ಪಣಜಿ: ಗೋವಾ ರಾಜ್ಯಕ್ಕೆ ಪ್ರವಾಸಿಗರಿಗೆ ಸ್ವಾಗತವಿದೆ. ಆದರೆ ಅಪರಾಧ ಮಾಡಿ ಗೋವಾಕ್ಕೆ ಬಂದು ಉಳಿದುಕೊಳ್ಳುತ್ತಾರೊ ಅಂತವರಿಂದಾಗಿ ಗೋವಾದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಅಗತ್ಯ ಬಂದೋಬಸ್ತ್ ಮಾಡಲೇಬೇಕಾಗಿದೆ ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್ ಹೇಳಿದ್ದಾರೆ.
ಗೋವಾದಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಪಣಜಿಯಲ್ಲಿ ಪೋಲಿಸ್ ಅಧಿಕಾರಿಗಳೊಂದಿಗೆ ಪಣಜಿಯಲ್ಲಿ ಬೈಠಕ್ ನಡೆಸಿ ಚರ್ಚಿಸಿದರು.
ಸುರಕ್ಷತಾ ದೃಷ್ಠಿಯಿಂದ ಗೋವಾ ಪೋಲಿಸ್ ಕಾಯ್ದೆಯಲ್ಲಿ ಕೆಲವು ತಿದ್ಧುಪಡಿ ಮಾಡಲಾಗುವುದು. ಗೋವಾ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅಪರಾಧ ಪ್ರಕರಣಗಳ ಅಭ್ಯಾಸ ನಡೆಸಿದ ನಂತರ ಪೋಲಿಸ್ ಇಲಾಖೆ ಕೂಡ ಹಲವು ಉಪಾಯ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇದರ ಒಂದು ಭಾಗವಾಗಿ ಪೋಲಿಸ್ ಇಲಾಖೆಯ ಕಾಯ್ದೆಯಲ್ಲಿಯೂ ಕೆಲ ತಿದ್ಧುಪಡಿ ತರಲಾಗುವುದು ಎಂದು ಸಿಎಂ ಸಾವಂತ್ ಮಾಹಿತಿ ನೀಡಿದರು.
ಗೋವಾ ರಾಜ್ಯಕ್ಕೆ ಹೊರ ರಾಜ್ಯಗಳಿಂದ ಬಂದು ನೆಲಿಸಿದದವರಿಂದಲೇ ಹೆಚ್ಚಾಗಿ ಅಪರಾಧ ಪ್ರಕರಣಗಳು ನಡೆದಿರುವುದು ಪತ್ತೆಯಾಗಿದೆ. ಇದರಿಂದಾಗಿ ಗೋವಾದಲ್ಲಿ ಬಾಡಿಗೆ ಮನೆಗಳಲ್ಲಿ ವಾಸ್ತವ್ಯವಿರುವ ಎಲ್ಲರೂ ಕೂಡ ಕಡ್ಡಾಯವಾಗಿ ತಮ್ಮ ಸಂಪೂರ್ಣ ಮಾಹಿತಿಯನ್ನು ಪೋಲಿಸ್ ಇಲಾಖೆಗೆ ನೀಡಲೇಬೇಕು. ಗೋವಾದ ಜನರ ಮನೆಗಳಲ್ಲಿ ಹೊರ ರಾಜ್ಯದವರು ಕೆಲಸಕ್ಕಿದ್ದರೆ ಅಂತವರ ಮಾಹಿತಿಯನ್ನೂ ಕಡ್ಡಾಯವಾಗಿ ನೀಡಲೇಬೇಕಿದೆ. ರಾಜ್ಯದ ಜನರು ಸುರಕ್ಷತಾ ದೃಷ್ಟಿಯಿಂದ ಸಹಕರಿಸಬೇಕು ಎಂದು ಮುಖ್ಯಮಂತ್ರಿ ರಾಜ್ಯದ ಜನತೆಯ ಬಳಿ ಮನವಿ ಮಾಡಿದರು.