ಹೈದರಾಬಾದ್: ತಿರುಪತಿ ತಿರುಮಲ ದೇಗುಲಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆಯೇ, ದೇವಸ್ಥಾನ ಮಂಡಳಿ ದೇಗುಲದ ಅತಿಥಿಗೃಹ ಹಾಗೂ ಕಾಟೇಜ್‌ಗಳ ಶುಲ್ಕ ಏರಿಕೆ ಮಾಡಿರುವ ಕುರಿತು ತೀವ್ರ ಆಕ್ಷೇಪ ವ್ಯಕ್ತವಾಗಿದೆ.
750ರೂ. ಶುಲ್ಕವಿದ್ದ ನಾರಾಯಣ ಗಿರಿಯಲ್ಲಿರುವ ಅತಿಥಿಗೃಹಗಳಿಗೆ ಇನ್ನು ಮುಂದೆ 1,700 ರೂ. ಪಾವತಿಸಬೇಕಿದ್ದು, ಕಾಟೇಜ್ ಶುಲ್ಕ 2 ಸಾವಿರ ರೂ.ಗಳಿಗೆ ಟಿಟಿಡಿ ಏರಿಕೆ ಮಾಡಿದೆ.
ತಿರುಪತಿ ಅತಿ ಹೆಚ್ಚು ಭಕ್ತಾದಿಗಳು ಭೇಟಿ ನೀಡುವ ಧಾರ್ಮಿಕ ಕ್ಷೇತ್ರವಾಗಿದ್ದು, ಶುಲ್ಕ ಹೆಚ್ಚಳ ಭಕ್ತರಿಗೆ ಹೊರೆಯಾಗಲಿದೆ. ಟಿಟಿಡಿ ಭಕ್ತರ ಭಾವನೆಯನ್ನು ವ್ಯಾಪಾರವಾಗಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಆಂಧ್ರಪ್ರದೇಶ ಘಟಕದ ರಾಜ್ಯಾಧ್ಯಕ್ಷರಾದ ವೀರರಾಜು ಆರೋಪಿಸಿದ್ದಾರೆ.
ಈ ಕುರಿತು ಟಿಟಿಡಿ ಪ್ರತಿಕ್ರಿಯಿಸಿದ್ದು, ಎಸ್‌ವಿ ವಿಶ್ರಾಂತಿ ಗೃಹ ಹಾಗೂ ನಾರಾಯಣಗಿರಿ ಅತಿಥಿ ಗೃಹಗಳನ್ನು ನವೀಕರಣಗೊಳಿಸಲಾಗಿದೆ. ಅಲ್ಲದೇ, ಕಳೆದ 3 ದಶಕಗಳಿಂದ ಶುಲ್ಕ ಹೆಚ್ಚಳ ಮಾಡಿರದ ಕಾರಣ, ಈಗ ಶುಲ್ಕ ಹೆಚ್ಚಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದೆ.