ಎಚ್.ಡಿ.ಕೋಟೆ: ತಾಲೂಕಿನ ಕಬಿನಿ ಜಲಾಶಯದ ಒಡಲೀಗ ಮುಂಗಾರು ಮಳೆ ಆರಂಭಗೊಂಡ ಹಿನ್ನೆಲೆಯಲ್ಲಿ ಹಂತಹಂತವಾಗಿ ಭರ್ತಿಯಾಗುತ್ತಿದ್ದು, ಸೋಮವಾರ ಜಲಾಶಯದ ಒಳ ಹರಿವು 9 ಸಾವಿರ ಕ್ಯೂಸೆಕ್ ಇತ್ತು. ಮೇ ತಿಂಗಳ ಕೊನೆಯ ವಾರದಲ್ಲಿ ಆರಂಭಗೊಳ್ಳಬೇಕಾದ ಮುಂಗಾರು ಮಳೆ ಪ್ರಸಕ್ತ ಸಾಲಿನಲ್ಲಿ ಮಳೆಯೇ ಬರದೆ ಜನ ಕಂಗಾಲಾಗುವಂತೆ ಮಾಡಿತ್ತು.
ಬಳಿಕ ಕಳೆದ ಕೆಲ ದಿನಗಳಿಂದ ಹೇಳಿಕೊಳ್ಳುವಂತಹ ಮಳೆ ಅಗದಿದ್ದರೂ ಸ್ವಲ್ಪಮಟ್ಟಿಗೆ ಮಳೆಯಾಗುತ್ತಿದೆ. ಇದರಿಂದ ಮತ್ತು ನೆರೆಯ ಕೇರಳ ರಾಜ್ಯದ ವೈನಾಡಿನಲ್ಲಿ ಮಳೆ ಆರಂಭವಾಗಿದೆ. ಕಳೆದ 3 ದಿನಗಳ ಹಿಂದಿನಿಂದ ಜಲಾಶಯದ ಒಳ ಹರಿವಿನಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.
ದಿನೇದಿನೇ ಏರಿಕೆ: ಮೂರು ದಿನಗಳ ಹಿಂದೆ 3-4 ಸಾವಿರ ಕ್ಯೂಸೆಕ್ ಒಳ ಹರಿವು ಆರಂಭ ಗೊಂಡು ಭಾನುವಾರ 6 ಸಾವಿರ ಕ್ಯೂಸೆಕ್‌ಗೆ ಏರಿಕೆ ಯಾದ ಒಳ ಹರಿವು ಸೋಮವಾರ ಮುಂಜಾನೆಯಿಂದ 9 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಜಲಾಶಯದ ಒಳ ಹರಿವಿನಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗ ಳಿದ್ದು, ಜಲಾಶಯದ ಒಳ ಹರಿವಿನಲ್ಲಿಯೂ ಏರಿಕೆಯಾಗಲಿದೆ.
ತಡವಾದ ಮುಂಗಾರು: ಪ್ರತಿವರ್ಷ ಮೇ ಅಂತ್ಯ ಇಲ್ಲವೇ ಜೂನ್ ಮಾಹೆಯಲ್ಲಿ ಇಡೀ ರಾಜ್ಯದಲ್ಲಿಯೇ ಮೊದಲು ಭರ್ತಿಯಾಗುತ್ತಿದ್ದ ಜಲಾಶಯ, ಈ ವರ್ಷವೂ ಮುಂಗಾರು ಮಳೆ ತಡವಾಗಿ ಆರಂಭಗೊಂಡಿದೆ. ಜುಲೈ ತಿಂಗಳು ಆರಂಭಗೊಂಡರೂ ಮಳೆಯಾಗದೇ ಜಲಾಶಯ ಸಂಪೂರ್ಣ ಭರ್ತಿಯಾಗಲು ಹಲವು ದಿನ ಕಾಯಬೇಕಿದೆ.
ನೀರಿನ ಮಟ್ಟ ಎಷ್ಟು: ಜಲಾಶಯದ ಒಟ್ಟು ಗರಿಷ್ಠ ನೀರಿನ ಮಟ್ಟ 2,284 ಅಡಿಗಳಿದ್ದು, ಸೋಮವಾರ ಜಲಾಶಯದ ನೀರಿನ ಮಟ್ಟ 2,266.04 ಅಡಿಗಳಿತ್ತು. ಇನ್ನು ಜಲಾಶಯದ ನೀರಿನ ಮಟ್ಟ 2,267ಅಡಿಗಳಿದ್ದು, ಜಲಾಶಯದಿಂದ 1,500 ಸಾವಿರ ಕ್ಯೂಸೆಕ್ ನೀರನ್ನು ಪವರ್‌ಹೌಸ್ ಮೂಲಕ ಹೊರ ಹರಿಯ ಬಿಡಲಾಗಿದೆ. ಅಧಿಕ ಕ್ಯೂಸೆಕ್ ಕಳೆದ ಸಾಲಿನಲ್ಲಿ ಮುಂಗಾರು 2 ತಿಂಗಳು ತಡವಾಗಿ ಆರಂಭಗೊಳ್ಳುತ್ತಿದ್ದಂತೆಯೇ ಕಬಿನಿ ಜಲಾಶಯದ ಇತಿಹಾಸದಲ್ಲೇ ಹಿಂದೆಂದೂ ಕಂಡೂ ಕೇಳರಿಯದ 1ಲಕ್ಷ ಕ್ಯೂಸೆಕ್ ಒಳ ಹರಿವಿನೊಂದಿಗೆ ಅಷ್ಟೇ ಪ್ರಮಾಣದ ನೀರನ್ನು ತನ್ನೊಡಲಿಂದ 4 ಕ್ರಸ್ಟ್‌ಗೇಟ್ ಮೂಲಕ ಬೋರ್ಗರೆದು ಹೊರ ಬಿಡಲಾಗಿತ್ತು.
ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಇದೇ ಜುಲೈ ತಿಂಗಳಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ 2,261 ಅಡಿಗಳಿತ್ತು. ಒಳ ಹರಿವಿನಲ್ಲಿಯೂ ತೀವ್ರ ಇಳಿಕೆ ಇತ್ತು. ಈ ಬಾರಿ ಮಳೆ ತಡವಾಗಿ ಆರಂಭಗೊಂಡರೂ ದಿನೇದಿನೇ ಜಲಾಶಯದ ಒಳ ಹರಿವಿನಲ್ಲಿ ಹೆಚ್ಚಳ ಕಂಡು ಬರುತ್ತಿದ್ದು, ಅತೀ ಶೀಘ್ರದಲ್ಲಿ ಜಲಾಶಯ ಭರ್ತಿಯಾಗಿ ತಾಲೂಕಷ್ಟೇ ಅಲ್ಲದೇ ಕಬಿನಿ ಜಲಾಶಯ ಪಾತ್ರದ ರೈತರು ಸಮೃದ ಬೆಳೆ ಬೆಳೆಯುವಂತಾಗಬೇಕು.
* ಎಚ್.ಬಿ.ಬಸವರಾಜು