ನವದೆಹಲಿ: ಭಾರತೀಯ ಸಿರಿಧಾನ್ಯಗಳು ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಿದ ಬೆನ್ನಲ್ಲೇ ಈ ಧಾನ್ಯಗಳಿಂದ ತಯಾರಿಸಲ್ಪಟ್ಟ ವಸ್ತುಗಳು ದೀರ್ಘಕಾಲ ಬಾಳಿಕೆ ಬರುವಂತೆ ಮಾಡುವ ನಿಟ್ಟಿನಲ್ಲಿ ವಿಜ್ಞಾನಿಗಳು ಸಂಶೋಧನೆ ಆರಂಭಿಸಿದ್ದಾರೆ.
ಮೈಸೂರಿನ ಸಿಎಸ್‌ಐಆರ್-ಸಿಎಫ್ಟಿಆರ್‌ಐನಲ್ಲಿ (ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ) ಹಲವು ಗಂಭೀರ ಸಂಗತಿಗಳ ಸಂಶೋಧನೆ ಶುರುವಾಗಿದೆ ಎಂದು ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣಾ ಸಿಂಗ್ ಹೇಳಿದ್ದಾರೆ.
ಸಿರಿಧಾನ್ಯಗಳಲ್ಲಿ ಲಿಪಾಸೆ ಹೆಸರಿನ ಒಂದು ಕಿಣ್ವ ಇದೆ. ಅದು ಸಿರಿಧಾನ್ಯಗಳ ಉತ್ಪನ್ನಗಳ ಬಾಳಿಕೆಯನ್ನು ಕುಗ್ಗಿಸುತ್ತದೆ. ಕೆಲವು ಸಮಯವಾದ ಮೇಲೆ ವಸ್ತುಗಳಿಂದ ಕೆಟ್ಟ ವಾಸನೆ, ಕೆಟ್ಟ ರುಚಿ ಶುರುವಾಗುತ್ತದೆ. ಈ ಪರಿಸ್ಥಿತಿಗೆ ಕಾರಣವಾಗುವ ಸಕ್ರಿಯ ಕಿಣ್ವವನ್ನು ತೆಗೆಯಬೇಕು, ಹಾಗೆಯೇ ಪೋಷಕಾಂಶಗಳನ್ನೂ ಉಳಿಸಿಕೊಳ್ಳಬೇಕು ಎನ್ನುವುದು ವಿಜ್ಞಾನಿಗಳ ಉದ್ದೇಶ.
ಕೆಲವು ಆಹಾರ ಸಂಸ್ಕರಣಾ ಕೇಂದ್ರಗಳಲ್ಲಿ ಈ ಧಾನ್ಯಗಳ ಹೊರಪದರವನ್ನು ತೆಗೆಯುತ್ತಾರೆ. ಇದರಿಂದ ಅವುಗಳಲ್ಲಿರುವ ನಾರು ಮತ್ತು ಲವಣದ ಅಂಶ ಇಲ್ಲವಾಗುತ್ತದೆ. ಹೀಗಾಗಬಾರದು, ಆದರೆ ಧಾನ್ಯಗಳಲ್ಲಿನ ಜೀವಸತ್ವಗಳೂ ಉಳಿಯಬೇಕು. ಈ ನಿಟ್ಟಿನಲ್ಲಿ ಸಂಶೋಧನೆ ಸಾಗಿದೆ ಎಂದು ಶ್ರೀದೇವಿ ಹೇಳಿದ್ದಾರೆ.
ಔಷಧೀಯ ಗುಣ ಪತ್ತೆಗೆ ಶ್ರಮ:
ನಮ್ಮ ಪೂರ್ವಿಕರು ಸಿರಿಧಾನ್ಯಗಳಲ್ಲಿ ಔಷಧೀಯ ಗುಣವಿದೆ ಎಂದು ಹೇಳುತ್ತಾರೆ. ಆದರೆ ಅವುಗಳಲ್ಲಿರುವ ಯಾವ ಅಂಶ ಇದಕ್ಕೆ ಕಾರಣವಾಗುತ್ತದೆ, ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಗೊತ್ತಾಗಿಲ್ಲ. ಇದು ಗೊತ್ತಾಗದೆ ಅವುಗಳ ಔಷಧೀಯ ಗುಣಗಳ ಬಗ್ಗೆ ಹೇಳಿದರೆ ಉಪಯೋಗವಿಲ್ಲ. ನಾವು ಅದನ್ನೂ ಸಂಶೋಧನೆಯ ಮೂಲಕ ಸಾಬೀತು ಮಾಡಬೇಕಾಗಿದೆ ಎನ್ನುವುದು ಶ್ರೀದೇವಿಯ ಅಭಿಮತ.