Advertisement

ದೇಶಾದ್ಯಂತ ಜಿಎಸ್‌ಟಿ ಸಂಗ್ರಹದಲ್ಲಿ ಇನ್ನಷ್ಟು ಹೆಚ್ಚಳವಾಗಲಿ

10:06 PM Sep 01, 2022 | Team Udayavani |

ಸತತ ಆರನೇ ತಿಂಗಳು ಸರಕು ಮತ್ತು ಸೇವೆ ತೆರಿಗೆ ಸಂಗ್ರಹದಲ್ಲಿ ದಾಖಲೆ ಯಾಗಿದ್ದು, 1.40 ಲಕ್ಷ ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ತೆರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬೊಕ್ಕಸಕ್ಕೆ ಬಂದು ಬಿದ್ದಿದೆ. ಆಗಸ್ಟ್‌ನಲ್ಲಿ

Advertisement

1,43, 612 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಇದು ಶೇ. 28ರಷ್ಟು ಹೆಚ್ಚಳವಾಗಿರುವುದು ಗೋಚರಿಸಿದೆ.

ಹಬ್ಬಗಳ ಹಿನ್ನೆಲೆಯಲ್ಲಿ ಜನರಿಂದ ಹೆಚ್ಚು ಖರೀದಿ ಮತ್ತು ಕೊರೊ ನೋತ್ತರ ದಲ್ಲಿ ದೇಶದ ಕೈಗಾರಿಕೆಗಳು, ಉದ್ಯಮಗಳ ಚೇತರಿಕೆಯಿಂದಾಗಿ ಜಿಎಸ್‌ಟಿ ಸಂಗ್ರಹದಲ್ಲಿಯೂ ಹೆಚ್ಚಳವಾಗಿದೆ ಎಂದು ವಿತ್ತ ಸಚಿವಾಲಯ ಅಭಿಪ್ರಾಯಪಟ್ಟಿದೆ. ಆರ್ಥಿಕತೆ ದೃಷ್ಟಿಯಿಂದ ನೋಡುವುದಾದರೆ ಇದು ನಿಜವೇ ಸರಿ. ಕೊರೊನೋತ್ತರದಲ್ಲಿ ದೇಶದ ಆರ್ಥಿಕತೆ ಬೆಳವಣಿಗೆಯಾಗುತ್ತಿದ್ದು, ಜಿಎಸ್‌ಟಿ ಸಂಗ್ರಹದಲ್ಲಿ  ಹೆಚ್ಚಳವಾಗುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಆಗಸ್ಟ್‌ ತಿಂಗಳಿನಲ್ಲಿ ಒಟ್ಟು 1,43,612 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಯ ಜಿಎಸ್‌ಟಿ ಮೊತ್ತ 1.12 ಲಕ್ಷ ಕೋಟಿ ರೂ.ಗಳಾಗಿತ್ತು. ಹೀಗಾಗಿ ಅಲ್ಲಿಂದ ಇಲ್ಲಿಗೆ ಹೆಚ್ಚಳವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕಳೆದ ಆರು ತಿಂಗಳಿಂದಲೂ ಜಿಎಸ್‌ಟಿ ಸಂಗ್ರಹ 1.40 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚೇ ಇದೆ ಎಂಬುದು ಸಮಾಧಾನಕರ ಸಂಗತಿ. ಅದರಲ್ಲೂ ಎಪ್ರಿಲ್‌ ತಿಂಗಳಲ್ಲಿ ದಾಖಲೆ ಪ್ರಮಾಣದ 1.67 ಲಕ್ಷ ಕೋಟಿ ರೂ. ಸಂಗ್ರಹ ವಾಗಿತ್ತು. ಮಾರ್ಚ್‌ನಲ್ಲಿ 1.42 ಲಕ್ಷ ಕೋಟಿ ರೂ., ಎಪ್ರಿಲ್‌ನಲ್ಲಿ 1.67 ಲಕ್ಷ ಕೋಟಿ ರೂ., ಮೇನಲ್ಲಿ 1.40 ಲಕ್ಷ ಕೋಟಿ ರೂ., ಜೂನ್‌ನಲ್ಲಿ 1.44 ಲಕ್ಷ ಕೋಟಿ ರೂ., ಜುಲೈಯಲ್ಲಿ 1.48 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಹಿಂದಿನ ತಿಂಗಳಿಗೆ ಹೋಲಿಸಿದರೆ ಈ ತಿಂಗಳದ್ದು ಕೊಂಚ ಕಡಿಮೆಯೇ ಇದೆ. ಆದರೆ 1.40 ಲಕ್ಷ ಕೋಟಿ ರೂ. ಮೀರಿದೆ ಎಂಬುದು ಸಮಾಧಾನ.

Advertisement

ಆರ್ಥಿಕ ಕ್ಷೇತ್ರದ ಪರಿಣತರ ಪ್ರಕಾರ ಈ ಮಟ್ಟದ ಜಿಎಸ್‌ಟಿ ಸಂಗ್ರಹ ಆಶಾದಾಯಕ ಬೆಳವಣಿಗೆ. ಏಕೆಂದರೆ ಹೆಚ್ಚು ಜಿಎಸ್‌ಟಿ ಸಂಗ್ರಹವಾದಂತೆ ಆರ್ಥಿಕತೆಯ ಚಟುವಟಿಕೆ ಚೆನ್ನಾಗಿದೆ ಎಂದೇ ಅರ್ಥ. ಅಂದರೆ ಜನ ಹೆಚ್ಚೆಚ್ಚು ಖರೀದಿ ಮಾಡುತ್ತಿದ್ದಾರೆ, ಅವರ ಬೇಡಿಕೆಗೆ ತಕ್ಕಂತೆ ಉತ್ಪಾದಕ ವಲಯವೂ ಪೂರೈಕೆ ಮಾಡುತ್ತಿದೆ. ಈ ಕಾರಣದಿಂದಲೇ ದೇಶದ ಮೊದಲ ತ್ತೈಮಾಸಿಕದ ಜಿಡಿಪಿ ಕೂಡ ಶೇ. 13.5ರಷ್ಟು ಪ್ರಗತಿಯಾಗಿದೆ ಎಂದೇ ವಿಶ್ಲೇಷಿಸಲಾಗಿದೆ.

ಸದ್ಯ ಸರಕಾರದ ಆಶಯದಂತೆಯೇ ಮಾರುಕಟ್ಟೆ ಕೂಡ ಸಹಕರಿಸುತ್ತಿದ್ದು, ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದೆ. ಇನ್ನು ಮುಂದೆ ಕೇಂದ್ರ ಸರಕಾರ ತಡ ಮಾಡದೆ ರಾಜ್ಯ ಸರಕಾರಗಳ ಪಾಲನ್ನು ನೀಡಬೇಕು. ರಾಜ್ಯಗಳಿಗೆ ಸರಿಯಾದ ಸಮಯಕ್ಕೆ ಜಿಎಸ್‌ಟಿ ಪಾವತಿ ಮಾಡಿದರೆ ಅವುಗಳ ಬೊಕ್ಕಸಕ್ಕೂ ಹಣ ಸಂದಾಯವಾದಂತೆ ಆಗಿ, ರಾಜ್ಯಗಳಲ್ಲಿ ಹೆಚ್ಚೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು.

ಇದರ ನಡುವೆಯೇ ಜಿಡಿಪಿಯ ಪ್ರಗತಿಯೂ ಆಶಾ ದಾಯಕವಾಗಿಯೇ ಇದೆ. ಆದರೆ ಇದು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ ನಿರೀಕ್ಷೆಯನ್ನು ಮುಟ್ಟಿಲ್ಲ ಎಂಬುದು ಮಾತ್ರ ಬೇಸರದ ಸಂಗತಿ. ಈ ಮೊದಲ ತ್ತೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ. 15ರಷ್ಟಿರುತ್ತದೆ ಎಂದು ಆರ್‌ಬಿಐ ಅಂದಾಜಿಸಿತ್ತು. ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ಆರ್ಥಿಕ ತಜ್ಞರು ವಿಶ್ಲೇಷಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next