Advertisement

ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹೆಚ್ಚಿಸಿ

08:55 AM Dec 19, 2018 | |

ಸುವರ್ಣಸೌಧ(ವಿಧಾನಸಭೆ): ಶಾಸಕ ಪ್ರದೇಶಾಭಿವೃದ್ಧಿ ನಿಧಿ ಅನುದಾನವನ್ನು ಎರಡು ಕೋಟಿಯಿಂದ ಐದು ಕೋಟಿಗೆ ರೂ.ಗೆ
ಏರಿಸಬೇಕೆಂದು ಪಕ್ಷಾತೀತವಾಗಿ ಶಾಸಕರು ಸರ್ಕಾರಕ್ಕೆ ಮನವಿ ಮಾಡಿದರು. ಪ್ರಶ್ನೋತ್ತರ ವೇಳೆಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ವಿವಿಧ ಕಾಮಗಾರಿಗಳಿಗೆ ಅಗತ್ಯವಿರುವ ಜಲ್ಲಿ, ಸಿಮೆಂಟ್‌ ಸೇರಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಅದರೆ ಸರ್ಕಾರದಿಂದ ನೀಡುವ ಪ್ರದೇಶಾಭಿವೃದ್ಧಿ ಅನುದಾನ 2013-14ರಿಂದ ನಯಾ ಪೈಸೆ ಏರಿಕೆಯಾಗಿಲ್ಲ. ಎಲ್ಲ ವಿಧಾನಸಭಾ ಕ್ಷೇತ್ರಕ್ಕೂ ತಲಾ 5 ಕೋಟಿ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.

Advertisement

ಇದಕ್ಕೆ ಬಿಜೆಪಿ ಶಾಸಕರಾದ ಬಸವರಾಜ ಬೊಮ್ಮಾಯಿ, ಸಿ.ಸಿ.ಪಾಟೀಲ್‌, ಸಿ.ಟಿ.ರವಿ, ವಿ.ಸುನೀಲ್‌ ಕುಮಾರ್‌, ರೇಣುಕಾಚಾರ್ಯ, ಎಂ.ಪಿ.ಕುಮಾರಸ್ವಾಮಿ ಮೊದಲಾದವರು ಧ್ವನಿ ಗೂಡಿಸಿದರು. ಸ್ಪೀಕರ್‌ ಮಧ್ಯಪ್ರವೇಶಿಸಿ, ಮುಖ್ಯಮಂತ್ರಿ ಕೂಡ ಜನಪ್ರತಿ ನಿಧಿಯೇ ಆಗಿರುವುದರಿಂದ ಅನುದಾನ ಹೆಚ್ಚಿಸಬಹುದು. ಅದಕ್ಕಿಂತ ಮುಖ್ಯವಾಗಿ ಅವರ ಪತ್ನಿ ಕೂಡ ಸದಸ್ಯರೇ ಆಗಿದ್ದಾರೆ ಎಂದಾಗ ಸದನ ನಗೆಗಡಲಲ್ಲಿ ತೇಲಿತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, 2001-02ನೇ ಸಾಲಿನಿಂದ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅನುದಾನವನ್ನು 25 ಲಕ್ಷ ನಿಗದಿ ಮಾಡಲಾಗಿತ್ತು. 2007ರಲ್ಲಿ ಅದನ್ನು 1 ಕೋಟಿಗೆ ಏರಿಸಲಾಯಿತು. 2013-14ರಲ್ಲಿ ಅದನ್ನು ಎರಡು ಕೋಟಿ ನಿಗದಿ ಮಾಡಲಾಗಿತ್ತು. ಈಗಲೂ ಇದೇ ಅನುದಾನ ಬಿಡುಗಡೆ ಯಾಗುತ್ತಿದೆ. ಆದರೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ 940 ಕೋಟಿ ಹಳೇ ಹಣ ಬಾಕಿ ಇದೆ. ಅದನ್ನು ಬಳಕೆ ಮಾಡಿಕೊಳ್ಳಬಹುದು. ಈ ವರ್ಷ 600 ಕೋಟಿ ಬಾಕಿ ಉಳಿದಿದೆ. ಇದನ್ನು ಬಳಸುವ ಸಂಬಂಧ ಶಾಸಕರು ಗಮನ ಹರಿಸಬೇಕೆಂದು ಮನವಿ ಮಾಡಿದರು.

ಕೆ.ಎಸ್‌.ಈಶ್ವರಪ್ಪ ಪ್ರತಿಕ್ರಿಯಿಸಿ, ಆ ಹಣ ಕಾಮಗಾರಿಗಳಿಗೆ ಉಪಯೋಗಿಸಲು ಜಿಲ್ಲಾಧಿಕಾರಿ ಷರತ್ತು ಪೂರೈಸುವುದೇ ಕಷ್ಟವಾಗಿದೆ. ಷರತ್ತನ್ನು ಸರಳೀಕರಿಸಬೇಕು ಎಂದು ಹೇಳಿದರು. ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈ ಸರ್ಕಾರ ಐದು ಕೋಟಿ ಅನುದಾನ ನೀಡಲಿದೆ ಎಂಬ ವಿಶ್ವಾಸ ಇದೆ. ಬಾಕಿ ಇರುವ 940 ಕೋಟಿ ಹಣ ಪಡೆಯಲು ಎಸಿ, ತಹಸೀಲ್ದಾರರು ವಿಳಂಬ ಮಾಡುತ್ತಿದ್ದಾರೆ. ಈ
ಹಂತದಲ್ಲಿ ಬಿಲ್‌ ಪಾಸ್‌ ಮಾಡುವ ಕಾರ್ಯವನ್ನು ಸ್ಪೀಡ್‌ ಮಾಡಬೇಕು ಎಂದರು.

ವೇದವ್ಯಾಸ ಕಾಮತ್‌ ಪ್ರತಿಕ್ರಿಯಿಸಿ, ಹಿಂದಿನ ಶಾಸಕರು ಉಳಿಸಿ ಹೋಗಿರುವ 50 ಲಕ್ಷ ಅನುದಾನವನ್ನು ಹೊಸ ಶಾಸಕರಿಗೆ ಬಳಸಲು ಅವಕಾಶ ನೀಡಬೇಕು ಎಂದು ಕೋರಿದರು. ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮಾತನಾಡಿ, 2 ಕೋಟಿ ನಿಗದಿ ಮಾಡಿ 25 ಲಕ್ಷವನ್ನು ಕಂತಿನ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದರ ಬದಲಿಗೆ ಒಮ್ಮೆಗೆ 2 ಕೋಟಿ ಮಂಜೂರು ಮಾಡುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು.

ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಮಾಜಿ ಮುಖ್ಯ ಮಂತ್ರಿಗಳ ಸಲಹೆಯನ್ನು ಪರಿಶೀಲಿಸಿ, ಅನುಷ್ಠಾನಕ್ಕೆ ಬೇಕಾದ ಕ್ರಮ ತೆಗೆದುಕೊಳ್ಳುತ್ತೇನೆ. ಕಾಮಗಾರಿ, ಕಾರ್ಯ ಯೋಜನೆ ಅನುಷ್ಠಾನಕ್ಕೆ ಇರುವ ಷರತ್ತನ್ನು ಸರಳೀಕರಿಸಲಿದ್ದೇವೆ. ಬಯಲು ಸೀಮೆ ಅಭಿವೃದ್ಧಿ ಮಂಡಳಿ, ಮಲೆನಾಡು, ಕರಾವಳಿ ಅಭಿವೃದ್ದಿ ಮಂಡಳಿ ಹಾಗೂ ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ ಗೆ ಅಗತ್ಯ ಅನುದಾನ ಬಿಡುಗಡೆ ಮಾಡಿದ್ದೇವೆ. ಮುಂದಿನ ಬಜೆಟ್‌ನಲ್ಲಿ ಅಗತ್ಯ ಅನುದಾನ ಶಾಸಕರಿಗೆ ಬಿಡುಗಡೆ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.

Advertisement

ಭತ್ತ ಖರೀದಿ ನೋಂದಣಿ ಅವಧಿ ವಿಸ್ತರಣೆ ಬಗ್ಗೆ ಚರ್ಚಿಸಿ ತೀರ್ಮಾನ
ವಿಧಾನಸಭೆ:
ಭತ್ತ ಖರೀದಿ ನೋಂದಣಿಗೆ ಮತ್ತಷ್ಟು ದಿನ ಅವಕಾಶ ಕೊಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ತಿಳಿಸಿದ್ದಾರೆ. ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಭತ್ತ ಖರೀದಿ ಕೇಂದ್ರಗಳಲ್ಲಿ ನೋಂದಣಿ ಸ್ಥಗಿತಗೊಳಿಸಿರುವುದರಿಂದ ಕೆಲವು ರೈತರು ನೋಂದಣಿ
ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ಮಾಹಿತಿಯಿದ್ದು ಮತ್ತಷ್ಟು ದಿನ ನೋಂದಣಿಗೆ ಅವಕಾಶ ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು. 

ಇದಕ್ಕೂ ಮುನ್ನ ಮಾತನಾಡಿದ ಡಾ.ಯತೀಂದ್ರ ಸಿದ್ದರಾಮಯ್ಯ, ವರುಣಾ ಕ್ಷೇತ್ರದಲ್ಲಿ ಭತ್ತ ಖರೀದಿ ನೋಂದಣಿ ಮಾಡಿಸಿಕೊಳ್ಳಲು ಕೆಲವು ರೈತರಿಗೆ ಸಾಧ್ಯವಾಗಿಲ್ಲ ಎಂದು ತಿಳಿಸಿದರು. ವರುಣಾ ಕ್ಷೇತ್ರ ಸೇರಿ ಮೈಸೂರು ಭಾಗದಲ್ಲಿ ಸರ್ಕಾರವೇ ವಿತರಿಸಿದ ಜ್ಯೋತಿ ತಳಿ ಭತ್ತ ಖರೀದಿಸಲು ನಿರಾಕರಿಸಲಾಗುತ್ತಿದೆ. ವರುಣಾ ಕ್ಷೇತ್ರದ 15,450 ಹೆಕ್ಟೇರ್‌ ಪೈಕಿ 10,127 ಹೆಕ್ಟೇರ್‌ನಲ್ಲಿ ಜ್ಯೋತಿ ತಳಿಯ ಭತ್ತ ಬೆಳೆಯಲಾಗಿದೆ. ಇದೀಗ ಖರೀದಿಸಲಾಗುವುದಿಲ್ಲ, ಸಂಪುಟ ಉಪ ಸಮಿತಿ ಅನುಮತಿ ನೀಡಿಲ್ಲ ಎಂದು ಹೇಳಿದರೆ ಹೇಗೆ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಿವಶಂಕರೆಡ್ಡಿ, ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಶಹಬ್ಟಾಸ್‌ಗಿರಿ: ಡಾ.ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರದ ಭತ್ತ ಬೆಳೆಗಾರರ ಸಮಸ್ಯೆಯನ್ನು ಸದನಕ್ಕೆ ವಿವರಗಳೊಂದಿಗೆ ತಿಳಿಸಿದ್ದಕ್ಕೆ ಸ್ಪೀಕರ್‌ ರಮೇಶ್‌ಕುಮಾರ್‌ ಶಹಬ್ಟಾಸ್‌ ಗಿರಿ ನೀಡಿದರು. ತುಂಬಾ ಚೆನ್ನಾಗಿ ಮಾತನಾಡುತ್ತೀರಿ. ಶಹಬ್ಟಾಸ್‌, ವಿಷಯ ಚೆನ್ನಾಗಿ ಪ್ರಸೆಂಟ್‌ ಮಾಡಿದ್ದೀರಿ, ಇಷ್ಟು ದಿನ ಯಾಕೆ ಮಾತನಾಡಲಿಲ್ಲ ಎಂದರು. ಆಗ, ಯತೀಂದ್ರ ಅವರು ನನ್ನ 
ಕ್ಷೇತ್ರದ ವಿಷಯ ಇರಲಿಲ್ಲ, ಇದೀಗ ಸಮಸ್ಯೆ ಇತ್ತು ಪ್ರಸ್ತಾಪಿಸಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next