Advertisement

ಜಿಎಸ್‌ಟಿಯಿಂದ ಆದಾಯ ವೃದ್ಧಿ

11:11 AM Jun 24, 2017 | |

ಬೆಂಗಳೂರು: ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿ ಬಗೆಗಿನ ಗೊಂದಲಗಳಿಗೆ ತೆರೆಬಿದ್ದಿದ್ದು, ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆದಾಯ ಹೆಚ್ಚಳವಾಗುವ ಜತೆಗೆ ಗ್ರಾಹಕರಿಗೂ ಅನುಕೂಲವಾಗುವ ವಿಶ್ವಾಸವಿದೆ ಎಂದು ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

Advertisement

ಅಸೋಚಾಮ್‌ ಸಿಇಎಎಂಎ ಸಂಸ್ಥೆಯು ವಿಡಿಯೋಕಾನ್‌ ಹಾಗೂ ವಿಡಿಯೋಕಾನ್‌ ಡಿ2ಎಚ್‌ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಎಸ್‌ಟಿ ಕುರಿತ ಸಮ್ಮೇಳನದಲ್ಲಿ ಮಾತನಾಡಿದ ಅವರು, “ಸಾಕಷ್ಟು ಚರ್ಚೆ, ಜಾಗೃತಿ ಮೂಲಕ ಸುಮಾರು 12 ವರ್ಷದ ಬಳಿಕ “ಒಂದು ದೇಶ- ಒಂದು ತೆರಿಗೆ’ ಪರಿಕಲ್ಪನೆಯಡಿ ಜಿಎಸ್‌ಟಿ ಜಾರಿಗೆ ದಿನ ಗಣನೆ ಶುರುವಾಗಿದೆ.

ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ದೇಶ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡುವುದನ್ನು ರಾಜ್ಯ ಸರ್ಕಾರ ಮುಂದುವರಿಸಿದೆ. ಜಿಎಸ್‌ಟಿ ಜಾರಿಯಿಂದ ಅನಧಿಕೃತ ವಹಿವಾಟು, ವ್ಯವಹಾರಗಳಿಗೆ ಕಡಿವಾಣ ಬೀಳುವ ನಿರೀಕ್ಷೆ ಇದೆ,’ ಎಂದು ಹೇಳಿದರು. “ಕರ್ನಾಟಕ ಮೊದಲಿನಿಂದಲೂ ತೆರಿಗೆ ಸಂಗ್ರಹಣೆಯಲ್ಲಿ ಉತ್ತಮ ಸಾಧನೆ ತೋರುತ್ತಿದ್ದು, ವಾರ್ಷಿಕ ಸರಾಸರಿ ಶೇ.14ರಷ್ಟು ಬೆಳವಣಿಗೆ ದರದಲ್ಲಿ ಆದಾಯ ಗಳಿಸುತ್ತಿದೆ.

ಕೃಷಿ, ಕೈಗಾರಿಕೆ, ವ್ಯಾಪಾರ, ಉದ್ದಿಮೆಗಳಿಂದಾಗಿ ಉದ್ಯೋಗಾವಕಾಶದ ಜತೆಗೆ ದೇಶದ ಆರ್ಥಿಕ ಪ್ರಗತಿಗೆ ಜಿಎಸ್‌ಟಿ ಸಹಕಾರಿಯಾಗುತ್ತದೆ. ಆದರೆ ದೇಶದಲ್ಲಿ ಕೇವಲ ಶೇ.3ರಷ್ಟು ಜನರಷ್ಟೇ ಆದಾಯ ತೆರಿಗೆ ಪಾವತಿಸುತ್ತಿದ್ದು, ಜನತೆ ನ್ಯಾಯಯುತ ತೆರಿಗೆಯನ್ನು ಪಾವತಿಸಿದಾಗಷ್ಟೇ ದೇಶ, ರಾಜ್ಯ ಪ್ರಗತಿ ಕಾಣಲು ಸಾಧ್ಯ ಎಂಬುದನ್ನು ಅರಿಯಬೇಕು,’ ಎಂದು ಮನವಿ ಮಾಡಿದರು.

ಅಸೋಚಾಮ್‌ ಸಂಸ್ಥೆ ಹೊಸ ಜಿಎಸ್‌ಟಿ ವ್ಯವಸ್ಥೆ ಬಗ್ಗೆ ಉತ್ಪಾದಕರು, ಸಗಟು ಮಾರಾಟಗಾರರು ಸೇರಿದಂತೆ ಸಂಬಂಧಿತ ಕ್ಷೇತ್ರದವರಲ್ಲಿ ಜಾಗೃತಿ ಮೂಡಿಸಲು ದೇಶಾದ್ಯಂತ ಈವರೆಗೆ 69 ಸಮ್ಮೇಳನ ಆಯೋಜಿಸುವ ಜತೆಗೆ ಒಟ್ಟು 200 ಸಮ್ಮೇಳನ ನಡೆಸುವ ಗುರಿ ಹೊಂದಿರುವುದು ಅಭಿನಂದನೀಯ ಎಂದು ಹೇಳಿದರು.

Advertisement

ದೇಶದ ಮಹತ್ವಾಕಾಂಕ್ಷೆಯ ಜಿಎಸ್‌ಟಿ ಜಾರಿಗೆ ಕರ್ನಾಟಕ ಸರ್ಕಾರ ಸರ್ವಾನುಮತದಿಂದ ಅನುಮೊದನೆ ನೀಡಿದೆ. ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ದೇಶದ ಉಳಿದೆಲ್ಲಾ ರಾಜ್ಯಗಳು ಜಿಎಸ್‌ಟಿ ಜಾರಿಗೆ ಒಪ್ಪಿಗೆ ನೀಡಿವೆ ಎಂಬ ಮಾಹಿತಿ ಇದೆ. ರಾಜ್ಯದಲ್ಲಿ ವರ್ಷದಿಂದೀಚೆಗೆ ಜಿಎಸ್‌ಟಿ ಜಾರಿ ಬಗ್ಗೆ ವ್ಯಾಪಾರ, ಉದ್ದಿಮೆ, ಕೈಗಾರಿಕಾ ಒಕ್ಕೂಟಗಳೊಂದಿಗೆ ಸಾಕಷ್ಟು ಚರ್ಚೆ ನಡೆಸಲಾಗಿದೆ.

ಹೊಸ ತೆರಿಗೆ ವ್ಯವಸ್ಥೆಯಿಂದ ವಾಣಿಜ್ಯ ತೆರಿಗೆ, ಸುಂಕ, ಸೇವಾ ತೆರಿಗೆ, ರಾಜ್ಯ ಪ್ರವೇಶ ತೆರಿಗೆ, ವ್ಯಾಟ್‌ ಸೇರಿದಂತೆ ಇತರೆ ನಾನಾ ಬಗೆಯ ತೆರಿಗೆ ವಿಧಿಸುವ ವ್ಯವಸ್ಥೆ ಅಂತ್ಯವಾಗಲಿದೆ. ರಾಜ್ಯಗಳ ಗಡಿಯಲ್ಲಿನ ಟೋಲ್‌ಗೇಟ್‌ಗಳು ರದ್ದಾಗಲಿವೆ. ಇಷ್ಟಾದರೂ ಪಾರದರ್ಶಕ ತೆರಿಗೆ ಸಂಗ್ರಹ ವ್ಯವಸ್ಥೆ ಬರಲಿದೆ ಎಂದು ವಿವರಿಸಿದರು.

ಜಿಎಸ್‌ಟಿ ಜಾರಿ ಬಳಿಕ ರಾಜ್ಯಗಳ ಸರಾಸರಿ ವಾರ್ಷಿಕ ಆದಾಯ ಸಂಗ್ರಹಣೆಯಲ್ಲಿ ಇಳಿಕೆಯಾದರೆ ಐದು ವರ್ಷಗಳವರೆಗೆ ಪರಿಹಾರ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿರುವುದು ಉತ್ತಮ ಹೆಜ್ಜೆ. ಜಿಎಸ್‌ಟಿಯಿಂದ ವ್ಯಾಪಾರ, ವಹಿವಾಟು ನಡೆಸುವವರಿಗೆ ಅನುಕೂಲವಾಗಲಿದೆ. ಸದ್ಯ ಕರ್ನಾಟಕದಲ್ಲಿ ವ್ಯಾಪಾರಿಯೊಬ್ಬರು ಎಲೆಕ್ಟ್ರಾನಿಕ್‌ ಉಪಕರಣ ಆಮದು ಮಾಡಿಕೊಂಡರೆ ಶೇ.5ರಷ್ಟು ವ್ಯಾಟ್‌ ಪಾವತಿಸಬೇಕು.

ಆದರೆ ಕೆಲ ರಾಜ್ಯಗಳಲ್ಲಿ ವ್ಯಾಟ್‌ ಪ್ರಮಾಣ ಶೇ.12.5ರಷ್ಟಿದೆ. ಈ ರೀತಿಯ ತೆರಿಗೆ ಹೊರೆಗಳು ತಪ್ಪಲಿದ್ದು, ಏಕಪ್ರಕಾರದ ತೆರಿಗೆ ವ್ಯವಸ್ಥೆ ಜಾರಿಯಾಗಲಿದೆ ಎಂದು ಹೇಳಿದರು. ಅಸೋಚಾಮ್‌ನ ಪ್ರದೀಪ್‌ ದೂಧ್‌, ಸೇವಾ ತೆರಿಗೆ ಆಯುಕ್ತ ನಾರಾಯಣಸ್ವಾಮಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next