Advertisement

ಕೋವಿಡ್‌-19 ಪರೀಕ್ಷೆ ಸಂಖ್ಯೆ ಹೆಚ್ಚಿಸಿ

06:31 AM Jun 18, 2020 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯು ಶೀಘ್ರದಲ್ಲೇ ಕೋವಿಡ್‌ 19ದಿಂದ ಮುಕ್ತವಾಗುವ ಸಾಧ್ಯತೆ ಇರುವುದರಿಂದ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೋವಿಡ್‌-19 ಪ್ರಕರಣಗಳ ಬಗ್ಗೆ  ಹೆಚ್ಚು ಪರೀಕ್ಷೆ ನಡೆಸಿ ಎಚ್ಚರಿಕೆ ವಹಿಸಬೇಕೆಂದು ಜಿಪಂ ಸಿಇಒ ಬಿ. ಫೌಝೀಯಾ ತರುನ್ನುಮ್‌ ಸೂಚಿಸಿದರು.

Advertisement

ನಗರದ ಜಿಪಂ ಮಿನಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ  ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳು ಪ್ರಾರಂಭವಾಗುವ ಸಾಧ್ಯತೆ ಇದೆ. ಎಲ್ಲಾ ತಾಲೂಕುಗಳಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ವಸತಿ ನಿಲಯಗಳನ್ನು ಹೊರತುಪಡಿಸಿ ಕಲ್ಯಾಣ ಮಂಟಪ,  ಸಮುದಾಯ ಭವನ ಸೇರಿದಂತೆ ಇನ್ನಿತರೆ ಕಟ್ಟಡಗಳಲ್ಲಿ ಕ್ವಾರಂಟೈನ್‌ ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸಬೇಕೆಂದರು.

ಜಿಲ್ಲೆಯ ತಾಲೂಕು ಆಸ್ಪತ್ರೆಗಳಿಗೆ ವಿವಿಧ ಯೋಜನೆಗಳಡಿ ಬಿಡುಗಡೆಯಾಗಿರುವ ಅನುದಾನ ಬಳಕೆ ಕುರಿತು  ಎರಡು ದಿನಗಳೊಳಗೆ ಸಂಪೂರ್ಣ ವಿವರಗಳನ್ನು ತಾಲೂಕು ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಬೇಕು. ಈ ಎಲ್ಲಾ ವರದಿಗಳನ್ನು ಸಂಗ್ರಹಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಪಂಗೆ ಸಲ್ಲಿಸಬೇಕು ಎಂದು  ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಗೆ ಮರಳಿರುವ ಮೂಲ ನಿವಾಸಿಗಳು ಸೇರಿದಂತೆ ವಲಸಿಗರು ಕೋವಿಡ್‌ 19 ಪರೀಕ್ಷೆಗೆ ಒಳಪಟ್ಟಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕೆಂದರು. ಡಿಎಚ್‌ಒ ಯೋಗೇಶ್‌ ಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ರಮೇಶ್‌ ಸೇರಿದಂತೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸರ್ಕಾರದಿಂದ ಆರೋಗ್ಯ ಇಲಾಖೆಗೆ ಬಿಡುಗಡೆ ಮಾಡಲಾಗುವ ಅನುದಾನವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಆಗಬೇಕು. ಯಾವುದೇ ಲೋಪ ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
-ಬಿ.ಫೌಝೀಯಾ ತರುನ್ನುಮ್‌, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next