು ಕಡಿಮೆಯಾದರೂ ಹೆಚ್ಚಿನ ಪ್ರಮಾಣದಲ್ಲಿ ದಾಖಲಾತಿ ಪಡೆದಿರುವುದು ಸರಕಾರಿ ಶಾಲೆಯಲ್ಲಿ. ಎಲ್ಲಾ ತರಗತಿಯ ವಿದ್ಯಾರ್ಥಿಗಳು ಸರಕಾರಿ ಶಾಲೆಗಳ ಕಡೆಗೆ ಮುಖ ಮಾಡಿದ್ದಾರೆ.
ಇನ್ನು ಒಂದನೇ ತರಗತಿಯ ದಾಖಲಾತಿಯಲ್ಲಿ ಸರಕಾರಿ ಶಾಲೆಗಳಿಗೆ ನೀಡಿದ ಗುರಿ ಬಹುತೇಕ ತಲುಪಿದೆ. ಆದರೆ ಅನುದಾನ ರಹಿತ ಶಾಲೆಗಿದ್ದ ಗುರಿಯ ಅರ್ಧದಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ. ಸರಕಾರಿ ಶಾಲೆಗಳು-15,474 (ಗುರಿ-16,517), ಅನುದಾನಿತ-1770 (2524), ಅನುದಾನ ರಹಿತ-7761 (14,022), ಇತರೆ-271 (453). ಆದರೆ ಈ ಬಾರಿ ಒಂದನೇ ತರಗತಿಗೆ 25,276 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, 33,516 ಗುರಿಯಿತ್ತು.
ದುಬಾರಿ ಶಿಕ್ಷಣ: ಶಾಲೆಗಳು ಆರಂಭವಾಗದೆ ಮನೆಯಲ್ಲಿ ಕಲಿಯುವ ಮಕ್ಕಳಿಗೆ ದುಬಾರಿ ಶುಲ್ಕ ಪಾವತಿಸುವುದ್ಯಾಕೆ ಎನ್ನುವ ಮನಸ್ಥಿತಿ ಪಾಲಕರಲ್ಲಿ ಮೂಡಿದೆ. ಇದರೊಂದಿಗೆ ಶುಲ್ಕದ ಜತೆಗೆ ಸ್ಮಾಟ್ ìಫೋನ್, ಟ್ಯಾಬ್, ಲ್ಯಾಪ್‌ಟಾಪ್‌ನಂತಹ ಉಪಕರಣಗಳು, ಇದಕ್ಕೆ ಬೇಕಾದ ಇಂಟರ್ ನೆಟ್ ಸೌಲಭ್ಯ ಪಡೆಯಲಾಗದ ಪರಿಸ್ಥಿತಿಯಲ್ಲಿ ಪಾಲಕರಿದ್ದಾರೆ. ಇವೆಲ್ಲವನ್ನೂ ಹೇಗಾದರೂ ಮಾಡಿ ಒದಗಿಸೋಣ ಎನ್ನುವವರಿಗೆ ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಇಂಟರ್‌ನೆಟ್ ಸೌಲಭ್ಯವಿಲ್ಲ.
ಇನ್ನು ಮನೆಯಲ್ಲಿ ಮೂರ್‍ನಾಲ್ಕು ಮಕ್ಕಳಿದ್ದರೆ ಎಲ್ಲರಿಗೂ ಏಕಕಾಲಕ್ಕೆ ತರಗತಿಗಳಿದ್ದರೆ ಪ್ರತಿಯೊಬ್ಬರಿಗೊಂದು ಸ್ಮಾರ್ಟ್‌ಫೋನ್ ಖರೀದಿಸಬೇಕಾಗುತ್ತದೆ. ಶಾಲೆಗಳೇ ನಡೆಯದಿರುವಾಗ ಇಷ್ಟೆಲ್ಲಾ ಖರ್ಚು ಮಾಡುವುದ್ಯಾಕೆ. ಶಾಲೆಗಳು ಆರಂಭವಾದ ನಂತರ ನೋಡಿದರಾಯ್ತು ಎನ್ನುವ ಮನಸ್ಥಿತಿ ಪಾಲಕರಲ್ಲಿ ಇರಬಹುದು. ಆದರೆ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಇಂತಹ ಹೊರೆಯಾಗುವ ಪರಿಸ್ಥಿತಿ ಇಲ್ಲ. ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯ ಪಾಲಕರ ಆರ್ಥಿಕ ಪರಿಸ್ಥಿತಿ ಅವಲೋಕಿಸಿ ಅವರಿಗೆ ಅಗತ್ಯವಾದ ಮಾರ್ಗದಲ್ಲಿ ಪಾಠ-ಪ್ರವಚನ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ ಸರಕಾರದಿಂದ ಬರುವ ಬಿಸಿಯೂಟ ಸೇರಿದಂತೆ ಇನ್ನಿತರೆ ಸೌಲಭ್ಯ ದೊರೆಯುತ್ತಿವೆ. ಇಂತಹ ಹಲವು ಸಕಾರಾತ್ಮಕ ಅಂಶಗಳು ಪಾಲಕರು ಮನಸ್ಸು ಸರಕಾರಿ ಶಾಲೆಗಳತ್ತ ನೆಟ್ಟಿದೆ.