ಶಿರಸಿ: ಕೋವಿಡ್ ಎರಡನೇ ಅಲೆಯ ನಂತರ ಪುನಃ ಆರಂಭಗೊಂಡ ಅಡಕೆ ಟೆಂಡರ್ ಪ್ರಕ್ರಿಯೆಯಲ್ಲಿ ಕಳೆದ ಮೂರು ದಿನಗಳಿಂದ ಚಾಲಿ, ಕೆಂಪಡಕೆ, ಕಾಳು ಮೆಣಸು ಸೇರಿದಂತೆ ಕೃಷಿ ಉತ್ಪನ್ನಗಳ ವಹಿವಾಟು ಏರುಮುಖದಲ್ಲೇ ಶುರುವಾಗಿದೆ.
ಬೆಳಗ್ಗೆ 8ರಿಂದಲೇ ಅಡಕೆ ಅಂಗಳದಲ್ಲಿ ಟೆಂಡರ್ ಸಿದ್ಧತೆ ನಡೆಸಿ ಮಧ್ಯಾಹ್ನ ಒಂದರೊಳಗೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡು ನಂತರ ಅಡಕೆ ಅಳೆಯುವ ಕಾರ್ಯ ನಡೆಯುತ್ತಿದೆ. ಕೋವಿಡ್ ನಿಯಮಾನುಸಾರ ನಡೆಸಲಾಗುತ್ತಿರುವ ಟೆಂಡರ್ ಪ್ರಕ್ರಿಯೆ ಬೆಳೆಗಾರರಿಗೆ ಇನ್ನೊಂದು ಭರವಸೆ ಮೂಡಿಸಿದೆ.
ಏರು ಮುಖ: ಧಾರಣೆಯಲ್ಲಿ ಕಳೆದೆರಡು ದಿನಗಳಿಗೆ ಹೋಲಿಸಿದರೆ ಕೊಂಚ ತೇಜಿಯೇ ಕಾಣುತ್ತಿದೆ. ಶಿರಸಿ ಟಿಎಂಎಸ್ ಸೊಸೈಟಿಯಲ್ಲಿ ಪ್ರತಿ ಕ್ವಿಂಟಾಲ್ ಕೆಂಪಡಕೆಗೆ ಗರಿಷ್ಠ 42599 ರೂ. ತನಕೂ ದಾಖಲಾಗಿದೆ. ಚಾಲಿ ಅಡಕೆ ಕೂಡ ಟಿಎಸ್‌ಎಸ್ ಅಂಗಳದಲ್ಲಿ ಪ್ರತಿ ಕ್ವಿಂಟಾಲ್‌ಗೆ 40098 ರೂ. ಕಂಡಿದೆ. ಚಾಲಿಗೆ ಶಿರಸಿ ಮಾರುಕಟ್ಟೆಯಲ್ಲಿ ಸರಾಸರಿ 38700 ರೂ. ದಾಖಲಾಗಿದೆ. ಗುರುವಾರ, ಶುಕ್ರವಾರ ಚಾಲಿಗೆ 41 ಸಾವಿರ ರೂ. ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲ ವರ್ತಕರು.
ಅಡಕೆ ವಹಿವಾಟಿಗೆ ಬೆಳೆ ವರ್ತಕರ ಕೈಲಿಲ್ಲ. ಲಾಕ್‌ಡೌನ್ ಕಾರಣದಿಂದ ಅಡಕೆ ಸಿಕ್ಕಿರಲಿಲ್ಲ ಎಂದು ದರ ಏರಿಸಲಾಗುತ್ತಿದೆ. ಇದೇ ಕಾರಣ ನಿಜವಾದರೆ ಜೂನ್ ಕೊನೇ ತನಕ ದರ ನಿಲ್ಲಬಹುದು ಎನ್ನಲಾಗುತ್ತಿದೆ. ನಂತರ ಇಳಿದು ಶ್ರಾವಣದಲ್ಲಿ ಏರಿಕೆ ಆಗಬಹುದು ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಣಾಕಾರರು. ಈ ದರ ಕೂಡ ತೀರಾ ಕಡಿಮೆ ಅಲ್ಲ ಎನ್ನುತ್ತಾರೆ ಬೆಳೆಗಾರ ವೇಣು ಹೆಗಡೆ.
ಗ್ರಾಮೀಣದಲ್ಲೂ ಪುನರಾರಂಭ: ಗ್ರಾಮೀಣ ಮಾರುಕಟ್ಟೆ ಯಡಹಳ್ಳಿ ಸೇವಾ ಸಹಕಾರಿ ಸಂಘದ ಪ್ರಾಂಗಣದಲ್ಲೂ ಲಾಕ್‌ಡೌನ್ ನಂತರ ಅಡಕೆ ವ್ಯಾಪಾರ ಪುನಃ ಆರಂಭವಾಗಿದೆ. ಈವರೆಗೆ ಶಿರಸಿ ಕೇಂದ್ರದಲ್ಲಿ ಮಾತ್ರ ನಡೆಯುತ್ತಿದ್ದ ಅಡಕೆ ಟೆಂಡರ್ ವಹಿವಾಟು ಈ ಮೊದಲಿನಂತೆ ಯಡಹಳ್ಳಿಗೂ ಆಗಮಿಸಿ ವರ್ತಕರು ಟೆಂಡರ್ ಬರೆಯುತ್ತಿದ್ದಾರೆ. ಕದಂಬ ಮಾರ್ಕೇಟಿಂಗ್‌ನಲ್ಲಿ ಬಾಳೆಗೊನೆ, ಗೇರುಬೀಜ, ಕಾಳು ಮೆಣಸು ಹಾಗೂ ಕೊಕ್ಕೋ ಕೂಡ ಖರೀದಿ ಮಾಡಲಾಗುತ್ತಿದೆ. ಈ ಬಾರಿ ಕೊಕ್ಕೋ ಬೀಜ ಕೇಜಿಗೆ 50 ರೂ. ಇದೆ. ಹತ್ತು ದಿನಗಳ ಹಿಂದೆ 10 ರೂ. ಕಾಣದ ಮೆಟಿÉ ಬಾಳೆಕಾಯಿ ಈಗ ಸರಾಸರಿ 16 ರೂ. ಪ್ರತಿ ಕೇಜಿಗೆ ದಾಖಲಾಗುತ್ತಿದೆ. ಕಳೆದ ಲಾಕ್‌ಡೌನ್ ವೇಳೆಯಿಂದಲೂ ಟಿಎಸ್‌ಎಸ್ ಕೆಲ ದಿನ ಅಡಕೆ ನೇರ ಖರೀದಿ ಮಾಡಿ ರೈತರಿಗೆ ನೆರವಾಗಿತ್ತು. ಇದು ಬಿಟ್ಟರೆ ಸಹಕಾರಿ ವ್ಯವಸ್ಥೆಯಲ್ಲಿ ಟೆಂಡರ್ ನಡೆದಿರಲಿಲ್ಲ. ಕಳೆದ ಮೂರು ದಿನಗಳಿಂದ ವಹಿವಾಟು ಚುರುಕಾಗಿದೆ. ಏರುಮುಖದ ಧಾರಣೆ ಕಂಗಾಲಾಗಿದ್ದ ರೈತರಿಗೆ ಕೊಂಚ ನಿಟ್ಟುಸಿರು ಬಿಡುವಂತೆ ಆಗಿದೆ.
ಕಪ್ಪು ಬಂ ಗಾರವೂ ಏರಿಕೆ: ಇದೇ ರೀತಿ ಕಪ್ಪು ಬಂಗಾರ ಎಂದೇ ಹೆಸರಾದ ಕಾಳು ಮೆಣಸಿಗೂ ಸರಾಸರಿ ಶಿರಸಿ ಟೆಂಡರ್‌ನಲ್ಲಿ 39665 ರೂ. ದಾಖಲಾಗಿದ್ದರೆ, ಗರಿಷ್ಠ ಕ್ವಿಂಟಾಲ್ ಕಾಳಿಗೆ 40199 ರೂ. ಲಭಿಸುತ್ತಿದೆ. ಖಾಸಗಿ ವರ್ತಕರು ಕರಿ ಕಾಳನ್ನು 42 ಸಾವಿರ ರೂ.ಗೂ ಪ್ರತಿ ಕ್ವಿಂಟಾಲ್‌ಗೆ ಖರೀದಿಸಿದ್ದೂ ಇದೆ.