ಚುನಾವಣ ಆಯೋಗದ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಖರ್ಚಿನ ಮಿತಿಯನ್ನು 10 ಪ್ರತಿಶತ ಏರಿಕೆ ಮಾಡಿದೆ. ಕೋವಿಡ್‌ನ ಈ ಸಮಯದಲ್ಲಿ ಚುನಾವಣ ಪ್ರಚಾರ ವೈಖರಿಗಳೂ ಬದಲಾಗಿರುವುದರಿಂದ, ಅಭ್ಯರ್ಥಿಗಳಿಗೆ ಅಧಿಕ ಖರ್ಚಿನ ಅಗತ್ಯ ಎದುರಾಗುತ್ತದೆ ಎನ್ನುವ ದೃಷ್ಟಿಯಿಂದ ಹೀಗೆ ಮಾಡಲಾಗಿದೆ. ಇನ್ಮುಂದೆ ವಿಧಾನಸಭೆ ಚುನಾವಣೆ ಎದುರಿಸಲಿರುವ ಅಭ್ಯರ್ಥಿ 28 ಲಕ್ಷ ರೂಪಾಯಿಯ ಬದಲು 30.8 ಲಕ್ಷ ರೂಪಾಯಿ ಖರ್ಚು ಮಾಡಬಹುದಾಗಿದೆ. ಇನ್ನು ಲೋಕಸಭೆಗೆ ಚುನಾವಣೆಗೆ 70 ಲಕ್ಷದಷ್ಟಿದ್ದ ಮಿತಿಯನ್ನು 77 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. 2014ರ ಚುನಾವಣೆಗೂ ಮುನ್ನ ಚುನಾವಣ ಆಯೋಗ ಪ್ರಚಾರ ಖರ್ಚಿನ ಮಿತಿ ಯನ್ನು ಹೆಚ್ಚಿಸಿತ್ತು, ಈಗ ಆರು ವರ್ಷಗಳ ನಂತರ ಮತ್ತೆ ಪರಿಷ್ಕರಣೆ ಮಾಡಿದೆ. ಪ್ರಾಮಾಣಿಕ ಅಭ್ಯರ್ಥಿ ಯಾಗಿದ್ದರೆ, ಈ ನಿಗದಿತ ಮೊತ್ತದ ವ್ಯಾಪ್ತಿಯಲ್ಲೇ ಖರ್ಚನ್ನು ಸರಿದೂಗಿ ಸು ತ್ತಾನಾದರೂ, ಇಲ್ಲಿಯವರೆಗಿನ ಚುನಾವಣ ಪ್ರಚಾರ ವೈಖರಿ ಗಳನ್ನೆಲ್ಲ ನೋಡುತ್ತಾ ಬಂದವರಿಗೆ, ರಾಜಕಾರಣಿಗಳು ಈ ನಿಯಮವನ್ನು ನಿರ್ವಿಘ್ನವಾಗಿ ಉಲ್ಲಂ ಸುತ್ತಾ ಬರುತ್ತಾರೆ ಎನ್ನುವುದು ತಿಳಿದೇ ಇದೆ. ಈ ವಿಚಾರದಲ್ಲಿ ಕೆಲವೊಮ್ಮೆ ಪಕ್ಷಗಳು ಎದುರಾಳಿ ನಾಯಕರ ವಿರುದ್ಧ ದೂರು ನೀಡುತ್ತಲೇ ಬಂದಿದ್ದಾವಾದರೂ, ಇಂಥ ಅಕ್ರಮವನ್ನು ತಡೆಯಲು ಸಾಧ್ಯವಾಗಿಯೇ ಇಲ್ಲ. ರಾಜಕೀಯ ಪಕ್ಷಗಳಿಗೆ ಚುನಾವಣಾ ಸಮಯದಲ್ಲಿ ಹರಿದುಬರುವ ದೇಣಿಗೆಯ ವಿಚಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಲು ಎಲಕ್ಟೋರಲ್ ಬಾಂಡ್‌ಗಳನ್ನು ತರಲಾಗಿದೆ. ಆದರೆ ಈ ಕ್ರಮ ಗಳಿಂದಲೂ ಅಕ್ರಮವನ್ನು ತಡೆಯಲು ಪೂರ್ಣವಾಗಿ ಸಾಧ್ಯವಿಲ್ಲ ಎನ್ನುವುದು ಪರಿಣತರ ಅಭಿಪ್ರಾಯ.
ಚುನಾವಣ ಆಯೋಗದ ಕಟ್ಟುನಿಟ್ಟಾದ ನಿಯಮಗಳ ಹೊರತಾಗಿಯೂ ಅಭ್ಯರ್ಥಿಗಳು ನಿಗದಿತ ಪ್ರಮಾಣಕ್ಕಿಂತಲೂ ಲೆಕ್ಕತಪ್ಪಿ ಖರ್ಚು ಮಾಡುತ್ತಲೇ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಂತೂ ಚುನಾವಣೆಗಳಲ್ಲಿ ಧನಬಲದ ಪ್ರದರ್ಶನ ಬಿಡು ಬೀಸಾಗಿಯೇ ನಡೆಯುತ್ತಿದೆ. ಚುನಾವಣ ಖರ್ಚುಗಳಿಗಾಗಿ ಪಕ್ಷಗಳು ಮತ್ತು ಅಭ್ಯರ್ಥಿಗಳು ಚಂದಾ ಸಂಗ್ರಹಿಸಲು ವ್ಯಾಪಕವಾಗಿ ಅಭಿಯಾನ ನಡೆಸುತ್ತಾರೆ. ಇನ್ನು ಪಕ್ಷಗಳೂ ಸಹ ಹಣ ಚೆಲ್ಲಲು ಸಿದ್ಧವಿರುವ ಅಭ್ಯರ್ಥಿಗಳಿಗೇ ಹೂಮಾಲೆ ಹಾಕುತ್ತಾ ಬರುತ್ತಿವೆ. ಈ ಕಾರಣಕ್ಕಾಗಿಯೇ ಪೋಸ್ಟರ್, ಬ್ಯಾನರ್, ಬೃಹತ್ ಕಟೌಟ್‌ಗಳು, ಟೆಲಿವಿಷನ್, ಅಂತರ್ಜಾಲದಲ್ಲಿ ಅಗಣಿತ ಜಾಹೀರಾತುಗಳ ಸಾಗರವೇ ಕಾಣಿ ಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮತದಾರರಿಗೆ ನೇರವಾಗಿ ಹಣ ಅಥವಾ ಮದ್ಯ ಆಮಿಷ ಒಡ್ಡಿ ಮತಗಳನ್ನು ಖರೀದಿ ಮಾಡುವ ಪರಿಪಾಠವೂ ಎಲ್ಲಾ ಕಟ್ಟುನಿಟ್ಟಾದ ಕ್ರಮಗಳ ನಡುವೆ ಮುಂದುವರಿದೇ ಇದೆ. ಈ ಹಣ-ಹೆಂಡದ ಗದ್ದಲದಲ್ಲಿ ಚಿಕ್ಕ ಪಕ್ಷಗಳು ಅಥವಾ ಪ್ರಾಮಾಣಿಕ ಸ್ವತಂತ್ರ ಅಭ್ಯರ್ಥಿಗಳ ಧ್ವನಿಯೇ ಅಡಗಿಹೋಗುತ್ತದೆ.
ಇಲ್ಲಿ ಜವಾಬ್ದಾರಿ ಕೇವಲ ರಾಜಕಾರಣಿಗಳು ಹಾಗೂ ಚುನಾವಣ ಆಯೋಗದ ಮೇಲಷ್ಟೇ ಇಲ್ಲ. ಮತದಾರರು ಎಲ್ಲಿಯವರೆಗೂ ಹಣದ ಆಮಿಷಕ್ಕೆ ಒಳಗಾಗು ವುದನ್ನು ನಿಲ್ಲಿಸುವುದಿಲ್ಲವೋ, ಜಾಹೀರಾತುಗಳ ಅಬ್ಬರಗಳಿಗೆ ಮರುಳಾಗುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ರಾಜಕೀಯ ಪಕ್ಷಗಳು ಇಂಥ ಕಳ್ಳ ಮಾರ್ಗ ವನ್ನು ಹುಡುಕಿಕೊಳ್ಳುತ್ತಲೇ ಇರುತ್ತವೆ.