Advertisement

ಪರಿಹಾರ ಹೆಚ್ಚಿಸಿ ಸಂತ್ರಸ್ತರ ಬದುಕು ಕಟ್ಟಿ ಕೊಡಿ

12:48 PM Oct 29, 2019 | Suhan S |

ಹಾವೇರಿ: ನೆರೆ ಸಂತ್ರಸ್ತರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್‌) ಮಾರ್ಗ ಸೂಚಿಯಂತೆ ಪರಿಹಾರ ಕೊಟ್ಟರೆ ಅದು ಯಾವುದಕ್ಕೂ ಸಾಲದು. ಸರ್ಕಾರ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಬದಿಗಿಟ್ಟು ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಪರಿಹಾರ ಹೆಚ್ಚಿಸಬೇಕು ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಕೊಡಗಿನಲ್ಲಿ ಅತಿವೃಷ್ಟಿಯಾದಾಗ ಮೈತ್ರಿ ಸರ್ಕಾರವೇ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವ ಮೂಲಕ ಶಾಶ್ವತ ಪರಿಹಾರದ ವ್ಯವಸ್ಥೆ ಮಾಡಿತ್ತು. ಅದೇ ರೀತಿಯ ತೀರ್ಮಾನವನ್ನು ಈಗ ಸರ್ಕಾರ ಕೈಗೊಳ್ಳಬೇಕಾಗಿದೆ. ಪುನರ್ವಸತಿ ಆಗಬೇಕು ಎಂಬ ಬೇಡಿಕೆ ಇಟ್ಟ ಹಳ್ಳಿಗಳಲ್ಲಿ ತಕ್ಷಣ ಎತ್ತರದ ಸ್ಥಳದಲ್ಲಿ ಹೊಸ ಬಡಾವಣೆಗಳನ್ನು ಸರ್ಕಾರವೇ ಕಟ್ಟಿ ಕೊಡುವ ಕೆಲಸ ಆಗಬೇಕು. ಪರಿಹಾರದ ಹಣ ದುರ್ಬಳಕೆ, ಸೋರಿಕೆ ಆಗಬಾರದು. ಸದ್ಬಳಕೆ ಆಗಬೇಕು. ಈ ಬಗ್ಗೆ ಜಿಲ್ಲಾವಾರು ಮಾಹಿತಿ ಪಡೆದು ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು.

ಯಾವುದೇ ಸರ್ಕಾರ ಇದ್ದರೂ ರಾತ್ರೋರಾತ್ರಿ ಪರಿಹಾರ ದೊರಕಿಸಲು ಸಾಧ್ಯವಿಲ್ಲ. ಸರ್ಕಾರಕ್ಕೆ ಎರಡು ತಿಂಗಳು ಸಮಯಾವಕಾಶ ನೀಡಲಾಗಿದೆ. ಮತ್ತೆ ಇನ್ನೂ ಸಮಯ ನೀಡಲು ಆಗದು. 15ರಿಂದ ಒಂದು ತಿಂಗಳೊಳಗೆ ಸರ್ಕಾರ ಜನರಿಗೆ ಪರಿಹಾರ ದೊರಕಿಸಿ ಕೊಡಲೇಬೇಕಾಗಿದೆ. ಈ ವಿಚಾರವಾಗಿ ನಾನು ಈವರೆಗೆ ಸರ್ಕಾರದ ವಿರುದ್ಧ ಕಠಿಣ ಪದಬಳಕೆ ಮಾಡಿಲ್ಲ. ಜನರ ನಿರೀಕ್ಷೆಗಳನ್ನು ಮುಟ್ಟುವ ದಿಸೆಯಲ್ಲಿ ಸಲಹೆ ಮಾತ್ರ ನೀಡಿದ್ದೇನೆ. ಟೀಕೆ ಮಾಡುವುದರಿಂದ ಜನರಿಗೆ ಪರಿಹಾರ ಸಿಗಲ್ಲ. ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಮೈತ್ರಿ ಸರ್ಕಾರ ಅವಧಿಯಲ್ಲಿ ಮಾಡಿದ ಸಾಲಮನ್ನಾದ ತಾಲೂಕಾವಾರು ರೈತರ ಪಟ್ಟಿಯನ್ನು ಒಳಗೊಂಡ ಪುಸ್ತಕ ಮಾಡಲಾಗಿದೆ. ಯಾರು ಬೇಕಾದರೂ ಪಟ್ಟಿ ಪರೀಕ್ಷೆ ಮಾಡಬಹುದು. ಯಾವ ರೈತರಿಗಾದರು ಹಣ ಸಿಗದೆ ಇದ್ದರೆ, ಬ್ಯಾಂಕಿನವರು ದಾರಿ ತಪ್ಪಿಸಿದ್ದರೆ ನನಗೆ ಮಾಹಿತಿ ನೀಡಿ ಸರಿಪಡಿಸಿಕೊಡುತ್ತೇನೆ. ಯಾವುದೇ ದುರುಪಯೋಗ ಆಗದ ರೀತಿಯಲ್ಲಿ ಸಾಲಮನ್ನಾ ಯೋಜನೆ ನಮ್ಮ ಅವಧಿಯಲ್ಲಿ ಜಾರಿಗೆ ತಂದಿದ್ದೇವೆ. ಆದರೆ, ಸರಿಯಾಗಿ ಪ್ರಚಾರ ಸಿಗಲಿಲ್ಲ. ಸಾಲ, ಸಂಕಷ್ಟಕ್ಕೆ ಹೆದರಿ ರೈತರು ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಇದಕ್ಕೆಲ್ಲ ಅಂಜಬಾರದು. ಎಲ್ಲ ರೀತಿಯಲ್ಲಿ ನೆರವಿಗೆ ಬರುವ ರೀತಿಯಲ್ಲಿ ಸರ್ಕಾರದ ಮನವೊಲಿಸುವ ಕೆಲಸ ಮಾಡುತ್ತೇನೆ ಎಂದರು.

ವಿಧಾನ ಪರಿಷತ್‌ ಸದಸ್ಯ, ಮಾಜಿ ಸ್ಪೀಕರ್‌ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ, ಜಿಲ್ಲಾಧ್ಯಕ್ಷ ಅಶೋಕ ಬೇವಿನಮರ, ಡಾ| ಸಂಜಯಡಾಂಗೆ, ಮಹಾಂತೇಶ ಬೇವಿನಹಿಂಡಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next