ಪಣಜಿ: ಗೋವಾದಲ್ಲಿ ಸದ್ಯ ಪ್ರವಾಸಿ ಸೀಜನ್ ಹಿನ್ನೆಲೆಯಲ್ಲಿ ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ದೇಶಾದ್ಯಂತ ಕೋವಿಡ್ ನಿರ್ಬಂಧಗಳು ತೆರವುಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ.
ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿರುವುದರಿಂದ ವಿಮಾನ, ರೈಲು, ಬಸ್ ಟಿಕೆಟ್ ದರ ಕೂಡ ಹೆಚ್ಚಳವಾಗಿದೆ.
ಸಾಮಾನ್ಯ ದಿನಗಳಲ್ಲಿ ಗೋವಾದಿಂದ ಬೆಂಗಳೂರು,ಮುಂಬಯಿ,ಚನ್ನೈಗೆ 3500 ರೂ ದಿಂದ 4500 ರೂಗಳಿದ್ದ ವಿಮಾನ ಟಿಕೆಟ್ ದರ ಈಗ 12000 ರೂಗಳಿಗೆ ತಲುಪಿದೆ. ಹೈದರಾಬಾದ್ ಟಿಕೆಟ್ ಕೂಡ 3000 ರೂ ನಿಂದ 9500 ರೂಗಳಿಗೆ ಏರಿಕೆಯಾಗಿದೆ. ಗೋವಾ-ಕೋಲ್ಕತಾ ವಿಮಾನ ಪ್ರಯಾಣ ದರ 6000 ರೂದಿಂದ 12200 ರೂಗಳಿಗೆ ಏರಿಕೆಯಾಗಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿರುವುದು ಪ್ರಯಾಣ ದರ ಹೆಚ್ಚಳಕ್ಕೆ ಕಾರಣ ಎಂದೇ ಹೇಳಲಾಗುತ್ತಿದೆ.
ಈ ಮೊದಲು 1500 ರಿಂದ 1800 ರೂಗಳಿದ್ದ ಗೋವಾ ಬೆಂಗಳೂರು ಖಾಸಗಿ ಬಸ್ ಟಿಕೆಟ್ ದರ ಈಗ 2500 ರೂಗಳಿಂದ 3500 ರೂಗಳಿಗೆ ತಲುಪಿದೆ. ನಾನ್ ಎಸಿ ಬಸ್ ದರ 2100 ರೂ. ಗೋವಾ-ಮುಂಬಯಿ ಮಾರ್ಗಕ್ಕೆ 1200 ರೂಗಳಿಂದ 2000 ರೂಗಳಿದ್ದ ಬಸ್ ಪ್ರಯಾಣ ದರ 3800 ರೂಗಳಿಂದ 4000 ರೂಗಳಿಗೆ ತಲುಪಿದೆ.
ಪ್ರವಾಸಿ ಸೀಜನ್ ಹಿನ್ನೆಲೆಯಲ್ಲಿ ಹಾಗೂ ಸದ್ಯ ಸರಣಿ ರಜೆಯ ಹಿನ್ನೆಯಲ್ಲಿ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಸದ್ಯ ಗೋವಾಕ್ಕೆ ಬರುವ ಇಚ್ಚೆ ಹೊಂದಿರುವ ಪ್ರವಾಸಿಗರು ದುಪ್ಪಟ್ಟು ದರ ತೆತ್ತು ಪ್ರವಾಣ ಬೆಳೆಸುವಂತಾಗಿದೆ.