Advertisement

ಯೋಜನಾಬದ್ಧ ಕೃಷಿಯಿಂದ ಆದಾಯ ವೃದ್ಧಿ

11:20 AM Aug 29, 2017 | Team Udayavani |

ಬೀದರ: ಯೋಜನಾಬದ್ಧ ಮತ್ತು ವ್ಯವಹಾರಿಕವಾಗಿ ವೈವಿಧ್ಯಮಯ ಕೃಷಿ ಮಾಡಿದಲ್ಲಿ ರೈತರು ಉತ್ತಮ ಆದಾಯ ಪಡೆದು ಆರ್ಥಿಕವಾಗಿ ಸದೃಢರಾಗಬಹುದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ| ಎಸ್‌.ಎ. ಪಾಟೀಲ ಸಲಹೆ ನೀಡಿದರು. ನಗರದ ರಂಗ ಮಂದಿರದಲ್ಲಿ ಸೋಮವಾರ ನಡೆದ “ಸಂಕಲ್ಪದಿಂದ ಸಿದ್ಧಿ’ ನ್ಯೂ ಇಂಡಿಯಾ ಮಂಥನ ರೈತರ ಆದಾಯ ದುಪ್ಪಟ್ಟುಗೊಳಿಸುವ ಏಳು ಅಂಶಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆಚ್ಚುತ್ತಿರುವ ಪ್ರತಿಕೃತಿ ವಿಕೋಪ, ಮಾರುಕಟ್ಟೆಯಲ್ಲಿ ದರದ ಏರಿಳಿತದಂಥ ಅನಿಶ್ಚಿತತೆ ನಡುವೆಯೂ ರೈತರು ಆದಾಯ ಹೆಚ್ಚಿಸಿಕೊಂಡು ಒಕ್ಕಲುತನ ಬದುಕಿಸಬೇಕಿದೆ. ಯೋಜನಾಬದ್ಧವಾಗಿ ಕೃಷಿ ಪದ್ಧತಿ ಅನುಸರಿಸದಿರುವುದರಿಂದ ರೈತರು ವೈಫಲ್ಯ ಕಾಣುತ್ತಿದ್ದಾರೆ. ಬೇರೊಬ್ಬರಿಂದ ಒಕ್ಕಲುತನ ಮಾಡಿಸುವುದು, ಅನಗತ್ಯ ವೆಚ್ಚವೂ ಕಾರಣ. ಜಮೀನು ಪವಿತ್ರ ಸ್ಥಳವಾಗಿದ್ದು, ಅದರಲ್ಲಿ ಭಕ್ತಿ, ಶ್ರದ್ಧೆ ಮತ್ತು ಪರಿಶ್ರಮದಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ ಎಂದು ವಿವರಿಸಿದರು. ಮರಳು ಪ್ರದೇಶ ಹೊಂದಿರುವ ಇಸ್ರೇಲ್‌ ದೇಶ ಇಂದು ಇಡೀ ಜಗತ್ತಿಗೆ ಕೃಷಿ ಕಲಿಸಿಕೊಡುತ್ತಿದೆ. ನೀರು ಸಂಗ್ರಹಣೆ, ತಂತ್ರಜ್ಞಾನದ ಸದ್ಬಳಕೆ ಮೂಲಕ ಕೃಷಿಯಲ್ಲಿ ಕ್ರಾಂತಿಕಾರಿ ಬದಲಾವಣೆ
ಕಂಡುಕೊಂಡಿದೆ. ಭಾರತೀಯ ಸಾಮೂಹಿಕ ಕೃಷಿ ನೀತಿ ಅಳವಡಿಸಿಕೊಂಡಿದೆ. ಆದರೆ, ದೇಶದಲ್ಲಿ ನಮ್ಮ ರೈತರೇ ಅದನ್ನು ಮರೆತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಅವಲಂಬನೆ ಬಿಟ್ಟು ಸ್ವಂತ ಕೃಷಿ ಮಾಡಬೇಕು. ಮಾರುಕಟ್ಟೆಯ ಅಧ್ಯಯನದ ಜತೆಗೆ ಜಿಲ್ಲೆಯ ಬೆಳೆ ಯೋಜನೆ ಪ್ರಕಾರ ಬೆಳೆಗಳನ್ನು ತೆಗೆಯಬೇಕು. ಹೀಗಾದಲ್ಲಿ ರೈತರ ಆದಾಯ ದುಪ್ಪಟ್ಟು ಆಗುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದರು. ಸಂಸದ ಭಗವಂತ ಖೂಬಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಸಿಕ್ಕು ದಶಕಗಳು ಕಳೆದರೂ ಇಂದಿಗೂ ಬಡತನ, ಆಹಾರದ ಕೊರತೆ ಕಾಡುತ್ತಿದೆ. ಆರ್ಥಿಕ ತಾರತಮ್ಯ ಪರಿಸ್ಥಿತಿಯಲ್ಲಿ ದುರ್ಬಲ ವರ್ಗದ ಜನರಿಗೆ ಆಹಾರ ಒದಗಿಸುವುದು ಸವಾಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉಪಯುಕ್ತವಾದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಯಶಸ್ಸಿನ
ಹೆಜ್ಜೆಯನ್ನಿಟ್ಟಿದೆ. ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ 2022ರೊಳಗೆ ರೈತರ ಆದಾಯ ದ್ವಿಗುಣಗೊಳಿಉವ ಏಳು ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದೆ. ರೈತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ, ಅವರ ಮನೆ ಬಾಗಿಲಿಗೆ ಮಟ್ಟಿಸಲಾಗುತ್ತಿದೆ. ಯಾವುದೇ ಕ್ಷೇತ್ರದಲ್ಲಿ ವ್ಯವಹಾರಿಕವಾಗಿ ಕೆಲಸ ಮಾಡಿದಾಗ ಮಾತ್ರ ಬೆಳವಣಿಗೆ ಕಾಣಲು ಸಾಧ್ಯ. ಅದೇ ರೀತಿ ವ್ಯವಹಾರಿಕವಾಗಿ ಕೃಷಿ ಕೈಗೊಳ್ಳಬೇಕಿದೆ. ಏಳು ಶಪಥಗಳನ್ನು ಶ್ರದ್ಧೆಯಿಂದ ಅನುಸರಿಸಿದರೆ ರೈತರ ಆದಾಯ ಹೆಚ್ಚಳ ಆಗುವುದರ ಜತೆಗೆ ನವ ಭಾರತ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಕರೆ ನೀಡಿದರು. ಕೆವಿಕೆ ಮುಖ್ಯಸ್ಥ ಡಾ| ರವಿ ದೇಶಮುಖ ಮಾತನಾಡಿ, ರೈತರ ಸುಧಾರಣೆಯಾದರೆ ದೇಶದ ಪ್ರಗತಿ ಸಾಧ್ಯ ಹೊರತು
ಕೈಗಾರಿಕೋದ್ಯಮಗಳಿಂದ ಅಲ್ಲ. ಐದು ವರ್ಷದಲ್ಲಿ ರೈತರು ತಮ್ಮ ಆದಾಯ ದುಪ್ಪಟ್ಟು ಆಗಬೇಕೆಂಬ ಸಂಕಲ್ಪ ಮಾಡಬೇಕು. ಎಕರೆಗೆ ಒಣ ಬೇಸಾಯದಲ್ಲಿ 1 ಲಕ್ಷ ಮತ್ತು ನೀರಾವರಿ ಇದ್ದಲ್ಲಿ 2 ಲಕ್ಷ ರೂ. ನಿವ್ವಳ ಲಾಭ ಪಡೆಯುವ ಸಂಕಲ್ಪ ಮಾಡಬೇಕು. ಪರಿಶ್ರಮ ಪಟ್ಟರೆ 70 ಪ್ರತಿಶತದಷ್ಟು ಗುರಿ ಸಾಧಿಸಬಹುದು ಎಂದು ಹೇಳಿದರು. ಪ್ರಗತಿಪರ ರೈತ ಡಾ| ಎಂ.ಐ ಖಾದ್ರಿ, ರೈತ ಮುಖಂಡ ವಿಶ್ವನಾಥ ಪಾಟೀಲ, ಉದ್ಯಮಿ ಕಾಶೆಪ್ಪ ಧನ್ನೂರ, ಜಂಟಿ ಕೃಷಿ ನಿರ್ದೇಶಕ
ಕೆ. ಜಿಯಾವುಲ್ಲಾ, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ| ಹವಾಲ್ದಾರ, ನಬಾರ್ಡ್‌ ಅ ಧಿಕಾರಿ ಜೋಶಿ, ಎನ್‌ ಸಿಡಿಎಕ್ಸ್‌ ಮುಖ್ಯಸ್ಥ ಚಂದ್ರಶೇಖರ ಪಾಟೀಲ, ಪ್ರಮುಖರಾದ ಗೋವಿಂದಯ್ಯ, ಡಾ| ರಾಜು, ಡಾ| ರವೀಂದ್ರ ಮೂಲಗೆ, ವಿಶ್ವನಾಥ ಜಿಳ್ಳೆ ಮತ್ತು ಡಾ| ಕೊಂಡಾ ಮತ್ತಿತರರು ಇದ್ದರು. ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮತ್ತು ಅಭಿವೃದ್ಧಿಪರ ಇಲಾಖೆಗಳು, ತೋಟಗಾರಿಕೆ ಮಹಾವಿದ್ಯಾಲಯ, ರಿಲಾಯನ್ಸ್‌ ಫೌಂಡೆಶನ್‌ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next