Advertisement
ಮನೆಗಳನ್ನು ಸಾಮಾನ್ಯವಾಗಿ ಪದರಗಳಲ್ಲಿ ಕಟ್ಟಲಾಗುತ್ತದೆ, ಇಟ್ಟಿಗೆ ಗೋಡೆಗಳಿಗೆ ಪ್ಲಾಸ್ಟರ್ ಬಳಿಯುವುದು, ನಂತರ ಬಣ್ಣ ಬಳಿಯುವುದು ಅನಿವಾರ್ಯ ಅಲ್ಲದಿದ್ದರೂ, ನಾನಾ ಕಾರಣಗಳಿಂದಾಗಿ ಹೀಗೆ ಮಾಡುವುದು ವಾಡಿಕೆಯಲ್ಲಿದೆ. ದಕ್ಷಿಣಭಾರತದಲ್ಲಿ ಸಾಂಪ್ರದಾಯಿಕವಾಗಿ ಉತ್ತಮ ಗುಣಮಟ್ಟದ ಇಟ್ಟಿಗೆಗಳು ದೊರೆಯದೇ ಇದ್ದದ್ದರಿಂದಲೂ, ಅವುಗಳನ್ನು ಪ್ಲಾಸ್ಟರ್ ಮಾಡಿ ರಕ್ಷಿಸುವ ಪರಿಪಾಠ ಉಂಟಾಗಿರಬಹುದು. ಇತ್ತೀಚಿನ ದಿನಗಳಲ್ಲಿ ಉತ್ತಮ ಇಟ್ಟಿಗೆಗಳು ಲಭ್ಯವಾಗಿದೆ, ಅದರಲ್ಲೂ ವೈರ್‌ಕಟ್ ಇಟ್ಟಿಗೆಗಳು ಹಾಗೂ ಜೇಡಿಮಣ್ಣಿನ ಟೊಳ್ಳು ಇಟ್ಟಿಗೆಗಳು, ಕಲ್ಲಿನಷ್ಟು ಗಟ್ಟಿ ಇರುತ್ತವೆ. ಈ ಮಾದರಿಯ ಇಟ್ಟಿಗೆಗಳು ಕಾಲಾಂತರದಲ್ಲಿ ಪಾಚಿ ಕಟ್ಟಿಕೊಂಡು ತಮ್ಮ ಬಣ್ಣವನ್ನು ಕಳೆದುಕೊಳ್ಳಬಹುದು. ಹಾಗಾಗಿ ಕೆಲ ಕಾಲದ ನಂತರವಾದರೂ ಒಂದು ಪದರ ರಕ್ಷಣಾ ಲೇಪನವನ್ನು ಇಟ್ಟಿಗೆ ಗೋಡೆಗಳಿಗೆ ಕೊಡಬೇಕಾಗುತ್ತದೆ. ಅದು, ಒಂದು ಪದರ ಕ್ಲಿಯರ್ ವಾರ್ನಿಶ್, ಅಂದರೆ, ಪಾರದರ್ಶಕ ಪಾಲಿಶ್ ಮಾದರಿಯ ಲೇಪನ ಆಗಿರಬಹುದು. ಅದೇ ರೀತಿಯಲ್ಲಿ ಮನೆಗೆ ಬಳಸುವ ನಾನಾ ವಸ್ತುಗಳಿಗೂ ಪದರಗಳಲ್ಲಿ ಫಿನಿಶ್ ಮಾಡಲಾಗುತ್ತದೆ. ಆದರೆ ಈ ಪದರಗಳು ಚೆನ್ನಾಗಿ ಒಂದಕ್ಕೊಂದು ಬೆಸೆಯುವುದು ಅನಿವಾರ್ಯ, ಇಲ್ಲದಿದ್ದರೆ ಬೇರ್ಪಟ್ಟು ಮಾಡಿದ ಕಾರ್ಯ ಹಾಳಾಗುತ್ತದೆ.
ಇಟ್ಟಿಗೆ ಮೇಲೆ ಪ್ಲಾಸ್ಟರ್ ಸರಿಯಾಗಿ ಕೂರಬೇಕು, ಜೊತೆಗೆ ಗಟ್ಟಿಗೊಂಡು ಗಾಳಿ ಮಳೆಯಿಂದ ಗೋಡೆಯನ್ನು ಹಾಗೆಯೇ ಮನೆಯ ಒಳಾಂಗಣವನ್ನು ಹವಾಮಾನದ ವೈಪರೀತ್ಯಗಳಿಂದ ರಕ್ಷಿಸಬೇಕು. ಕೆಲವೊಮ್ಮೆ ಸರಿಯಾಗಿ ಅಂಟಿಕೊಳ್ಳದಿದ್ದರೆ, ಗೋಡೆಗೂ ಪ್ಲಾಸ್ಟರ್‌ಗೂ ಮಧ್ಯೆ ಸಂದುಬಂದು, ತಟ್ಟಿದರೆ “ಡಬ್ ಡಬ್’ ಶಬ್ದ ಬಂದರೆ, ಪದರಗಳು ಸರಿಯಾಗಿ ಬೆಸೆದುಕೊಂಡಿಲ್ಲ ಎಂದೇ ಅರ್ಥ. ಈ ರೀತಿ ಬೇರ್ಪಟ್ಟ ಪ್ಲಾಸ್ಟರ್ ಪದರ ಕಾಲಾಂತರದಲ್ಲಿ ಕಿತ್ತು ಹೋಗಬಹುದು. ಜೊತೆಗೆ, ಗೋಡೆಗೆ ಸರಿಯಾಗಿ ನೀರು ನಿರೋಧಕ ಗುಣವನ್ನೂ ನೀಡುವಲ್ಲಿ ವಿಫಲ ಆಗಬಹುದು. ಹಾಗೆ ಆದಾಗ ಅನಿವಾರ್ಯವಾಗಿ ಒಂದಷ್ಟು ಭಾಗದ ಪ್ಲಾಸ್ಟರ್‌ಅನ್ನು ಒಡೆದು ತೆಗೆದು, ಮರು ಪ್ಲಾಸ್ಟರ್ ಮಾಡಬೇಕಾಗುತ್ತದೆ. ಹೀಗೆ ಆಗುವುದನ್ನು ತಡೆಯಲು ನಾವು ಕೆಲ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಟ್ಟಿಗೆ ಇಲ್ಲವೇ ಕಾಂಕ್ರೀಟ್ ಬ್ಲಾಕ್ ಗೋಡೆಗಳಿಗೆ ಪ್ಲಾಸ್ಟರ್ ಮಾಡುವ ಮೊದಲು ಚೆನ್ನಾಗಿ ಶುದ್ಧ ಮಾಡಿಯೇ ಗಾರೆಯನ್ನು ಮೆತ್ತಲು ಶುರು ಮಾಡಬೇಕು. ಕೆಲವೊಮ್ಮೆ ಸೂರಿಗೆ ಕಾಂಕ್ರೀಟ್ ಹಾಕುವಾಗ, ಸೆಂಟ್ರಿಂಗ್ ಶೀಟಿಗೆ ಮೆತ್ತಿಕೊಳ್ಳಬಾರದು ಎಂದು ಧಾರಾಳವಾಗಿ ತ್ಯಾಜ್ಯ ಎಣ್ಣೆಯನ್ನು ಬಳಿಯಲಾಗುತ್ತದೆ. ಇದರಲ್ಲಿ ಒಂದಷ್ಟು ಗೋಡೆಗೆ ತಾಗಿದರೂ ನಂತರ ಸಿಮೆಂಟ್ ಪ್ಲಾಸ್ಟರ್ ಸರಿಯಾಗಿ ಅಂಟುವುದಿಲ್ಲ. ಎಣ್ಣೆ ಅಂಟಿದ ಗೋಡೆಗಳನ್ನು ಸುಣ್ಣದ ಪುಡಿ ಇಲ್ಲವೆ ಸಿಮೆಂಟ್ ಪುಡಿ ಬಳಸಿ ಚೆನ್ನಾಗಿ ಹೀರಿಕೊಳ್ಳುವಂತೆ ಮಾಡಬೇಕು. ನಂತರ ಎಣ್ಣೆ ಬಿದ್ದ ಸ್ಥಳ ನುಣ್ಣಗಿದ್ದರೆ, ಉಳಿ ಇಲ್ಲವೇ ಬ್ರಶ್ ಬಳಸಿ ತರಿ ಮಾಡಿ ಉತ್ತಮ ಬಾಂಡಿಂಗ್- ಬೆಸುಗೆ ಬರುವಂತೆ ಮಾಡಬೇಕು. ಇಂಥ ಗೋಡೆಗಳಿಗೆ ಪ್ಲಾಸ್ಟರ್ ಮಾಡುವ ಮೊದಲು ಎಲ್ಲೆಲ್ಲಿ ಎಣ್ಣೆ ತಾಗಿತ್ತೋ ಅಲ್ಲೆಲ್ಲ ಒಂದು ಪಾಲು ಸಿಮೆಂಟ್, ಎರಡು ಪಾಲು ಮರಳು ಮಿಶ್ರಣ ಮಾಡಿ ತೆಳ್ಳಗೆ ಬಳಿಯಬೇಕು. ಇದನ್ನು “ಟಕ್’ ಹೊಡೆಯುವುದು ಎಂದು ಗಾರೆಯವರು ಹೇಳುತ್ತಾರೆ. ಈ ಪದರವನ್ನು ಚೆನ್ನಾಗಿ ಕ್ಯೂರ್ ಮಾಡಿ, ಅದು ಗೋಡೆಗೆ ಬೆಸೆದುಕೊಂಡಿದೆಯೇ? ಎಂದು ಪರಿಶೀಲಿಸಬೇಕು. ಟಕ್ ಪದರ ಚೆನ್ನಾಗಿ ಬೆಸೆದ ನಂತರವೇ ಇಡೀ ಗೋಡೆಯನ್ನು ಪ್ಲಾಸ್ಟರ್ ಮಾಡುವುದು ಉತ್ತಮ.
Related Articles
ಯಾವುದೇ ಗೋಡೆಯನ್ನು ನಾಲ್ಕಾರು ವಾರ ಪ್ಲಾಸ್ಟರ್ ಮಾಡದೆ ಬಿಟ್ಟರೆ, ಅದರ ಮೇಲೆ ಒಂದಷ್ಟು ಕೊಳಕು ಕೂರುತ್ತದೆ. ಹಾಗಾಗಿ ಗೋಡೆಗಳನ್ನು ಪ್ಲಾಸ್ಟರ್ ಮಾಡುವ ಮೊದಲು ಎಲ್ಲೆಲ್ಲಿ ಗಲೀಜು ಆಗಿದೆಯೋ ಅಲ್ಲೆಲ್ಲ ವೈರ್ ಬ್ರಶ್‌ನಿಂದ ಉಜ್ಜಿ, ನೀರು ಹಾಯಿಸಿ ತೊಳೆದು ನಂತರವೇ ಮುಂದುವರಿಯಬೇಕು. ಕೆಲವೊಮ್ಮೆ ಮಳೆಗಾಲದಲ್ಲಿ ಗೋಡೆಗಳಿಗೆ ಪಾಚಿ ಕಟ್ಟುವುದೂ ಇದ್ದದ್ದೇ. ಹಾಗೇನಾದರೂ ಆಗಿದ್ದರೆ, ಪ್ಲಾಸ್ಟರ್ ಮಾಡುವ ಮೊದಲು ಸಿಮೆಂಟ್ ತಿಳಿಯಿಂದ ಆ ಭಾಗಕ್ಕೆ ಬಳಿದು, ನಂತರ ಮುಂದುವರಿಯುವುದು ಉತ್ತಮ. ಕೆಲವೊಮ್ಮೆ ಎರಡು ಇಟ್ಟಿಗೆ ವರಸೆಗಳ ಮಧ್ಯದ ಸಿಮೆಂಟ್ ಗಾರೆಯ “ಎಸೆ’ ಅಂದರೆ ಜಾಯಿಂಟ್ ಸರಿಯಾಗಿ ಅದುಮಲ್ಪಡದೆ, ಸಡಿಲಗೊಂಡ ಮರಳು ಕಣಗಳು ಅಲ್ಲಲ್ಲಿ ಅಂಟಿಕೊಂಡಿರಬಹುದು. ಗೋಡೆಗೆ ಪ್ಲಾಸ್ಟರ್ ಮಾಡುವ ಮೊದಲು, ಎಲ್ಲ ಪದರಗಳನ್ನೂ ವೀಕ್ಷಿಸಿ, ಸಡಿಲ ಇರುವ ಗಾರೆಯನ್ನು ಕೆರೆದು ನಂತರ ಪ್ಲಾಸ್ಟರ್ ಮಾಡಬೇಕು.
Advertisement
ಬಿಸಿಲು ಚಳಿಗೆ “ಗಾಡಿ’- ಗ್ರೂವ್ ಕೊಡಿ ಪ್ಲಾಸ್ಟರ್‌ನಲ್ಲಿ ಸುಮಾರು ಅರ್ಧ ಇಂಚು ಆಳ ಹಾಗೂ ಮುಕ್ಕಾಲು ಇಂಚು ಅಗಲದ ಗೆರೆಗೆ ಗಾಡಿ ಅಥವಾ ಗ್ರೂವ್ ಎನ್ನಲಾಗುತ್ತದೆ. ಈ ಮಾದರಿಯನ್ನು ಸಾಮಾನ್ಯವಾಗಿ ಅಲಂಕಾರಿಕವಾಗಿ ಬಳಸಿ, ಕಾಂಟ್ರಾಸ್ಟ್ ಅಥವ ಗಾಢ ಬಣ್ಣವನ್ನು ಬಳಿಯುವ ಮೂಲಕ ಸೌಂದರ್ಯವರ್ಧನೆ ಮಾಡಲಾಗುತ್ತದೆ. ಆದರೆ ಈ ಗ್ರೂವ್‌ಗಳಿಗೆ ಮತ್ತೂಂದು ವಿಶೇಷತೆಯೂ ಇದೆ, ಬಿಸಿಲು ಚಳಿಗೆ ಎಲ್ಲ ಪದಾರ್ಥಗಳೂ ಒಂದಷ್ಟು ಹಿಗ್ಗುವುದು, ಕುಗ್ಗುವುದು ವರ್ಷವಿಡೀ ನಡೆಯುತ್ತಲೇ ಇರುತ್ತದೆ. ಈ ಅನಿವಾರ್ಯ ಕ್ರಿಯೆಯಿಂದಾಗಿ ಗೋಡೆಗಳಲ್ಲಿ ಸಣ್ಣ ಸಣ್ಣ “ಹೇರ್ ಲೈನ್’ ಕೂದಲೆಳೆ ಗಾತ್ರದ ಬಿರುಕುಗಳು ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಹೆಚ್ಚು ತೊಂದರೆ ಕೊಡದಿದ್ದರೂ, ಮನೆಗಳಲ್ಲಿ, ಅದರಲ್ಲೂ ಹೊಸಮನೆಯಲ್ಲಿ ನೋಡಲು ಚೆನ್ನಾಗಿ ಕಾಣುವುದಿಲ್ಲ. ಈ ಬಿರುಕುಗಳು ಹೆಚ್ಚಾದರೆ, ನೀರು ಹೀರಿಕೊಂಡು ಒಳಗೆ ಹರಿಸುವ ಸಾಧ್ಯತೆಯೂ ಇರುತ್ತದೆ.
ಹೀಗಾಗುವುದನ್ನು ತಡೆಯಲು, ಎರಡು ಮೂರು ಅಡಿಗಳ ಅಂತರದಲ್ಲಿ, ಇಲ್ಲವೇ ನಾಲ್ಕಾರು ಅಡಿಗಳ ಅಂತರದಲ್ಲಾದರೂ ಗಾಡಿಗಳನ್ನು ಪ್ಲಾಸ್ಟರ್‌ನಲ್ಲಿ ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ಬಿರುಕುಗಳು ಗಾಡಿಗಳಲ್ಲೇ ಮೂಡಿಬಂದು, ನೀರು ಸೋರಿಕೆ ಏನಾದರೂ ಆದರೆ, ಈ ಗ್ರೂವ್‌ಗಳ ಉದ್ದಕ್ಕೂ ಹೊಸದಾಗಿ ಬಣ್ಣ ಇಲ್ಲವೆ ನೀರು ನಿರೋಧಕವನ್ನು ಬಳಿದರೆ ಸಾಕಾಗುತ್ತದೆ. ಇಡೀ ಗೋಡೆಯ ಬಣ್ಣ ಮತ್ತೆ ಬಳಿಯುವ ಅಗತ್ಯ ಇರುವುದಿಲ್ಲ. ಕೆಲವೊಮ್ಮೆ ಗೋಡೆಗಳಲ್ಲಿ ಬಿರುಕು ಬರದಿದ್ದರೂ ಹವಾಮಾನ ವೈಪರೀತ್ಯಗಳಿಂದಾಗಿ ಹೊರಪದರವಾದ ಪ್ಲಾಸ್ಟರ್ ಹಾಗೂ ಅದರಿಂದ ರಕ್ಷಣೆಗೊಳಪಟ್ಟ ಗೋಡೆಯ ಮಧ್ಯೆ ಬಿರುಕು ಬೀಳುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಗೋಡೆ ಹೆಚ್ಚು ಉದ್ದ- ಎತ್ತರ ಹಾಗೂ ಅಗಲ ಇದ್ದರೆ, ಗ್ರೂವ್ ಮಾಡುವುದು ಉತ್ತಮ. ಸಿಮೆಂಟ್ ಲೆಕ್ಕಾಚಾರದಂತೆಯೇ ಇರಲಿ
ಕೆಲವರು “ನಮ್ಮ ಸ್ವಂತ ಮನೆ ತಾನೆ, ಜೀವಮಾನದಲ್ಲಿ ಕಟ್ಟುವುದೇ ಒಂದು ಬಾರಿ’ ಎಂದು ಸಿಮೆಂಟ್ ಗಾರೆ ಮಿಶ್ರಣ ಮಾಡುವಾಗ ಯದ್ವಾತದ್ವಾ ಮಿಶ್ರಣ ಮಾಡುವುದುಂಟು. ಆದರೆ ಗೋಡೆಗಳಿಗೆ ಸಾಮಾನ್ಯವಾಗಿ ಒಂದು ಪಾಲು ಸಿಮೆಂಟಿಗೆ ಐದು ಅಥವಾ ಆರು ಪಾಲು ಮರಳನ್ನು ಹಾಕಿ ಮಿಶ್ರಣ ಮಾಡಿದರೆ ಸಾಕಾಗುತ್ತದೆ. ಇದಕ್ಕಿಂತ ಹೆಚ್ಚು ಅಂದರೆ ಒಂದು ಪಾಲು ಸಿಮೆಂಟಿಗೆ ನಾಲ್ಕು ಇಲ್ಲ ಮೂರು ಪಾಲು ಮರಳನ್ನು ಮಾತ್ರ ಹಾಕಿ ಗಾರೆ ತಯಾರಿಸಿ ಬಳಿದರೆ, ಅದರ ಶ್ರಿಂಕೇಜ್ (ಕುಗ್ಗುವಿಕೆ) ಹೆಚ್ಚಿ, ಗೋಡೆಯಿಂದ ಬೇರ್ಪಡುವ ಇಲ್ಲವೆ ಹೆಚ್ಚು ಬಿರುಕುಗಳನ್ನು ಹೊಂದುವ ಸಾಧ್ಯತೆ ಇರುತ್ತದೆ. ಆದುದರಿಂದ ಯಾವುದಕ್ಕೆ ಎಷ್ಟೆಷ್ಟು ಪ್ರಮಾಣದ ಮಿಶ್ರಣ ನಿಗದಿಯಾಗಿದೆಯೋ ಅದನ್ನೇ ಬಳಸುವುದು ಉತ್ತಮ. – ಆರ್ಕಿಟೆಕ್ಟ್ ಕೆ. ಜಯರಾಮ್
ಹೆಚ್ಚಿನ ಮಾಹಿತಿಗೆ ಫೋನ್ 9844132826