ಬೆಂಗಳೂರು: ನಗರಕ್ಕೆ ಹೊರ ರಾಜ್ಯದಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ನಗರದಲ್ಲಿ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ ಹೆಚ್ಚಳವಾಗುತ್ತಿವೆ. ಕ್ವಾರಂಟೈನ್ ನಿಯಮಾನುಸಾರ ಸೋಂಕು ಪರೀಕ್ಷೆ ವರದಿ ಪ್ರಕಟವಾದ ಮೇಲೆ ಸಂಬಂಧ ಪಟ್ಟವರನ್ನು ಹೋಂ ಕ್ವಾರಂಟೈನ್ ಮಾಡಬೇಕು.
ಆದರೆ, ಇತ್ತೀಚಿನ ದಿನಗಳಲ್ಲಿ ವರದಿ ಬರುವ ಮುನ್ನವೇ ಪ್ರಯಾಣಿಕರನ್ನು ಮನೆಗಳಿಗೆ ಕಳುಹಿಸುತ್ತಿರುವ ಹಿನ್ನೆಲೆಯಲ್ಲಿ ವರದಿ ಬಂದ ಮೇಲೆ ಕ್ವಾರಂಟೈನ್ ಆದವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಹಾಗೂ ಅವರು ಇರುವ ಪ್ರದೇಶವನ್ನು ಕಂಟೈನ್ಮೆಂಟ್ ಮಾಡುವ ಪ್ರಕ್ರಿಯೆ ಪ್ರಾರಂಭವಾಗುತ್ತಿದೆ. ಇನ್ನು ರಾಜಸ್ಥಾನದಿಂದ ಹಿಂದಿರುಗಿದ 37 ವರ್ಷದ ಮಹಿಳೆಗೆ ಸೋಮವಾರ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಮಹಿಳೆ ನೆಲೆಸಿದ್ದ ಧರ್ಮರಾಯ ಸ್ವಾಮಿ ದೇವಸ್ಥಾನ ಸಮೀಪದ ವಸತಿ ಸಮುಚ್ಚಯ ಪ್ರದೇಶವನ್ನು ಕಂಟೈನ್ಮೆಂಟ್ ಮಾಡಲಾಗಿದೆ.
ಅವರ ಕುಟುಂಬ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಎಸ್.ಪಿ. ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಅದೇ ರೀತಿ ವಿಶ್ವೇಶ್ವರಪುರದ ವ್ಯಕ್ತಿಯೊಬ್ಬರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಫುಡ್‌ಸ್ಟ್ರೀಟ್ ಅನ್ನು ಮಂಗಳವಾರ ಕಂಟೈನ್ಮೆಂಟ್ ಮಾಡಲಾಗಿದೆ ಎಂದು ದಕ್ಷಿಣ ವಲಯದ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಸೋಂಕಿತರ ಸಂಖ್ಯೆ 397ಕ್ಕೆ ಏರಿಕೆ: ನಗರದಲ್ಲಿ ಮಂಗಳವಾರ ಒಟ್ಟು 12 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ ಒಟ್ಟು ಸೋಂಕಿತರ ಸಂಖ್ಯೆ 397ಕ್ಕೆ ಏರಿಕೆಯಾದಂತಾಗಿದೆ. ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯ (ರೋಗಿ ಸಂಖ್ಯೆ 2796)ಸಂಪರ್ಕದಲ್ಲಿದ್ದ ನಾಲ್ವರಲ್ಲಿ ಮಂಗಳವಾರ ಸೋಂಕು ದೃಢಪಟ್ಟಿದೆ.
ಅಗ್ರಹಾರ ಮತ್ತು ದಾಸರಹಳ್ಳಿಯಲ್ಲಿ ಸೋಂಕು ದೃಢಪಟ್ಟ 28 ವರ್ಷದ ಮಹಿಳೆಯ ಸಂಪರ್ಕದಲ್ಲಿದ್ದ (ರೋಗಿ ಸಂಖ್ಯೆ -2519) ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ನವದೆಹಲಿಯಿಂದ ಬಂದ ಮೂವರು, ಮಹಾರಾಷ್ಟ್ರದಿಂದ ಒಬ್ಬರಲ್ಲಿ ಸೋಂಕು ದೃಢ ಪಟ್ಟಿದೆ. ಇನ್ನು ಇಬ್ಬರ ಸಂಪರ್ಕ ಪತ್ತೆಯಾಗಿಲ್ಲ.