Advertisement

ಸದಸ್ಯತ್ವ ಹೆಚ್ಚಿಸಿ, ಚುನಾವಣೆ ಗೆಲ್ಲಿ

10:43 PM Aug 03, 2019 | Lakshmi GovindaRaj |

ಬೆಂಗಳೂರು: ವಿಧಾನಸಭೆ, ಲೋಕಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆ, ಪುರಸಭೆ ಹಾಗೂ ಬಿಬಿಎಂಪಿ ಚುನಾವಣೆ ಗೆಲ್ಲಬೇಕಾದರೆ ಸದಸ್ಯತ್ವವನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಬೇಕೆಂದು ಬಿಜೆಪಿ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕರೆ ನೀಡಿದ್ದಾರೆ.

Advertisement

ಮಲ್ಲೇಶ್ವರದ ಬಿಜೆಪಿ ಕಚೇರಿ ಮುಂಭಾಗದಲ್ಲಿ ಶನಿವಾರ ಬಿಜೆಪಿ ಯುವಮೋರ್ಚಾದಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶಾದ್ಯಂತ ಆ.11ರವರೆಗೆ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯಲಿದೆ. ಕಳೆದ ಬಾರಿ 80 ಲಕ್ಷ ಸದಸ್ಯತ್ವ ಮಾಡಿದ್ದೆವು. 80 ಲಕ್ಷದ ಜತೆಗೆ ಈ ಬಾರಿ ಇನ್ನೂ 50 ಲಕ್ಷ ಹೊಸ ಸದಸ್ಯತ್ವ ಮಾಡುವ ಗುರಿ ಹೊಂದಿದ್ದೇವೆ. ಈಗಾಗಲೇ 12 ಲಕ್ಷ ಹೊಸ ಸದಸ್ಯರ ನೋಂದಣಿಯಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರ ಹಾಗೂ ಪ್ರತಿ ಬೂತ್‌ನಲ್ಲಿ 100 ಹೊಸ ಸದಸ್ಯರನ್ನು ನೋಂದಾಯಿಸಲು ಕಾರ್ಯಕರ್ತರಿಗೆ ಮನವಿ ಮಾಡಿದರು.

ಆ.3, 4 ಮತ್ತು 10,11ರಂದು ದಿನಪೂರ್ಣ ಸದಸ್ಯತ್ವ ಅಭಿಯಾನ ನಡೆಯಲಿದೆ. ಶಾಸಕರು, ಸಂಸದರು, ಪದಾಧಿಕಾರಿಗಳು, ಕಾರ್ಯಕರ್ತರು ಈ ನಾಲ್ಕು ದಿನದಲ್ಲಿ ರಾಜ್ಯದ ಉದ್ದಗಲಕ್ಕೂ ಸದಸ್ಯತ್ವ ನೋಂದಣಿ ಕೆಲಸ ಮಾಡಲಿದ್ದಾರೆ. ಸಂಘಟನೆಯ ಬಲದಿಂದ ವಿಧಾನಸಭೆ, ಲೋಕಸಭೆ, ಜಿಲ್ಲಾಪಂ, ತಾಪಂ, ನಗರಸಭೆ, ಪುರಸಭೆ, ಬಿಬಿಎಂಪಿ ಹಾಗೂ ಗ್ರಾಪಂ ಚುನಾವಣೆ ಗೆಲ್ಲಬೇಕು. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ನಡೆಯಬೇಕು ಎಂದರು.

ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನ ಮತ್ತು ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸೇರಿ 26 ಸ್ಥಾನ ಗೆಲ್ಲುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಸಂಘಟನೆಯ ಬಲದಿಂದ ಇದು ಸಾಧ್ಯವಾಗಿದೆ. ಹೊಸ ಸದಸ್ಯರ ಸಂಖ್ಯೆ ಹೆಚ್ಚಿದಂತೆ ಪಕ್ಷ ಬಲಷ್ಠವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

15 ಲಕ್ಷ ಹೊಸ ಸದಸ್ಯರ ನೋಂದಣಿ ಗುರಿ: ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಮಾತನಾಡಿ, ಕಳೆದ 5 ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗಿದ್ದು, ಲೋಕಸಭೆ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ನೀಡಿದ ಕರೆಯ ಮೇರೆಗೆ ದೇಶಾದ್ಯಂತ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಯುವಮೋರ್ಚಾದಿಂದ 15 ಲಕ್ಷ ಹೊಸ ಸದಸ್ಯರ ನೋಂದಣಿ ಗುರಿ ಹೊಂದಿದ್ದೇವೆ. ಯುವ ಮೋರ್ಚಾ ಹಾಗೂ ರಾಜ್ಯಘಟಕ ಒಟ್ಟಾಗಿ ಸದಸ್ಯತ್ವ ನೋಂದಣಿ ಗುರಿ ತಲುಪಲಿದ್ದೇವೆ ಎಂದರು.

Advertisement

ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌, ಸದಸ್ಯತ್ವ ಅಭಿಯಾನದ ಮುಖ್ಯಸ್ಥ ಎನ್‌.ರವಿಕುಮಾರ್‌, ಶಾಸಕರಾದ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ, ಎಸ್‌.ಆರ್‌ ವಿಶ್ವನಾಥ್‌, ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಅಬ್ದುಲ್‌ ಅಜೀಂ, ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವರ್ತೂರು ಶ್ರೀಧರ್‌, ಸ್ಲಂ ಮೋರ್ಚಾದ ಮುನಿಕೃಷ್ಣ, ಬಿಜೆಪಿ ಕಾರ್ಯದರ್ಶಿ ಭಾರತಿ ಮುಗ್ಧಂ, ಬೆಂಗಳೂರು ಮಹಾನಗರ ಯುವಮೋರ್ಚಾ ಅಧ್ಯಕ್ಷ ಸಪ್ತಗಿರಿ ಗೌಡ, ನವೀನ್‌ ರೆಡ್ಡಿ, ಎಚ್‌.ಆನಂದ್‌ ಮೊದಲಾದವರು ಇದ್ದರು.

ಸಿಎಂ ಭಾಗ್ಯ ಸಿಕ್ಕಿದೆ: ಪಕ್ಷ ಬಲಪಡಿಸುವುದರ ಜತೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಭಾಗ್ಯ ನನಗೆ ಸಿಕ್ಕಿದೆ. ನಿತ್ಯವೂ ಒಂದು ಗಂಟೆಯನ್ನೂ ವ್ಯರ್ಥ ಮಾಡದೆ ಕೆಲಸ ಮಾಡುತ್ತಿದ್ದೇನೆ. ಜಿಲ್ಲಾಧಿಕಾರಿ, ಸಿಇಒ, ಕಾರ್ಯದರ್ಶಿ ಮೊದಲಾದ ಅಧಿಕಾರಿಗಳ ಸಭೆ ನಡೆಸಿದ್ದೇನೆ. ರಾಜ್ಯಾದ್ಯಂತ ಬರಗಾಲದ ಛಾಯೆ ಇರುವುದರಿಂದ ಕಾರ್ಯದರ್ಶಿಗಳು ಪ್ರತಿ 15 ದಿನಕ್ಕೊಮ್ಮೆ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಮುಖ್ಯಕಾರ್ಯದರ್ಶಿಯವರು ತಿಂಗಳಿಗೆ ಒಂದು ಜಿಲ್ಲೆಗೆ ಭೇಟಿ ನೀಡಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಸಿಎಂ ತಿಳಿಸಿದರು.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ವರ್ಷಕ್ಕೆ 6 ಸಾವಿರ ರೂ.ಪಡೆಯುವ ರೈತರಿಗೆ ರಾಜ್ಯ ಸರ್ಕಾರದಿಂದ ವರ್ಷಕ್ಕೆ 4 ಸಾವಿರ ರೂ.ಗಳನ್ನು ಸೇರಿಸಿ ನೀಡುತ್ತೇವೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದಿದ್ದರೂ ರೈತರ ಹಿತದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಮೊದಲ ಕಂತಿನ ಹಣವನ್ನು 10ರಿಂದ 15 ದಿನದೊಳಗೆ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಲಿದ್ದೇನೆ. ರಾಜ್ಯದ ಯಾವೊಬ್ಬ ಬಡವರು ಮನೆ ಇಲ್ಲದೆ ಇರಬಾರದು ಎಂಬ ಉದ್ದೇಶದಿಂದ ವಸತಿ ನಿರ್ಮಾಣಕ್ಕೆ ವಿಶೇಷ ಯೋಜನೆ ಮಾಡುತ್ತಿದ್ದೇನೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎನ್ನುವ ಭೇದಭಾವ ಇಲ್ಲದೆ ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದರಿಂದ ಚುನಾವಣೆಗೆ ಯಾರು ನಿಲ್ಲಬೇಕು ಎಂಬುದನ್ನು ರಾಜ್ಯ ಮತ್ತು ರಾಷ್ಟ್ರ ನಾಯಕರು ಒಟ್ಟಾಗಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಪಕ್ಷದ ತೀರ್ಮಾನದಂತೆ ನಾವು ಕೆಲಸ ಮಾಡಲಿದ್ದೇವೆ. ಅನರ್ಹ ಶಾಸಕರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರ ಬಗ್ಗೆ ರಾಜ್ಯ ಘಟಕ ತೀರ್ಮಾನ ತೆಗೆದುಕೊಳ್ಳಲಿದೆ. ಅನರ್ಹರು ಬಿಜೆಪಿ ಸೇರುವುದಾಗಿ ಎಲ್ಲಿಯೂ ಹೇಳಿಲ್ಲ.
-ಬಿ.ವೈ.ವಿಜಯೇಂದ್ರ, ಪ್ರಧಾನ ಕಾರ್ಯದರ್ಶಿ, ಬಿಜೆಪಿ ಯುವಮೋರ್ಚಾ

Advertisement

Udayavani is now on Telegram. Click here to join our channel and stay updated with the latest news.

Next