Advertisement

ಜಿಲ್ಲೆಯಲ್ಲಿ ಕುರಿ ಕಳ್ಳತನ ಹೆಚ್ಚಳ: ಮಂಟೂರ

11:00 AM May 24, 2022 | Team Udayavani |

ಲೋಕಾಪುರ: ಜಿಲ್ಲೆಯಲ್ಲಿ ಕುರಿ ಕಳ್ಳತನಗಳ ಪ್ರಕರಣ ತಡೆಯುವಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ವಿಫಲವಾಗಿರುವುದನ್ನು ಖಂಡಿಸಿ ಮೇ 27ರಂದು ಬಾಗಲಕೋಟೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ಕುರುಬ ಸಂಘದ ತಾಲೂಕು ಅಧ್ಯಕ್ಷ ಎಂ.ಆರ್‌. ಮಂಟೂರ ಹೇಳಿದರು.

Advertisement

ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆವರು, ಕುರಿ ಕಳ್ಳತನವಾಗಿರುವ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ ಎಂದರು.

ನ್ಯಾಯವಾದಿ ಯಲ್ಲಪ್ಪ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 42 ಕುರಿಗಳು ಕಳ್ಳತನವಾಗಿವೆ. ಇಲ್ಲಿಯವರೆಗೂ ಕುರಿಗಾಹಿಗಳಿಗೆ ನ್ಯಾಯ ಸಿಕ್ಕಿಲ್ಲ ಎಂದು ತಿಳಿಸಿದರು. ಕುರಿಗಾಹಿ ಈಶ್ವರ ಬಿಜ್ಜನ್ನವರ ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಯಮನಪ್ಪ ಹೊರಟ್ಟಿ, ಕಾಮಣ್ಣ ಜೋಗಿ, ಸಿದ್ದು ಪೂಜಾರಿ, ಯಮನಪ್ಪ ಚಿಚಖಂಡಿ, ಈಶ್ವರ ಬಿಜ್ಜನ್ನವರ, ಕೃಷ್ಣಾ ಮುಧೋಳ, ಲಕ್ಷಣ ಬಿಜ್ಜನ್ನವರ ಇದ್ದರು.

Advertisement

ಕುರಿ ಕಳ್ಳರ ಬಂಧನಕ್ಕೆ ಆಗ್ರಹ

ಬಾದಾಮಿ: ರಾಜ್ಯಾದ್ಯಂತ ಕುರಿಗಳ ಕಳ್ಳತನ ಪ್ರಕರಣಗಳು ಯಥೇಚ್ಚವಾಗಿ ನಡೆಯುತ್ತಿದ್ದರೂ ಸಹಿತ ರಾಜ್ಯ ಸರಕಾರ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಳ್ಳರನ್ನು ಹಿಡಿದು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಹನಮಂತ ಅಪ್ಪನ್ನವರ ಆಗ್ರಹಿಸಿದರು.

ಪಟ್ಟಣದ ಕಾನಿಪ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕುರಿಗಳ ಕಳ್ಳತನ ಪ್ರಕರಣ ನಡೆದರೂ ಪ್ರಕರಣ ಬೇಧಿಸುವಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ ಎಂದರು.

ಜಿಲ್ಲೆಯ ಇಳಕಲ್‌, ಗುಳೇದಗುಡ್ಡ, ಹುನಗುಂದ ಹಾಗೂ ಬಾದಾಮಿ ತಾಲೂಕಿನ ವಿವಿಧ ಕಡೆಗಳಲ್ಲಿ ಕುರಿ ಕಳ್ಳತನ ನಡೆದಿದೆ. ಈ ಕುರಿತು ಲಿಖೀತ, ಮೌಖೀಕವಾಗಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮಾಜಿ ಸಿಎಂ, ಶಾಸಕ ಸಿದ್ಧರಾಮಯ್ಯ ಅವರ ಮೂಲಕ ಸರಕಾರಕ್ಕೆ ಪತ್ರ ಬರೆಸಿದ್ದರೂ ಕ್ರಮ ಕೈಗೊಂಡಿಲ್ಲ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿದ್ದೇವೆ. ಸರಕಾರ ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಗುರುತಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕುರಿ ಕಳ್ಳತನ ಪ್ರಕರಣಗಳು ನಡೆದಾಗ ಮಾಲೀಕರಿಗೆ ಪರಿಹಾರ ಧನ ನೀಡಬೇಕು ಎಂದರು.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಕುರಿಗಾರರ ಕುಂದುಕೊರತೆ ಸಭೆ ಮತ್ತು ಠಾಣಾ ವ್ಯಾಪ್ತಿಯಲ್ಲಿ ಪ್ರತಿ ತಿಂಗಳಿಗೊಮ್ಮೆ ಕುಂದುಕೊರತೆ ಸಭೆ ನಡೆಸಲು ಕ್ರಮ ಕೈಗೊಳ್ಳಬೇಕು. ಸರಕಾರ ಕುರಿಗಾರರಿಗೆ ಶಾಶ್ವತ ಪರಿಹಾರ ನಿಧಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಈ ಕುರಿತು ಬರುವ ಮೇ 27ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು. ಕುರಿಗಾರರಾದ ಬಸವರಾಜ ದ್ಯಾವನವರ, ಚಿದಾನಂದ ಕೋರನ್ನವರ, ಗದಿಗೆಪ್ಪ ಕುರಿ, ರಂಗಪ್ಪ ಮುಚ್ಚಳಗುಡ್ಡ, ದ್ಯಾಮನ್ನ ಅನವಾಲ, ಶರಣಪ್ಪ ಕರಿಗಾರ, ಹನಮಂತ ಪೂಜಾರ ಹಾಜರಿದ್ದರು.

ಈಗಾಗಲೇ ಕುರಿ ಕಳ್ಳತನದ ವಿಷಯ ಗಮನಕ್ಕೆ ಬಂದಿರುವುದರಿಂದ ಜುಲೈ 27ರಂದು ನಡೆಯುವ ಕರ್ನಾಟಕ ಸಹಕಾರ ಕುರಿ ಮಹಾಮಂಡಳದ ಸಬೆಯಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ. ಕಾಗಿನೆಲೆ ಕನಕಾಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಹಾಮಂಡಳದ ಅಧ್ಯಕ್ಷರು ಉಪಾಧ್ಯಕ್ಷರು ಎಲ್ಲ ನಿರ್ದೇಶಕರನ್ನು ಒಳಗೊಂಡ ನಿಯೋಗದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಲಾಗುವುದು. -ಕಾಶಿನಾಥ್‌ ಹುಡೇದ, ಉಪಾಧ್ಯಕ್ಷರು ಕರ್ನಾಟಕ ಸಹಕಾರ ಕುರಿ ಮಹಾಮಂಡಳ

Advertisement

Udayavani is now on Telegram. Click here to join our channel and stay updated with the latest news.

Next