Advertisement

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಳ

10:16 AM May 27, 2018 | Team Udayavani |

ಮಹಾನಗರ: ಮಳೆಗಾಲ ಬಂತೆಂದರೆ ಸಾಂಕ್ರಾಮಿಕ ರೋಗಭೀತಿ ಶುರುವಾಗುತ್ತದೆ. ಸಾಂಕ್ರಾಮಿಕ ರೋಗಗಳ ಹಾವಳಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಆರೋಗ್ಯ ಇಲಾಖೆ ಪ್ರಯತ್ನಿಸುತ್ತಲೇ ಇದೆ. ಆದರೂ ಅವುಗಳ ಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಅಧಿಕಗೊಳ್ಳುತ್ತಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗುತ್ತಿದೆ.

Advertisement

ಕಳೆದ ವರ್ಷದ ಅಂಕಿ ಅಂಶಗಳನ್ನು ತೆಗೆದು ನೋಡಿದರೆ ಈ ಬಾರಿ ಜನವರಿಯಿಂದ ಎಪ್ರಿಲ್‌ವರೆಗೆ ದಾಖಲಾಗಿರುವ ಮಲೇರಿಯಾ, ಡೆಂಗ್ಯೂ ಮತ್ತು ಇಲಿ ಜ್ವರಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಜಿಲ್ಲೆಯಲ್ಲಿ ಕಳೆದ ವರ್ಷ ಜನವರಿಯಿಂದ ಎಪ್ರಿಲ್‌ವರೆಗೆ ಕೇವಲ 8 ಡೆಂಗ್ಯೂ ಪ್ರಕರಣ ಪತ್ತೆಯಾದರೆ, ಈ ಬಾರಿ ಅದೇ ನಾಲ್ಕು ತಿಂಗಳಲ್ಲಿ ಒಟ್ಟು 40 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 2017ರಲ್ಲಿ ಮಂಗಳೂರಿನಲ್ಲಿ ಕೇವಲ 5 ಪ್ರಕರಣ ಕಂಡು ಬಂದರೆ ಈ ಬಾರಿ ಎಪ್ರಿಲ್‌ ವೇಳೆಗೆ 18 ಪ್ರಕರಣ ಪತ್ತೆಯಾಗುವ ಮೂಲಕ ಮೊದಲ ಸ್ಥಾನದಲ್ಲಿದೆ. ಇನ್ನು ಬಂಟ್ವಾಳದಲ್ಲಿ ಕಳೆದ ವರ್ಷ 2 ಡೆಂಗ್ಯೂ ಪತ್ತೆಯಾದರೆ ಈ ವರ್ಷ 5, ಬೆಳ್ತಂಗಡಿಯಲ್ಲಿ ಕಳೆದ ವರ್ಷ 1, ಈ ವರ್ಷ 6 ಪ್ರಕರಣಗಳು ಪತ್ತೆಯಾಗಿವೆ. ಪುತ್ತೂರು ಮತ್ತು ಸುಳ್ಯದಲ್ಲಿ ಕಳೆದ ವರ್ಷ ಯಾವುದೇ ಡೆಂಗ್ಯೂ ಜ್ವರ ಕಂಡು ಬಂದಿಲ್ಲ. ಆದರೆ ಈ ವರ್ಷ ಕ್ರಮವಾಗಿ 5 ಮತ್ತು 6 ಪ್ರಕರಣಗಳು ನಾಲ್ಕು ತಿಂಗಳಲ್ಲಿ ಪತ್ತೆಯಾಗಿವೆ.

ಕಳೆದ ವರ್ಷ 137 ಮಂದಿಗೆ ಡೆಂಗ್ಯೂ
ಕಳೆದ ವರ್ಷ ಜನವರಿಯಿಂದ ಡಿಸೆಂಬರ್‌ವರೆಗೆ ಒಟ್ಟು 137 ಮಂದಿಗೆ ಡೆಂಗ್ಯೂ ಬಾಧಿಸಿತ್ತು. ಈ ಪೈಕಿ ಮಂಗಳೂರಿನಲ್ಲಿ 70, ಬಂಟ್ವಾಳ 17, ಬೆಳ್ತಂಗಡಿ 8, ಪುತ್ತೂರು 18 ಹಾಗೂ ಸುಳ್ಯದಲ್ಲಿ 24 ಪ್ರಕರಣ ಪಾಸಿಟಿವ್‌ ಆಗಿತ್ತು. ಕಳೆದ ವರ್ಷ ಹಾಗೂ 2018ರಲ್ಲಿ ಎಪ್ರಿಲ್‌ ತನಕ ಡೆಂಗ್ಯೂ ಜ್ವರದಿಂದ ಸಾವು ಸಂಭವಿಸಿಲ್ಲ.

ಇಲಿಜ್ವರ ಸಂಖ್ಯೆ ಹೆಚ್ಚಳ
ಜಿಲ್ಲೆಯಲ್ಲಿ ಇಲಿಜ್ವರ ಸಂಖ್ಯೆಯೂ ಹೆಚ್ಚಳವಾಗಿದೆ. ಕಳೆದ ವರ್ಷ ಜನವರಿಯಿಂದ ಎಪ್ರಿಲ್‌ ತನಕ ಒಟ್ಟು 13 ಇಲಿಜ್ವರ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾದರೆ, ಈ ವರ್ಷ ಎಪ್ರಿಲ್‌ವರೆಗೆ ಒಟ್ಟು 15 ಪ್ರಕರಣ ಪಾಸಿಟಿವ್‌ ಆಗಿ ಕಂಡು ಬಂದಿವೆ.

Advertisement

2017ರ ಎಪ್ರಿಲ್‌ವರೆಗೆ ಮಂಗಳೂರಿನಲ್ಲಿ 7, ಬಂಟ್ವಾಳದಲ್ಲಿ 3, ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದ್ದರೆ, ಈ ವರ್ಷ ಎಪ್ರಿಲ್‌ವರೆಗೆ ಮಂಗಳೂರು 11, ಬಂಟ್ವಾಳ 1, ಬೆಳ್ತಂಗಡಿ 2, ಪುತ್ತೂರು 1 ಹಾಗೂ ಸುಳ್ಯದಲ್ಲಿ ಶೂನ್ಯ ಪ್ರಕರಣ ಪತ್ತೆಯಾಗಿದೆ. 2017 ಜನವರಿಯಿಂದ ಡಿಸೆಂಬರ್‌ವರೆಗೆ ಮಂಗಳೂರಿನಲ್ಲಿ 61, ಬಂಟ್ವಾಳದಲ್ಲಿ 20, ಬೆಳ್ತಂಗಡಿಯಲ್ಲಿ 14, ಪುತ್ತೂರಿನಲ್ಲಿ 11 ಹಾಗೂ ಸುಳ್ಯದಲ್ಲಿ 8 ಪ್ರಕರಣ ಸೇರಿ ಒಟ್ಟು 114 ಮಂದಿಗೆ ಇಲಿಜ್ವರ ಕಂಡು ಬಂದಿತ್ತು. ಇಲಿಜ್ವರದಿಂದ ಜಿಲ್ಲೆಯಲ್ಲಿ ಯಾರೂ ಮೃತಪಟ್ಟಿಲ್ಲ. 

ಕಡಿಮೆಯಾದ ಎಚ್‌1ಎನ್‌1
ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎಚ್‌1ಎನ್‌1 ಪ್ರಕರಣ ಕಡಿಮೆಯಾಗಿದೆ. ಕಳೆದ ವರ್ಷ ಜನವರಿಯಿಂದ ಎಪ್ರಿಲ್‌ ತನಕ ಮಂಗಳೂರಿನಲ್ಲಿ 15, ಬಂಟ್ವಾಳದಲ್ಲಿ 3, ಬೆಳ್ತಂಗಡಿಯಲ್ಲಿ 2, ಪುತ್ತೂರಿನಲ್ಲಿ 3, ಸುಳ್ಯದಲ್ಲಿ 2 ಸೇರಿ ಒಟ್ಟು 25 ಪ್ರಕರಣ ಪಾಸಿಟಿವ್‌ ಆದರೆ, ಈ ಬಾರಿ ಎಪ್ರಿಲ್‌ವರೆಗೆ ಮಂಗಳೂರಿನಲ್ಲಿ 3 ಪ್ರಕರಣ ಪತ್ತೆಯಾಗಿದೆ. ಉಳಿದಂತೆ ಜಿಲ್ಲೆಯ ಯಾವುದೇ ತಾಲೂಕುಗಳಲ್ಲಿಯೂ ಈವರೆಗೆ ಎಚ್‌1ಎನ್‌1 ಪ್ರಕರಣ ಪತ್ತೆಯಾಗಿಲ್ಲ. ಕಳೆದ ವರ್ಷ ಜನವರಿಯಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ ಒಟ್ಟು 330 ಮಂದಿಗೆ ಎಚ್‌1ಎನ್‌1 ಬಾಧಿಸಿತ್ತು. ಈ ಪೈಕಿ ಮಂಗಳೂರು 223, ಬಂಟ್ವಾಳ 33, ಬೆಳ್ತಂಗಡಿ 24, ಪುತ್ತೂರು 29 ಹಾಗೂ ಸುಳ್ಯದ 21 ಮಂದಿಯಲ್ಲಿ ಎಚ್‌1ಎನ್‌1 ಜ್ವರ ಕಂಡು ಬಂದಿತ್ತು. ಕಳೆದ ವರ್ಷ ಜೂನ್‌ ತಿಂಗಳೊಂದರಲ್ಲೇ 69 ಮಂದಿಗೆ ಎಚ್‌1ಎನ್‌1 ಬಾಧಿಸಿದ್ದಲ್ಲದೆ, ಬಳ್ಪದ ವ್ಯಕ್ತಿಯೊಬ್ಬರು ಶಂಕಿತ ಎಚ್‌1ಎನ್‌ 1ನಿಂದ ಮೃತಪಟ್ಟಿದ್ದರು.

ಮಲೇರಿಯಾವೂ ಅಧಿಕ
ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಮಲೇರಿಯಾ ಜ್ವರಕ್ಕೆ ಒಳಗಾಗಿ ರುವವರ ಸಂಖ್ಯೆಯೂ ಹೆಚ್ಚಳವಾಗಿದೆ. ಕಳೆದ ಬಾರಿ ಜನವರಿಯಿಂದ ಎಪ್ರಿಲ್‌ವರೆಗೆ ಒಟ್ಟು 775 ಮಂದಿಗೆ (669-ನಗರ, 106 ಗ್ರಾಮೀಣ) ಮಲೇರಿಯಾ ಜ್ವರ ತಗುಲಿದ್ದರೆ, ಈ ವರ್ಷ ಅದೇ ಸಮಯದಲ್ಲಿ ಒಟ್ಟು 863 ಮಂದಿಯಲ್ಲಿ ಮಲೇರಿಯಾ ಕಂಡು ಬಂದಿದೆ. ಈ ಪೈಕಿ 804 ಮಂದಿ ನಗರ ಪ್ರದೇಶದವರು ಹಾಗೂ 59 ಮಂದಿ ಗ್ರಾಮೀಣ ಭಾಗದವರು. 2017ರ ಜನವರಿಯಿಂದ ಡಿಸೆಂಬರ್‌ವರೆಗೆ ಒಟ್ಟು4741 ಮಂದಿ ಮಲೇರಿಯಾದಿಂದ ಬಳಲಿದ್ದಾರೆ. ಇದರಲ್ಲಿ 4144 ಮಂದಿ ನಗರ ಪ್ರದೇಶದವರಾಗಿದ್ದರೆ, 597 ಗ್ರಾಮೀಣ ಭಾಗದವರಾಗಿದ್ದಾರೆ. ವಿಶೇಷವೆಂದರೆ ಈ ಮೂರೂ ಅಂಕಿ ಅಂಶಗಳನ್ನು ನೋಡಿದಾಗ ಗ್ರಾಮೀಣ ಭಾಗದವರಿಗಿಂತ ನಗರ ಪ್ರದೇಶದವರೇ ಹೆಚ್ಚಿನ ಸಂಖ್ಯೆಯಲ್ಲಿ ಮಲೇರಿಯಾದಿಂದ ಬಳಲಿರುವುದು ಸ್ಪಷ್ಟವಾಗುತ್ತದೆ.

ಎಷ್ಟೇ ಜಾಗೃತಿ ನೀಡಿದ ಹೊರತಾಗಿಯೂ ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಲುಗಡೆ ಮಾಡುತ್ತಿರುವುದು ನಿರಂತರವಾಗಿ ನಡೆಯುತ್ತಿರುತ್ತದೆ. ಇದು ಸೊಳ್ಳೆ ಉತ್ಪತ್ತಿಗೆ ಪೂರಕ ತಾಣವಾಗಿ ಪರಿವರ್ತನೆಯಾಗುತ್ತಿದೆ. ಅಲ್ಲದೆ ಸಾಂಕ್ರಾಮಿಕ ರೋಗಗಳು ಒಬ್ಬರಿಂದಇನ್ನೊಬ್ಬರಿಗೆ ಹರಡುವ ಕಾಯಿಲೆಯಾಗಿದೆ. ಇತರ ಜಿಲ್ಲೆಗಳ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಂಗಳೂ ರಿಗೆ ಬರುತ್ತಿರುವುದರಿಂದ ಇಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಶುಚಿತ್ವದ ಕೊರತೆಯಿಂದ ಹೆಚ್ಚು ಮಲೇರಿಯಾ ಕಾಣಿಸಿಕೊಳ್ಳುತ್ತಿದೆ. ಕಳೆದ ವರ್ಷ ಜುಲೈ ಮತ್ತು ಆಗಸ್ಟ್‌ ತಿಂಗಳಿನಲ್ಲಿ ಕಾಣಿಸಿಕೊಂಡ ಮಲೇರಿಯಾ ಪೈಕಿ ಹೊಟೇಲ್‌, ಲಾಡ್ಜ್, ನಿರ್ಮಾಣ ಹಂತದ ಕಟ್ಟಡಗಳಲ್ಲಿನ ಶುಚಿತ್ವದ ಕೊರತೆಯಿಂದ ಕಾಣಿಸಿಕೊಂಡದ್ದೇ ಹೆಚ್ಚಿದೆ. 

ರೋಗ ಲಕ್ಷಣಗಳೇನು?
ಜ್ವರ ಬರುವುದು, ಕಣ್ಣಿನ ಹಿಂಭಾಗ ನೋವು, ತಲೆನೋವು, ಸಂಧಿನೋವು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡರೆ ಅದು ಡೆಂಗ್ಯೂ ಜ್ವರದ ಲಕ್ಷಣಗಳಾಗಿವೆ. ಶೀತ, ತಲೆನೋವು, ಕೆಮ್ಮು, ಮೈ ಮೇಲೆ ಬೊಕ್ಕೆಗಳು ಕಾಣಿಸಿಕೊಳ್ಳುವುದು, ಉಸಿರಾಟದ ತೊಂದರೆ, ಎದೆ, ಹೊಟ್ಟೆಯಲ್ಲಿ ನೋವು, ತಲೆ ಸುತ್ತುವುದು, ಆಗಾಗ ವಾಂತಿ, ಅತಿಸಾರ ಬೇಧಿ, ಎಚ್ಚರ ತಪ್ಪುವಿಕೆ ಮುಂತಾದವು ಎಚ್‌1ಎನ್‌1ನ ಲಕ್ಷಣಗಳಾಗಿರುತ್ತವೆ. ಜ್ವರ, ಮಾಂಸ ಖಂಡಗಳ ನೋವು, ತಲೆನೋವು, ಮೈಕೈ ನೋವು ಇಲಿಜ್ವರದ ಲಕ್ಷಣವಾಗಿದೆ. ನಡುಕದಿಂದ ಕೂಡಿದ ಜ್ವರ, ತಲೆನೋವು, ಜ್ವರದ ಏರಿಳಿತ, ವಾಂತಿ ಮುಂತಾದವು ಮಲೇರಿಯಾದ ಪ್ರಮುಖ ಲಕ್ಷಣವಾಗಿದೆ. 

ಮಂಗಳೂರಲ್ಲೇ ಅತ್ಯಧಿಕ ಯಾಕೆ?
ಮಂಗಳೂರಿನಲ್ಲಿ 2017ರಲ್ಲಿ 61 ಇಲಿಜ್ವರ, 223 ಎಚ್‌1 ಎನ್‌1, 70 ಡೆಂಗ್ಯೂ, (ಜನವರಿ – ಎಪ್ರಿಲ್‌ವರೆಗೆ ಕ್ರಮವಾಗಿ 7, 15, 5), 2018ರಲ್ಲಿ 11 ಇಲಿಜ್ವರ, 3 ಎಚ್‌1ಎನ್‌1, 5 ಡೆಂಘೀ ಪ್ರಕರಣಗಳು ಕಂಡು ಬರುವ ಮೂಲಕ ಸಾಂಕ್ರಾಮಿಕ ರೋಗ ಹಾವಳಿಯಲ್ಲಿ ನಗರ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಎಲ್ಲ ತಾಲೂಕುಗಳಲ್ಲಿ ಸಾಂಕ್ರಾ ಮಿಕ ರೋಗಗಳ ಸಂಖ್ಯೆ ಹತೋಟಿಯಲ್ಲಿದೆ. 

ಸರ್ವ ಪ್ರಯತ್ನ
ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸರ್ವ ರೀತಿಯಲ್ಲಿಯೂ ಪ್ರಯತ್ನ ನಡೆಸುತ್ತಿದೆ. ಮುನ್ನೆಚ್ಚರಿಕ ಕ್ರಮವಾಗಿ ಮನೆ ಮನೆ ಭೇಟಿಯೊಂದಿಗೆ ಅರಿವು ಮೂಡಿಸುವುದು, ಮನೆಯ ಬಾವಿಯಲ್ಲಿ ಗಪ್ಪಿ ಮೀನು ಬಿಡಲು ಪ್ರೇರೇಪಿಸುವುದು, ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವ ಬಗ್ಗೆ ಸೂಚನೆ ನೀಡಲಾಗುತ್ತಿದೆ. ಎಲ್ಲ ರೋಗಗಳ ಸಂಖ್ಯೆಗಳನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಇಲಾಖೆ ಪ್ರಯತ್ನಿಸಲಿದೆ.
– ಡಾ| ರಾಜೇಶ್‌,
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ 

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next