ಕಾಪು: ವ್ಯಕ್ತಿಯ ಜೀವನದಲ್ಲಿ ವಿದ್ಯಾರ್ಥಿ ಜೀವನ ಅತ್ಯಂತ ಪ್ರಾಮುಖ್ಯ ವಾಗಿದ್ದು, ಆತನ ಭವಿಷ್ಯವನ್ನು ರೂಪಿಸುವ ಮಹತ್ವದ ಹಂತವಾಗಿದೆ. ಟೀನೇಜ್ ದೈಹಿಕವಾಗಿ, ಮಾನಸಿಕವಾಗಿ ಬದಲಾವಣೆಯ ಹಂತವಾಗಿದ್ದು, ವಿವಿಧ ಸಮಸ್ಯೆಗಳು, ಚಟಗಳು, ಒತ್ತಡಗಳಿಗೆ ಗುರಿಯಾಗಿ ಮಾನಸಿಕ ನೆಮ್ಮದಿ, ಆರೋಗ್ಯ ಕೆಡುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪನ್ಮೂಲ ವ್ಯಕ್ತಿ ಬಿ. ಪುಂಡಲೀಕ ಮರಾಠೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ವಲಯದ ವತಿಯಿಂದ ಇನ್ನಂಜೆ ಎಸ್.ವಿ.ಎಚ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರ್ಪ ಡಿಸಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ನವೀನ್ ಅಮೀನ್ ಶಂಕರಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಇಂತಹ ಕಾರ್ಯಕ್ರಮದ ಅನಿವಾರ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪುಂಡರೀಕಾಕ್ಷ ಕೊಡಂಚ ಕಾರ್ಯಕ್ರಮ ಉದ್ಘಾಟಿಸಿದರು. ಒಕ್ಕೂಟದ ಪದಾಧಿಕಾರಿಗಳಾದ ಸುಲೋಚನಾ ಶೆಟ್ಟಿ, ಸಂಗೀತಾ ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ಯಶೋದಾ ಸ್ವಾಗತಿಸಿದರು. ಕಾಪು ವಲಯ ಮೇಲ್ವಿಚಾರಕಿ ಮಮತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.