Advertisement

ನಿರುದ್ಯೋಗ ದರದಲ್ಲಿ ಹೆಚ್ಚಳ: ಅವಗಣನೆ ಸಲ್ಲದು

11:12 PM Dec 01, 2022 | Team Udayavani |

ದೇಶದ ನಿರುದ್ಯೋಗ ದರವು ನವೆಂಬರ್‌ ತಿಂಗಳಲ್ಲಿ ಶೇ. 8 ತಲುಪಿದ್ದು ಇದು ಕಳೆದ ಮೂರು ತಿಂಗಳಲ್ಲೇ ಅತ್ಯಧಿಕ ಎಂದು ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (ಸಿಎಂಐಇ) ತಿಳಿಸಿದೆ.

Advertisement

ಗುರುವಾರದಂದು ಸಿಎಂಐಇ ನಿರುದ್ಯೋಗ ದರದ ಸಂಬಂಧ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿನ ನಿರುದ್ಯೋಗ ಪ್ರಮಾಣ ಏರಿಕೆಯಾಗಿದೆ. ಇದೇ ವೇಳೆ ಅಕ್ಟೋಬರ್‌ ತಿಂಗಳಲ್ಲಿ ಒಟ್ಟಾರೆ ನಿರುದ್ಯೋಗ ದರ ಶೇ. 7.71ರಷ್ಟಿತ್ತು. ನಗರ ಪ್ರದೇಶದಲ್ಲಿ ಅಕ್ಟೋಬರ್‌ನಲ್ಲಿ ನಿರುದ್ಯೋಗ ದರವು ಶೇ. 7.21ರಷ್ಟಿದ್ದರೆ ನವೆಂಬರ್‌ನಲ್ಲಿ ಏಕಾಏಕಿ ಶೇ. 8.96ಕ್ಕೆ ಏರಿಕೆಯಾಗುವ ಮೂಲಕ ಆತಂಕಕ್ಕೆ ಕಾರಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅಕ್ಟೋಬರ್‌ನಲ್ಲಿ ನಿರುದ್ಯೋಗ ಪ್ರಮಾಣ ಶೇ.8.04ರಷ್ಟಿದ್ದರೆ ಇದು ನವೆಂಬರ್‌ನಲ್ಲಿ ಶೇ.7.55ಕ್ಕೆ ಇಳಿಕೆಯಾಗಿದ್ದು ತುಸು ಆಶಾವಾದ ಮೂಡಿಸಿದೆ.

ಜಗತ್ತಿನೆಲ್ಲೆಡೆ ಅದರಲ್ಲೂ ಮುಖ್ಯವಾಗಿ ಐರೋಪ್ಯ ರಾಷ್ಟ್ರಗಳನ್ನು ಆರ್ಥಿಕ ಹಿಂಜರಿತದ ಭೀತಿ ಕಾಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವದ ಪ್ರಮುಖ ಕಂಪೆನಿಗಳು ಕಳೆದೆರಡು ತಿಂಗಳುಗಳಿಂದೀಚೆಗೆ ಉದ್ಯೋಗ ಕಡಿತದ ಕಾರ್ಯತಂತ್ರಕ್ಕೆ ಶರಣಾಗಿದ್ದು ಭಾರೀ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾರಂಭಿಸಿವೆ. ಮಾಹಿತಿ ತಂತ್ರಜ್ಞಾನ, ಇ-ಕಾಮರ್ಸ್‌ ಕಂಪೆನಿಗಳು ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ಸಂಕಷ್ಟದಿಂದ ಪಾರಾಗಲು ಈ ಕಾರ್ಯತಂತ್ರಕ್ಕೆ ಜೋತುಬಿದ್ದಿವೆ. ಆದರೆ ಜಗತ್ತಿನ ಬೇರೆ ಕಡೆಗಳಲ್ಲಿ ಈ ಉದ್ಯೋಗ ಕಡಿತದ ಭೀತಿ ಹೆಚ್ಚಿದ್ದರೂ ಭಾರತದಲ್ಲಿ ಅಷ್ಟಾಗಿ ಇಲ್ಲ ಎಂಬ ಮಾತುಗಳಿವೆ. ಆದರೂ ಎಚ್ಚರಿಕೆ ಅಗತ್ಯವಿದೆ.

ಜಿಎಸ್‌ಟಿ ಸಂಗ್ರಹ ಸತತ ಒಂಭತ್ತನೇ ತಿಂಗಳು ಕೂಡ 1.46 ಲ.ಕೋ.ರೂ. ಗಡುವನ್ನು ದಾಟಿದೆ. ಬಹುತೇಕ ವಲಯಗಳಲ್ಲಿ ದೇಶ ಸ್ವಾವಲಂಬ

ನೆಯ ಹಾದಿಯಲ್ಲಿದ್ದು ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ. ಈ ಬಾರಿಯ ಮುಂಗಾರು ಋತು ಉತ್ತಮವಾಗಿದ್ದರಿಂದ ಕೃಷಿ ಕ್ಷೇತ್ರದಲ್ಲಿ ಆಶಾದಾಯಕ ಬೆಳವಣಿಗೆಯನ್ನು ನಿರೀಕ್ಷಿಸಲಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ದೇಶದ ಆರ್ಥಿಕತೆ ಸದೃಢವಾಗಿದೆ ಎಂದು ವಿಶ್ಲೇಷಿಸಲಾಗುತ್ತಿರುವ ನಡುವೆಯೇ ಸೆಪ್ಟಂಬರ್‌ ತಿಂಗಳಿಗೆ ಅಂತ್ಯಗೊಂಡ ತ್ತೈಮಾಸಿಕದಲ್ಲಿ ದೇಶದ ಆರ್ಥಿಕತೆ ಒಂದಿಷ್ಟು ಹಿನ್ನಡೆ ಕಂಡಿದ್ದು ಜಿ.ಡಿ.ಪಿ. ಶೇ.6.3ಕ್ಕೆ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿ.ಡಿ.ಪಿ. ಶೇ. 8.4ರಷ್ಟಿತ್ತು. ಜಾಗತಿಕ ಬೆಳವಣಿಗೆಗಳನ್ನು ಅವಲೋಕಿಸಿದಾಗ ದೇಶದ ಆರ್ಥಿಕತೆ ಸ್ಥಿರವಾಗಿದ್ದು ಈ ಸಣ್ಣಪುಟ್ಟ ಏರಿಳಿತಗಳು ಸಹಜ ಎನ್ನಬಹುದಾದರೂ ಒಟ್ಟಾರೆ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ತುಸು ಎಚ್ಚರಿಕೆಯ ಹೆಜ್ಜೆ ಇಡುವುದು ಅನಿವಾರ್ಯ.

Advertisement

ಮತ್ತೂಂದೆಡೆ ಹಣದುಬ್ಬರ ನಿಯಂತ್ರಣಕ್ಕೆ ಆರ್‌ಬಿಐ ಶತಾಯಗತಾಯ ಪ್ರಯತ್ನಿಸುತ್ತಿರುವ ಹೊರತಾಗಿಯೂ ಅದು ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ಕೂಡ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಎಲ್ಲ ಬೆಳವಣಿಗೆಗಳ ಜತೆಯಲ್ಲಿ ನಿರುದ್ಯೋಗ ದರ ಹೆಚ್ಚುತ್ತಲೇ ಸಾಗಿರುವುದರಿಂದ ದೇಶದ ಒಟ್ಟಾರೆ ಆರ್ಥಿಕ ಸ್ಥಿತಿಯನ್ನು ಮೇಲ್ನೋಟದಲ್ಲಿ ವಿಶ್ಲೇಷಿಸಿ ಸದೃಢವಾಗಿದೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂಬುದನ್ನು ಕಳೆದೆರಡು ತಿಂಗಳುಗಳ ಅಂಕಿಅಂಶಗಳು ಸಾಬೀತುಪಡಿಸಿವೆ. ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣ ಮತ್ತು ಹಣದುಬ್ಬರ ನಿಯಂತ್ರಣಕ್ಕೆ ಪರ್ಯಾಪ್ತ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಬಿಸಿ ತುಸು ಜೋರಾಗಿಯೇ ದೇಶಕ್ಕೆ ತಟ್ಟಬಹುದು.

Advertisement

Udayavani is now on Telegram. Click here to join our channel and stay updated with the latest news.

Next