Advertisement

ಕೌಶಲ ಹೆಚ್ಚಿಸಿ, ಉದ್ಯೋಗ ಕ್ಷೇತ್ರದಲ್ಲೊಂದು ಹೊಸ ದಾರಿ ರೂಪಿಸಿ

02:46 PM Aug 15, 2018 | |

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗವಕಾಶಗಳನ್ನು ಪಡೆಯಲು ವಿದ್ಯೆ ಪ್ರಮುಖ ಮಾನದಂಡವಾದರೂ ಅದರೊಂದಿಗೆ ವಿವಿಧ ರೀತಿಯ ಕೌಶಲಗಳನ್ನು ಬೆಳೆಸಿಕೊಂಡರೆ ಮಾತ್ರವೇ ಉತ್ತಮ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಅದಕ್ಕಾಗಿಯೇ ವಿದ್ಯಾರ್ಥಿಗಳನ್ನು ಇಂದು ಹೆಚ್ಚಾಗಿ ಪಠ್ಯೇತರ ಚಟುವಟಿಕೆಗಳನ್ನು ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತಿದೆ.

Advertisement

ಮಕ್ಕಳು ಪುಸ್ತಕದ ಬದನೆಕಾಯಿ ಆಗಬಾರದು ಅವರಿಗೆ ಲೋಕಜ್ಞಾನ ಬೆಳೆಸುವಂತಹ ಪೂರಕ ಚಟುವಟಿಕೆಗಳನ್ನು ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಂತೆಯೇ ಉದ್ಯೋಗದ ವಿಚಾರ ಬಂದಾಗ ಉದ್ಯೋಗದ ಕ್ಷೇತ್ರಕ್ಕೆ ಸಂಬಂಧಿಸಿ ಇತರ ಕೌಶಲಗಳನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಸಂದರ್ಶನ ಎದುರಿಸಲು ತರಬೇತಿ ಇರಲಿ
ಉದ್ಯೋಗದ ನಿಮಿತ್ತ ಸಂದರ್ಶನಕ್ಕೆ ತೆರಳುವ ಮುನ್ನ ಯಾವ ರೀತಿಯಾಗಿ ಸಂದರ್ಶನ ಎದುರಿಸಬೇಕು ಎನ್ನುವ ಬಗ್ಗೆ ಮೊದಲೇ ತಯಾರಿ ನಡೆಸಿರಬೇಕು. ಇದಕ್ಕಾಗಿ ಅರ್ಹ ವ್ಯಕ್ತಿ ಅಥವಾ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದರೆ ಉತ್ತಮ. ಈ ಬಗ್ಗೆ ಅನೇಕ ಸಂಪನ್ಮೂಲ ವ್ಯಕ್ತಿಗಳು ಮಾಡುವ ಕಾರ್ಯಾಗಾರಗಳಲ್ಲೂ ಭಾಗವಹಿಸುವುದರಿಂದ ಅಭ್ಯರ್ಥಿಗಳಿಗೆ ಉತ್ತಮ ಮಾಹಿತಿ ಲಭಿಸಬಹುದು.

ಗುಂಪು ಚರ್ಚೆಗೂ ಸಿದ್ಧರಾಗಿ
ಹೊಸದಾಗಿ ಉದ್ಯೋಗಕ್ಕೆ ಸೇರಲು ಬಯಸುವವರು ನೇಮಕಾತಿ ಪರೀಕ್ಷೆ, ಸಂದರ್ಶನಗಳಿಗೆ ಸಿದ್ಧರಾದರೆ ಸಾಲದು. ಗುಂಪು ಚರ್ಚೆಗೂ ಸಿದ್ಧರಾಗಬೇಕಾಗಿದೆ. ಉದ್ಯೋಗಿಯ ಸಾಮರ್ಥ್ಯ ಪರೀಕ್ಷಿಸಲು ಸಂದರ್ಶನದೊಂದಿಗೆ ಗ್ರೂಪ್‌ ಸಂದರ್ಶನಕ್ಕೂ ಆದ್ಯತೆ ನೀಡುತ್ತಿದೆ. ಸಂದರ್ಶನದಲ್ಲಿ ಅಭ್ಯರ್ಥಿಯ ಜ್ಞಾನದ ಆಳ- ಅಗಲ, ಆತ್ಮವಿಶ್ವಾಸ, ವ್ಯಕ್ತಿಗತ ಮಾಹಿತಿ, ಸಮಾಜದ ಆಗುಹೋಗುಗಳ ಬಗೆಗಿನ ಗ್ರಹಿಕೆ ಮತ್ತಿತರ ವಿಷಯಗಳನ್ನು ಪರೀಕ್ಷಿಸಲಾಗುತ್ತದೆ. ಹಾಗಾಗಿ ಈ ಬಗ್ಗೆ ಮೊದಲೇ ಸಿದ್ಧರಾಗುವುದು ಉತ್ತಮ.

ಪಠ್ಯೇತರ ಚಟುವಟಿಕೆಯಲ್ಲಿರಿ
ವಿದ್ಯಾರ್ಥಿ ಜೀವನವೆಂದರೆ ಕೇವಲ ಓದುವುದು, ಪರೀಕ್ಷೆ ಬರೆಯುವುದು, ಉತ್ತಮ ಅಂಕ ಗಳಿಸುವುದು ಮಾತ್ರವಲ್ಲ. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಮ್ಮಲ್ಲಿ ನಾಯಕತ್ವ ಗುಣ, ಭಾಗವಹಿಸುವಿಕೆ, ಸಂಘಟನಾ ಚಾತುರ್ಯ, ವಿಷಯ ಮಂಡನೆಯ ರೀತಿಯ ಬಗ್ಗೆ ಜ್ಞಾನ ದೊರೆಯುತ್ತದೆ. ಇದು ಮುಂದೆ ಉದ್ಯೋಗ ಪಡೆದುಕೊಳ್ಳಲು ಸಂದರ್ಶನಕ್ಕೆ ತೆರಳುವಾಗ ಸಹಕಾರಿಯಾಗುತ್ತದೆ. ಬ್ಯಾಂಕ್‌ ಸಹಿತ ಬಹುತೇಕ ವಿತ್ತೀಯ ಸಂಸ್ಥೆಗಳು ಇಂದು ಅನುಭವಿ ಉದ್ಯೋಗಿಗಳ ಕೊರತೆ ಎದುರಿಸುತ್ತಿದೆ. ಅನುಭವ ಇದ್ದರೂ ನಾಯಕತ್ವ ಇಲ್ಲದಿರುವುದು ಸಂಸ್ಥೆಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಹೊಸದಾಗಿ ಉದ್ಯೋಗಕ್ಕೆ ಸೇರುವವರು ವಿವಿಧ ಕೌಶಲಗಳನ್ನು ಬೆಳೆಸಿಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ.

Advertisement

ಲೋಕಜ್ಞಾನ ಬಹು ಮುಖ್ಯ
ಯಾವುದೇ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಳ್ಳಬೇಕು ಎಂದಾದರೆ ವಿದ್ಯೆಯೊಂದಿಗೆ ಲೋಕಜ್ಞಾನ ಅವಶ್ಯಕವಾಗಿರುತ್ತದೆ. ನಮ್ಮ ಸುತ್ತಮುತ್ತ ನಡೆಯುವ ಆಗುಹೋಗುಗಳ ಬಗ್ಗೆ ಜ್ಞಾನ ಇಲ್ಲ ಎಂದಾದರೆ ಪುಸ್ತಕದ ಜ್ಞಾನ ವ್ಯರ್ಥ. ಪದವಿಯಲ್ಲಿ ರ್‍ಯಾಂಕ್‌ ಪಡೆದು ರಾಜ್ಯದ ಮುಖ್ಯಮಂತ್ರಿ ಯಾರೂ ಎಂದು ತಿಳಿಯದೇ ಹೋದರೆ ವಿದ್ಯೆ ಇದ್ದರೂ ಪ್ರಯೋಜವಾಗಲ್ಲ. ಪ್ರಸ್ತುತ ಬಹುತೇಕ ಸಂಸ್ಥೆಗಳು ತನ್ನ ಉದ್ಯೋಗಿಗಳಿಗೆ ಕ್ಷೇತ್ರದ ಜ್ಞಾನದೊಂದಿಗೆ ಲೋಕಜ್ಞಾನ ಕಡ್ಡಾಯವಾಗಿರಬೇಕು ಎಂದು ಬಯಸುತ್ತಾರೆ. ಹಾಗಾಗಿ ಉದ್ಯೋಗ ಅರಸುವ ಮುನ್ನ ಸಮಾಜದ ಆಗು ಹೋಗುಗಳ ಬಗ್ಗೆ ತಿಳಿದಿದ್ದರೆ ಒಳಿತು.

ತಿಳಿದುಕೊಳ್ಳುವ ಹಂಬಲವಿರಲಿ
ಪ್ರಸ್ತುತ ಸರಕಾರಿ ಉದ್ಯೋಗ ಪಡೆಯುವ ಹಂಬಲದಿಂದ ಲಕ್ಷಾಂತರ ಮಂದಿ ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಂಡಿರುತ್ತಾರೆ. ಆದರೆ ಕಾರಣಾಂತರಗಳಿಂದ ಎಲ್ಲರಿಗೂ ಸರಕಾರಿ ಅಥವಾ ತಾವು ಇಚ್ಛಿಸಿದ ಉದ್ಯೋಗ ಲಭಿಸದೆ ಇರಬಹುದು. ಅಂತಹ ಸಂದರ್ಭದಲ್ಲಿ ಬೇರೆ ಕಡೆ ಉದ್ಯೋಗ ದೊರೆತಾಗ ಅಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಆ ಕ್ಷೇತ್ರದಲ್ಲೇ ಮುಂದುವರಿಯುವ ಅವಕಾಶ ಲಭಿಸಬಹುದು. ಯಾವ ಕೆಲಸವಾದರೂ ಅರಿತುಕೊಳ್ಳುವ ಗುಣವಿದ್ದರೆ ಯಶಸ್ಸು ಖಂಡಿತಾ ನಮ್ಮದಾಗುತ್ತದೆ. 

ಇಂಟರ್ನ್ ಶಿಪ್‌ ಉತ್ತಮ ಭಾಗ
ಐಚ್ಚಿಕ ಕ್ಷೇತ್ರಗಳಲ್ಲಿ ಉದ್ಯೋಗ ಮಾಡಬೇಕು ಎಂದು ಇಚ್ಛಿಸುವ ಅಭ್ಯರ್ಥಿಗಳು ವ್ಯಾಸಂಗದ ಸಮಯದಲ್ಲಿ ಆ ಕ್ಷೇತ್ರದ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕಾಗುತ್ತದೆ. ರಜಾ ಸಮಯಗಳಲ್ಲಿ ಅಂತಹ ಸಂಸ್ಥೆಗಳಲ್ಲಿ ಅನುಮತಿ ಪಡೆದು ಇಂಟರ್ನ್ ಶಿಪ್  ಮಾಡಬೇಕು. ಆಗ ಅನುಭವ ಸಿಗುತ್ತದೆ. ಇದು ಮುಂದೆ ಉದ್ಯೋಗ ಮಾಡಲು ಸಹಕಾರಿಯಾಗುತ್ತದೆ. ಪತ್ರಕರ್ತನಾಗಬೇಕು ಎಂದು ಬಯಸುವ ವಿದ್ಯಾರ್ಥಿಗಳು ವಿವಿಧ ಪತ್ರಿಕೆ, ಮಾಧ್ಯಮಗಳಲ್ಲಿ ಇಂಟರ್ನ್ ಶಿಪ್  ಮಾಡಿದರೆ ಯಾವ ರೀತಿ ಮುಂದೆ ಕೆಲಸ ಮಾಡಬೇಕು ಎಂಬುದು ಅರಿವಾಗುತ್ತದೆ.

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next