ಕೋಲಾರ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿ ವೃದ್ಧಿ ಸಂಘದಿಂದ ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಿಟ್ಟಪ್ಪನಹಳ್ಳಿ ವೆಂಕಟೇಶ್, ಹಾಲಿನ ಖರೀದಿ ದರ ಕನಿಷ್ಠ 30 ರೂ.ಗೆ ಏರಿಕೆ ಮಾಡಬೇಕು.
ಸಂಘಗಳಿಗೆ ನೀಡುವ ನಿರ್ವಹಣೆ ವೆಚ್ಚವನ್ನು 1 ರೂ. ಹೆಚ್ಚಿಸಬೇಕು. ಸಂಘಗಳ ಸಿಬ್ಬಂದಿ ವರ್ಗಕ್ಕೆ ಕೋಚಿಮುಲ್ ವಿಮೆ ಮುಂದುವರಿಸಬೇಕು ಎಂದು ಆಗ್ರಹಿಸಿದರು. ಕೋಚಿಮುಲ್ ವಿಮೆ ಅವಧಿ ಮುಗಿದಿದ್ದು, ನಂತರ ಮರಣ ಹೊಂದಿದ ಸಿಬ್ಬಂದಿಗೆ ದತ್ತಿಯಿಂದ 2 ಲಕ್ಷ ರೂ. ಸಹಾಯಧನ ನೀಡಬೇಕು. ಅಲ್ಲದೆ, ಹಾಲು ಉತ್ಪಾದಕರಿಗೂ ಕೋಚಿಮುಲ್ ವಿಮೆ ಮುಂದುವರಿಸಬೇಕೆಂದು ಒತ್ತಾಯಿಸಿದರು.
ಬಿಎಂಸಿ ನಿರ್ವಹಣೆ ವೆಚ್ಚ ಹೆಚ್ಚಿಸಿ: ಡೀಸೆಲ್ ಮತ್ತು ವಿದ್ಯುತ್ ದರ ನಿರಂತರ ಏರಿಕೆ ಆಗುತ್ತಿರುವುದ ರಿಂದ ಬಿಎಂಸಿ ನಿರ್ವಹಣೆ ವೆಚ್ಚವನ್ನು ಸಾಮರ್ಥ್ಯಕ್ಕೆ ಅನುಗುಣವಾಗಿ 70 ಪೈಸೆ, 75 ಪೈಸೆ ಹಾಗೂ 80 ಪೈಸೆಗೆ ಏರಿಕೆ ಮಾಡಬೇಕು. ಪ್ರಾಥಮಿಕ ಸಂಘ ಗಳಲ್ಲಿ ನಿವೃತ್ತಿ ಆದ ಸಿಬ್ಬಂದಿಗೆ ನೀಡುವ ಧನವನ್ನು ಪಕ್ಕದ ಬಮೂಲ್‌ನಂತೆಯೇ ಸಮನಾಂತರ ವಾಗಿ ಅವರ ಹುದ್ದೆ, ಸೇವೆಗೆ ಅನುಗುಣವಾಗಿ ಸಹಾಯಕರಿಗೆ 2 ಲಕ್ಷ ರೂ., ಹಾಲು ಪರೀಕ್ಷಕರಿಗೆ 3 ಲಕ್ಷ ರೂ., ಕಾರ್ಯದರ್ಶಿಗೆ 5 ಲಕ್ಷ ರೂ. ನೀಡಬೇಕೆಂದು ಆಗ್ರಹಿಸಿದರು.
ಧರಣಿ ಸತ್ಯಾಗ್ರಹ ಮಾಡಿ: ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೆ ನೀಡುವ ವೇತನ ಹಾಗೂ ಬಿಎಂಸಿ ಭತ್ಯೆ ಒಕ್ಕೂಟದ ಸುತ್ತೋಲೆಯಂತೆ ನೇರವಾಗಿ ಸಿಬ್ಬಂದಿ ಬ್ಯಾಂಕ್ ಖಾತೆಗೆ ಪಾವತಿಸಬೇಕು. ಈ ಎಲ್ಲ ಬೇಡಿಕೆ ಈಡೇರಿಸಬೇಕು, ಇಲ್ಲವಾದಲ್ಲಿ ಒಕ್ಕೂಟದ ಮುಂದೆ ಹಾಲು ಉತ್ಪಾದಕರೊಂದಿಗೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಉಗ್ರ ಹೋರಾಟ: ತಾವು ವ್ಯವಸ್ಥಾಪಕರಾಗಿ ಬಂದ ವೇಳೆ ಮನವಿ ನೀಡಿದ್ದರೂ ಈವರೆಗೂ ಯಾವುದೇ ಸಭೆಗಳಲ್ಲಿ ವಿಚಾರ ಚರ್ಚೆ ಮಾಡದಿರುವುದು ಖಂಡನೀಯ. ಕೂಡಲೇ ಚರ್ಚೆ ನಡೆಸಿ ಬೇಡಿಕೆ ಈಡೇರಿಸದಿದ್ರೆ ಉಗ್ರ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಈ ಬಗ್ಗೆ ಚರ್ಚಿಸಿ ಸಾಧ್ಯವಾದಷ್ಟು ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಗಲಹಳ್ಳಿ ನಾಗೇಶಗೌಡ, ಉಪಾಧ್ಯಕ್ಷ ಮಿಂಡಹಳ್ಳಿ ಮುನಿ ರಾಜು, ಮುಖಂಡರಾದ ಶಿಡ್ಲಘಟ್ಟ ಗೋವಿಂದ ರಾಜು, ಆರ್.ಶ್ರೀರಾಮರೆಡ್ಡಿ, ಚಿಕ್ಕಬಳ್ಳಾಪುರ ನರ ಸಿಂಹಮೂರ್ತಿ, ಬಚ್ಚರೆಡ್ಡಿ, ದೇವರಾಜು, ಅತ್ತಿಕುಂಟೆ ಜೆ.ಆಂಜನೇಯರೆಡ್ಡಿ, ಪಾಳ್ಯ ಶ್ರೀನಿವಾಸಶೆಟ್ಟಿ, ವಕ್ಕಲೇರಿ ನಾಗರಾಜ್, ಮದನಹಳ್ಳಿ ರಮೇಶ್, ಮಿಟ್ಟಮಾಲಹಳ್ಳಿ ಮಂಜುನಾಥ್ ಮತ್ತಿತರರಿದ್ದರು.